ಹೊಸ ಶಿಕ್ಷಣ ನೀತಿಯಿಂದ ಮಕ್ಕಳಲ್ಲಿ ಅಮೂಲಾಗ್ರ ಬದಲಾವಣೆ

bkt-27-1
Published on

ಬಾಗಲಕೋಟೆ: ಭಾರತವನ್ನು ಜಾಗತಿಕ ಜ್ಞಾನದ ಸೂಪರ್ ಪವರಾಗಿ ಪರಿವರ್ತಿಸಲು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಸಹಕಾರಿಯಾಗಿದೆ ಎಂದು ಬಾದಾಮಿ ತಾಲೂಕಿನ ಚೀರ್ಲಕೊಪ್ಪ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯ ಶಿವನಾಥನ್ ಹೇಳಿದರು.

ವಿದ್ಯಾಗಿರಿಯಲ್ಲಿರುವ ಕೇಂದ್ರೀಯ ವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಶಿಕ್ಷಣ ನೀತಿಯ-2020ರ ಅನುಷ್ಠಾನದ ವರ್ಷಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ಹೊಸ ರಾಷ್ಟ್ರೀಯ ನೀತಿಯನ್ನು ಕೇಂದ್ರೀಯ ವಿದ್ಯಾಲಯ ಮತ್ತು ಜವಾಹರ ನವೋದಯ ವಿದ್ಯಾಲಯಗಳಲ್ಲಿ ಅಳವಡಿಸಲಾಗಿದೆ. ಮಕ್ಕಳಲ್ಲಿರುವ ವಿಶಿಷ್ಟ ಸಾಮಥ್ರ್ಯವನ್ನು ಹೊರತರುವದರ ಜೊತೆಗೆ ಕಲಿಕೆಯ ಮೇಲೆ ಕೇಂದ್ರೀಕರಿಸಿ ಅಧ್ಯಯನದ ಬದಲಿಗೆ ವೈಜ್ಞಾನಿಕ ಮನೋಧರ್ಮಕ್ಕೆ ಪ್ರೋತ್ಸಾಹಿಸುವುದಾಗಿದೆ ಎಂದರು.

ಕೇಂದ್ರೀಯ ವಿದ್ಯಾಲಯದ ಹೆಚ್ಚುವರಿ ಪ್ರಭಾರ ಪ್ರಾಚಾರ್ಯರಾದ ಎಸ್.ಶ್ರೀನಿವಾಸಾ ರಾಜಾ ಅವರು ಶಿಕ್ಷಣ, ಪ್ರೋತ್ಸಾಹ ಮತ್ತು ಜ್ಞಾನೋದಯದ ಜೊತೆಗೆ ವಿದ್ಯಾರ್ಥಿಗಳಲ್ಲಿ 21ನೇ ಶತಮಾನದ ಕೌಶಲ್ಯವನ್ನು ಬೆಳೆಸುತ್ತದೆ ಎಂದರು. ಸರಕಾರ ಶಾಲಾ ಶಿಕ್ಷಣವನ್ನು ಮಾಧ್ಯಮಿಕ, ಮಧ್ಯಮ, ಪೂರ್ವಸಿದ್ದತಾ ಮತ್ತು ಅಡಿಪಾಯ ಎಂಬ ನಾಲ್ಕು ಭಾಗಗಳಾಗಿ ವಿಂಗಡಿಸಿರುವ ಹೊಸ ಶಿಕ್ಷಣ ಮತ್ತು ವೃತ್ತಾಕಾರದ ರಚನೆಯನ್ನು ಕೇಂದ್ರೀಯ ವಿದ್ಯಾಲಯದಲ್ಲಿ ಅವಳಡಸಲಾಗಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯ 3ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜುಲೈ 29 ರಂದು ನವದೆಹಲಿಯಲ್ಲಿ ಶಿಕ್ಷಣ ಸಚಿವಾಲಯ ಮತ್ತು ಕೌಶಲ್ಯ ಅಭಿವೃದ್ದಿ ಮತ್ತು ವಾಣಿಜ್ಯೋದ್ಯಮ ಸಚಿವಾಲಯ ಎರಡು ದಿನಗಳ ಕಾಲ ಆಯೋಜಿಸಿದೆ. ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿವಿಧ ಉಪಕ್ರಮಗಳಿಗೆ ಚಾಲನೆ ನೀಡಲಿದ್ದಾರೆಂದು ತಿಳಿಸಿದರು.

ಪ್ರಭಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಐ.ವಿ.ಬಸರಕೋಡ ಮಾತನಾಡಿ ಶಿಕ್ಷಣ ಕ್ಷೇತ್ರದ ಅಮೂಲಾಗ್ರ ಬದಲಾವಣೆಗೆ, ಕ್ರಾಂತಿಗೆ ಹೊಸ ಶಿಕ್ಷಣ ನೀತಿ ಸಹಕಾರಿಯಾಗಿದೆ. ಇದರಿಂದ ಮಕ್ಕಳಲ್ಲಿ ಕಲಿಕೆಯಲ್ಲಿ ಬದಲಾವಣೆ, ಅವರ ಸಾಮಥ್ರ್ಯವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ. ಈ ಹಿಂದೆ 1984 ರಲ್ಲಿ ಬಂದ ಶಿಕ್ಷಣ ನೀತಿಗಿಂತಲೂ ಶೈಕ್ಷಣಿಕ ಮಟ್ಟ ಸುಧಾರಿಸುವ, ಹೊಸ ಹೊಸ ಅವಿಷ್ಕಾರ ಮಾಡುವ ಶಿಕ್ಷಣವಾಗಿದೆ. ಮುಂಬರುವ ದಿನಗಳಲ್ಲಿ ಭಾರತ ದೇಶ ಈಡೀ ಪ್ರಪಂಚದಲ್ಲಿಯೇ ಶಿಕ್ಷಣ ಕ್ರಾಂತಿ ಮಾಡುವದರಲ್ಲಿ ಸಂಶಯವಿಲ್ಲ ಎಂದರು.

ಪವಿತ್ರಾ ದೇವಿ ಶೇಖ್ ಅವರು ಶಿಕ್ಷಣ ರಚನೆಯ ಬಗ್ಗೆ ವಿವರಿಸಿದರು. ಮೊದಲು 10+2 ಹಂತದ ಮಕ್ಕಳಿಗೆ ಮಾತ್ರ ಹೊಸ ಶಿಕ್ಷಣ ನೀತಿ ಅನ್ವಯವಾಗುತ್ತಿತ್ತು. ಈಗ ಅದನ್ನು ಪುನರ್ ರಚನೆ ಮಾಡಿ ಶಿಕ್ಷಣದ ಸ್ವರೂಪ ಮತ್ತು ಪಠ್ಯಕ್ರಮದ ಅವಶ್ಯಕತೆಗಳನ್ನು 5+3+3+4 ವಿನ್ಯಾಸಕ್ಕೆ ಆದರಿಸಿ, 5 ವರ್ಷಗಳ ಅಡಿಪಾಯದ ಹಂತ (2ನೇ ತರಗತಿವರೆಗೆ), 3 ವರ್ಷಗಳ ಪೂರ್ವಸಿದ್ದತಾ ಹಂತ (3 ರಿಂದ 5), 3 ವರ್ಷಗಳ ಮಧ್ಯಮ ಹಂತ (6 ರಿಂದ 8) ಮತ್ತು 4 ವರ್ಷಗಳ ದ್ವಿತೀಯ ಹಂತ (9 ರಿಂದ 12ವರೆಗೆ) ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ರಂಗನಾಥ ಇಂಟರ್ ನ್ಯಾಶನಲ್ ಪಬ್ಲಿಕ್ ಶಾಲೆಯ ಹಿರಿಯ ಶಿಕ್ಷಕ ಸಂಗಮೇಶ ಎಚ್. ಶ್ರೇಯಾ, ಸಂಗೀತಾ ಸೇರಿದಂತೆ ಇತರರು ಉಪಸ್ಥಿತರಿದ್ದರು. ಕೇಂದ್ರೀಯ ವಿದ್ಯಾಲಯದ ಗುರುಪ್ರಸಾದ ವಂಧಿಸಿದರು, ಶಿಕ್ಷಕಿ ಶಿರೀನಾ ಸುಲ್ತಾನ್ ಪ್ರಾರಂಭದಲ್ಲಿ ಸ್ವಾಗತಿಸಿ ನಿರೂಪಿಸಿದರು. ಕಾರ್ಯಕ್ರಮದ ನಂತರ ಕೇಂದ್ರಿಯ ವಿದ್ಯಾಲಯದ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net