

ಶಿವಮೊಗ್ಗ: ಭವಿಷ್ಯದ ಯುವ ಶಕ್ತಿಯ ಭಾರತ ನಿರ್ಮಾಣ ಮಾಡುವ ಶಿಕ್ಷಕರಿಗೆ ಸರ್ವಪಲ್ಲಿ ರಾಧಾಕೃಷ್ಣನ್ ಸದಾ ಅನುಕರಣೀಯರಾಗಿದ್ದಾರೆ. ಶಿಕ್ಷಕರಾಗಿದ್ದ ರಾಧಾಕೃಷ್ಣನ್ ಅವರು ದೇಶದ ಉನ್ನತ ಪದವಿ ಅಲಂಕರಿಸಿದ್ದು ಎಲ್ಲ ಶಿಕ್ಷಕರಿಗೂ ಸ್ಪೂರ್ತಿಯಾಗಿದೆ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತದಿಂದ ಶನಿವಾರ ನಗರದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಶಿಕ್ಷಕರೇ ಮಾರ್ಗದರ್ಶಿಗಳಾಗಿದ್ದಾರೆ. ಅವರನ್ನು ಸಮಾಜಮುಖಿಯಾಗಿಸುವ ಜವಾಬ್ದಾರಿ ಶಿಕ್ಷಕರದ್ದಾಗಿದೆ ಎಂದರು.
ಕೇಂದ್ರ ಸರ್ಕಾರ ಶಿಕ್ಷಣ ನೀತಿ-2020ನ್ನು ರೂಪಿಸಿರುವುದು ಭವಿಷ್ಯದಲ್ಲಿ ಅನುಕೂಲವಾಗಲಿದೆ. ಮಕ್ಕಳ ಕೌಶಲ ಹೆಚ್ಚಿಸಲು ಇದು ಸಹಕಾರಿ. ಮುಂದಿನ ದಿನಗಳಲ್ಲಿ ನಿರುದ್ಯೋಗ ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ಕಂಡುಕೊಳ್ಳಲು ಇದರಿಂದ ಸಾಧ್ಯವಾಗಲಿದೆ ಎಂದು ಹೇಳಿದರು.
ಶಿವಮೊಗ್ಗ ಜಿಲ್ಲಾ ಕೇಂದ್ರದಲ್ಲಿ ಎರಡು ಕೋಟಿ ರೂ. ವೆಚ್ಚದಲ್ಲಿ ಗುರುಭವನ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಇದರಿಂದ ಶಿಕ್ಷಕರ ವಿವಿಧ ಚಟುವಟಿಕೆಗಳಿಗೆ ಅನುಕೂಲವಾಗಲಿದೆ. ಜಿಲ್ಲೆಯ ಎಲ್ಲ ತಾಲೂಕು ಕೇಂದ್ರಗಳಲ್ಲೂ ಗುರುಭವನ ನಿರ್ವಿುಸುವ ಉದ್ಧೇಶ ರಾಜ್ಯ ಸರ್ಕಾರಕ್ಕಿದೆ ಎಂದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ಸೂಡಾ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್, ಡಿಸಿ ಕೆ.ಬಿ.ಶಿವಕುಮಾರ್, ಜಿಪಂ ಸಿಇಒ ಎಂ.ಎಲ್.ವೈಶಾಲಿ, ಡಿಡಿಪಿಐ ಎನ್.ಎಂ.ರಮೇಶ್, ಮೇಯರ್ ಸುವರ್ಣಾ ಶಂಕರ್, ಉಪಮೇಯರ್ ಸುರೇಖಾ ಮುರಳೀಧರ್, ಶಿಕ್ಷಕರ ಸಂಘದ ಪದಾಧಿಕಾರಿಗಳು ಇದ್ದರು.
ಖಾಸಗಿ ಶಾಲೆಗಳಿಗಿಂತಲೂ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಾಗಿ ಆಯ್ಕೆಯಾಗಲು ಹೆಚ್ಚಿನ ಸ್ಪರ್ಧೆ ಇರುತ್ತದೆ. ಅದರಲ್ಲಿ ಯಶಸ್ವಿಯಾದ ಶಿಕ್ಷಕರಿದ್ದರೂ ಸರ್ಕಾರಿ ಶಾಲೆಗಳಲ್ಲಿ ಕಡಿಮೆ ರ್ಯಾಂಕ್ ಬರುತ್ತಿರುವುದು ಬೇಸರದ ಸಂಗತಿ. ಇದನ್ನು ಶಿಕ್ಷಕರು ಹಾಗೂ ಉಪನ್ಯಾಸಕರು ಸವಾಲಾಗಿ ಪರಿಣಮಿಸಿ ರ‍್ಯಾಂಕಿಂಗ್ ಉತ್ತಮಪಡಿಸಬೇಕು.
| ಬಿ.ವೈ.ರಾಘವೇಂದ್ರ, ಲೋಕಸಭಾ ಸದಸ್ಯ