

ಮೈಸೂರು: ಜಿಲ್ಲೆಗೆ ಒಂದು ವಿಶ್ವವಿದ್ಯಾಲಯ ಸ್ಥಾಪನೆ ಮಾಡಲಾಗಿದೆ. ಆದರೆ ಮೂಲಸೌಕರ್ಯವನ್ನೇ ಕಲ್ಪಿಸಿಕೊಟ್ಟಿಲ್ಲ ಎಂದು ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ ಕಳವಳ ವ್ಯಕ್ತಪಡಿಸಿದರು.
ಕರಾಮುವಿ ವಾಣಿಜ್ಯಶಾಸ್ತ್ರ ಅಧ್ಯಯನ ಮತ್ತು ಸಂಶೋಧನಾ ವಿಭಾಗದ ವತಿಯಿಂದ ಮುಕ್ತಗಂಗೋತ್ರಿಯ ಕಾವೇರಿ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ 5 ದಿನಗಳ ರಾಷ್ಟ್ರೀಯ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೂಲಸೌಕರ್ಯ ಕೊರತೆ ಎದುರಿಸುತ್ತಿರುವ ವಿಶ್ವವಿದ್ಯಾಲಯಗಳು ಅತಿಥಿ ಉಪನ್ಯಾಸರನ್ನೇ ನೆಚ್ಚಿಕೊಂಡಿದ್ದು, ಇವರಿಗೂ ಸಮರ್ಪಕವಾಗಿ ವೇತನ ನೀಡುತ್ತಿಲ್ಲ. ಹೀಗಾದರೆ ಉನ್ನತ ಶಿಕ್ಷಣ ಗುಣಮಟ್ಟ ಕಾಯ್ದುಕೊಳ್ಳುವುದು ಹೇಗೆ? ಸರ್ಕಾರ ಸಹ ಉನ್ನತ ಶಿಕ್ಷಣ ಅಭಿವೃದ್ಧಿಗೆ ಗಮನ ನೀಡದೆ ಇರುವುದೂ ಅನೇಕ ಅನುಮಾನ ಮೂಡಿಸಿದೆ ಎಂದು ಬೇಸರಿಸಿದರು.
ನೀತಿ-ನಿಯಮ ರೂಪಿಸುವುದರಲ್ಲೇ ನಾವುಗಳು ಪ್ರಖ್ಯಾತಿಯಾಗಿದ್ದೇವೆ. ಆದರೆ ಅದನ್ನು ಜಾರಿ ಮಾಡುವಲ್ಲಿ ಎಡವಿದ್ದೇವೆ. ಕಾರ್ಯರೂಪಕ್ಕೆ ತರಲು ಆದ್ಯತೆ ನೀಡದೆ ನಿರ್ಲಕ್ಷೃ ಮಾಡಲಾಗುತ್ತಿದೆ. ಇದರಿಂದಾಗಿ ಉನ್ನತ ಶಿಕ್ಷಣ ಅಭಿವೃದ್ಧಿಗೆ ಕೊಡಲಿಪೆಟ್ಟು ಬಿದ್ದಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಉನ್ನತ ಶಿಕ್ಷಣದಿಂದ ದೇಶ-ಸಮಾಜಾಭಿವೃದ್ಧಿ ಸಾಧ್ಯ. ಹೀಗಾಗಿ, ಪಾಶ್ಚಿಮಾತ್ಯ ದೇಶದಲ್ಲಿ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದರೆ ಭಾರತದಲ್ಲಿ ಇದಕ್ಕೆ ವಿರುದ್ಧವಾದ ಪರಿಸ್ಥಿತಿ ಇದೆ. ಉನ್ನತ ಶಿಕ್ಷಣಕ್ಕಾಗಿ ಅಗತ್ಯವಾಗಿ ಬೇಕಾಗಿರುವ ಮೂಲಸೌಕರ್ಯ, ತಂತ್ರಜ್ಞಾನ, ಅನುದಾನವನ್ನೇ ನೀಡುತ್ತಿಲ್ಲ. ಈ ವಿಷಯದಲ್ಲಿ ನಾವು ಬಹಳಷ್ಟು ಹಿಂದೆ ಉಳಿದಿದ್ದೇವೆ. ದೇಶ ಹಿಮ್ಮುಖವಾಗಿ ಚಲನೆ ಮಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ದೇಶದಲ್ಲಿ ಈಗಲೂ ಉನ್ನತ ಶಿಕ್ಷಣ ಪಡೆಯುವರರ ಸಂಖ್ಯೆ ಶೇ.8ಕ್ಕಿಂತ ಹೆಚ್ಚಾಗಿಲ್ಲ. ಇಲ್ಲಿ ಪದವಿ ಪಡೆದವರು ವಿದೇಶಕ್ಕೆ ವಲಸೆ ಹೋಗಿ ಅಲ್ಲಿ ಸಂಶೋಧನೆ, ಉತ್ತಮ ಸಂಬಳಕ್ಕೆ ದುಡಿಯುತ್ತಿದ್ದಾರೆ. ಇದು ದೇಶಕ್ಕೆ ನಷ್ಟ ಎಂದರು.
ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಸವಾಲು, ಸಮಸ್ಯೆಗಳು, ಕೊರತೆಗಳು ಸಾಮಾನ್ಯ ಎನಿಸಿವೆ. ಇದರಿಂದಾಗಿ ಸಂಶೋಧನೆ ಕುಂಠಿತವಾಗಬಾರದು. ಅದು ಮುಂದುವರಿದುಕೊಂಡು ಹೋಗಬೇಕು. ಈ ಮೂಲಕ ದೇಶಾಭಿವೃದ್ಧಿಗೆ ನೆರವಾಗಬೇಕು ಎಂದು ಹೇಳಿದರು.
ಬೆಂಗಳೂರಿನ ಚಾಣಕ್ಯ ವಿಶ್ವವಿದ್ಯಾಲಯದ ವಾಣಿಜ್ಯ ಮತ್ತು ನಿರ್ವಹಣ ವಿಭಾಗದ ಡೀನ್ ಡಾ.ವಿ.ರಾಜೇಶ್‌ಕುಮಾರ್ ಮಾತನಾಡಿ, ವರ್ಷಾನುಗಟ್ಟಲೇ ದತ್ತಾಂಶ ವಿಶ್ಲೇಷಣೆ ಕಾರ್ಯದಲ್ಲೇ ಬಹುತೇಕರು ಕಾಲ ಕಳೆಯುತ್ತಿದ್ದಾರೆ. ಹಾಗಾದರೆ, ಅದಕ್ಕೆ ಪಾರ್ಶ್ವವಾಯು ತಗಲಿದಂತಾಗಲಿದೆ. ಬರೀ ದತ್ತಾಂಶ ವಿಶ್ಲೇಷಣೆಯಷ್ಟೇ ಅಲ್ಲ, ಅದರ ಪ್ರಯೋಜನವೂ ಸಮಾಜಕ್ಕೆ ತಲುಪಿಸಬೇಕು ಎಂದರು.
ಕುಲಪತಿ ಪ್ರೊ.ಶರಣಪ್ಪ ವಿ.ಹಲಸೆ, ಕುಲಸಚಿವ ಪ್ರೊ.ಕೆ.ಎಲ್.ಎನ್.ಮೂರ್ತಿ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಬಿ.ಪ್ರವೀಣ, ಶೈಕ್ಷಣಿಕ ಡೀನ್ ಪ್ರೊ.ಎನ್.ಲಕ್ಷ್ಮೀ, ಹಣಕಾಸು ಅಧಿಕಾರಿ ಡಾ.ಖಾದರ್ ಪಾಷಾ, ಅಧ್ಯಯನ ವಿಭಾಗದ ಅಧ್ಯಕ್ಷೆ ಡಾ.ಸಿ.ಉಷಾ ಹಾಜರಿದ್ದರು.