ಹೊಸ ವಿವಿಗಳಿಗೆ ಸಹಕಾರ ನೀಡಲು ಬದ್ಧ

03Kush01
Published on

ಕುಶಾಲನಗರ: ಕೊಡಗು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಅಶೋಕ ಸಂ. ಆಲೂರ ಅವರು, ನೂತನ ವಿಶ್ವವಿದ್ಯಾಲಯಗಳ ಕುಲಪತಿಗಳ ನಿಯೋಗದ ಜತೆಗೂಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಗೃಹ ಕಚೇರಿ ಕೃಷ್ಣದಲ್ಲಿ ಇತ್ತೀಚೆಗೆ ಭೇಟಿ ಮಾಡಿ ಶುಭ ಕೋರಿದರು.


ತಮ್ಮನ್ನು ಭೇಟಿಯಾದ ಕುಲಪತಿಗಳ ನಿಯೋಗವನ್ನುದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ದೇಶದ ಮತ್ತು ವಿದ್ಯಾರ್ಥಿಗಳ ಹಿತಕ್ಕಾಗಿ ಸಾಮಾಜಿಕ ಮೌಲ್ಯಗಳನ್ನು ಅಳವಡಿಸಿಕೊಂಡು, ವೈಜ್ಞಾನಿಕ ತಳಹದಿ ಮೇಲೆ ಉನ್ನತ ಶಿಕ್ಷಣವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಹೊಸ ವಿಶ್ವವಿದ್ಯಾಲಯಗಳಿಗೆ ಸಂಪೂರ್ಣ ಸಹಕಾರ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದರು.


ಎಲ್ಲ್ಲ ಹೊಸ ವಿಶ್ವವಿದ್ಯಾಲಯಗಳ ಕುಲಪತಿಗಳ ಪರವಾಗಿ ಪ್ರೊ.ಅಶೋಕ.ಸಂ.ಆಲೂರ ಮಾತನಾಡಿ, ಈ ವರ್ಷದ ಆಯವ್ಯಯದಲ್ಲಿ ಹೊಸ ವಿಶ್ವವಿದ್ಯಾಲಯಗಳಿಗೆ ಕನಿಷ್ಠ ಒಂದು ಮಹಿಳಾ ವಿದ್ಯಾರ್ಥಿ ನಿಲಯ ಮತ್ತು ಪುರುಷ ವಿದ್ಯಾರ್ಥಿ ನಿಲಯ, ಶೈಕ್ಷಣಿಕ ಕಟ್ಟಡ ಹಾಗೂ ಪ್ರಯೋಗಾಲಯಗಳ ಸುಧಾರಣೆಗೆ ಅನುದಾನ ಒದಗಿಸುವಂತೆ ಮನವಿ ಮಾಡಿದರು. ಮುಖ್ಯಮಂತ್ರಿಗಳು ಮನವಿಗೆ ಪೂರಕವಾಗಿ ಸ್ಪಂದಿಸಿದ್ದಾರೆ.


ನಿಯೋಗದಲ್ಲಿ ಕೊಪ್ಪಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಕೆ.ರವಿ, ಬಾಗಲಕೋಟೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ದೇಶಪಾಂಡೆ, ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಂಗಮಶೆಟ್ಟಿ, ಬೀದರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿರಾದಾರ್, ಹಾಸನ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ತಾರಾನಾಥ್, ಚಾಮರಾಜನಗರ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಗಂಗಾಧರ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net