

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿದ್ಯುತ್ ದೀಪಾಲಂಕಾರವನ್ನು ಈ ಬಾರಿ ಹೊಸ ವಿನ್ಯಾಸಗಳ ಜತೆಗೆ ಸುರಕ್ಷತೆಗೆ ಆದ್ಯತೆ ನೀಡುವ ಮೂಲಕ ಆಕರ್ಷಣೀಯವಾಗಿಸಲು ಆಸಕ್ತಿ ವಹಿಸಿ ಕೆಲಸ ಮಾಡಬೇಕು ಎಂದು ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ(ಸೆಸ್ಕ್) ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಮುನಿಗೋಪಾಲ್ ಅವರು ಅಧಿಕಾರಿಗಳು, ವಿದ್ಯುತ್ ಗುತ್ತಿಗೆದಾರರಿಗೆ ಸೂಚಿಸಿದರು.
ವಿಜಯನಗರ 2ನೇ ಹಂತದಲ್ಲಿರುವ ಸೆಸ್ಕ್ ಪ್ರಧಾನ ಕಚೇರಿಯಲ್ಲಿ ಈ ಸಂಬಂಧ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ದಸರಾ ಮಹೋತ್ಸವದಲ್ಲಿ ಮಾಡಲಾಗುವ ವಿದ್ಯುತ್ ದೀಪಾಲಂಕಾರ ಎಲ್ಲರ ಗಮನ ಸೆಳೆಯಲಿದೆ.
ಹೀಗಾಗಿ ಈ ಬಾರಿಯ ವಿದ್ಯುತ್ ದೀಪಾಲಂಕಾರವನ್ನು ಕಳೆದ ವರ್ಷಕ್ಕಿಂತ ಹೆಚ್ಚು ಆಕರ್ಷಕವಾಗಿ ಮಾಡಲು ದಸರಾ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಈ ನಿಟ್ಟಿನಲ್ಲಿ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದರು.
ದಸರಾ ದೀಪಾಲಂಕಾರ ವಿಶ್ವಮಟ್ಟದಲ್ಲಿ ಆಕರ್ಷಣೀಯ ಎನಿಸಿಕೊಳ್ಳಲು ಸೆಸ್ಕ್ ಜತೆಗೆ ವಿದ್ಯುತ್ ಗುತ್ತಿಗೆದಾರರು ಪ್ರಮುಖ ಕಾರಣರಾಗಿದ್ದಾರೆ. ಈ ಬಾರಿಯೂ ವಿದ್ಯುತ್ ದೀಪಾಲಂಕಾರದ ಬಗ್ಗೆ ನಿರೀಕ್ಷೆ ಹೆಚ್ಚಾಗಿದೆ.
ದಸರಾ ಆರಂಭದಲ್ಲಿ ಹಾಗೂ ದಸರಾ ಮುಗಿದ ಬಳಿಕವೂ ಎಲ್ಲರನ್ನೂ ಸೆಳೆಯುವ ದೀಪಾಲಂಕಾರವನ್ನು ಹೊಸತನದ ಜತೆಗೆ ಹೆಚ್ಚು ಆಕರ್ಷಕವಾಗಿ ಮಾಡುವ ಬಗ್ಗೆ ಈಗಿನಿಂದಲೇ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ. ಆರ್ಥಿಕವಾಗಿ ಹೊರೆಯಾಗದ ರೀತಿಯಲ್ಲಿ ದೀಪಾಲಂಕಾರ ಮಾಡುವುದು ಮುಖ್ಯ ಎಂದರು.
ದೀಪಾಲಂಕಾರದ ಅಂದವನ್ನು ಹೆಚ್ಚಿಸುವುದರ ಜತೆಗೆ ಸುರಕ್ಷತೆಗೂ ಆದ್ಯತೆ ನೀಡುವುದು ಮುಖ್ಯವಾಗಿದೆ. ದಸರಾ ವೇಳೆಯಲ್ಲಿ ಮಳೆಯಾಗುವ ಸಂಭವ ಹೆಚ್ಚಾಗಿರಲಿದೆ. ಆದ್ದರಿಂದ ಮಳೆ ಇನ್ನಿತರ ಸಂದರ್ಭಗಳಲ್ಲಿ ಯಾವುದೇ ತೊಂದರೆಗಳು ಉಂಟಾಗದಂತೆ ಎಚ್ಚರ ವಹಿಸಿ, ದೀಪಾಲಂಕಾರ ಮಾಡುವಲ್ಲಿ ಹೆಚ್ಚಿನ ಗಮನ ವಹಿಸಬೇಕೆಂದು ವಿದ್ಯುತ್ ಗುತ್ತಿಗೆದಾರರಿಗೆ ಸೂಚನೆ ನೀಡಿದರು.
ಜಂಬೂಸವಾರಿ ಮೆರವಣಿಗೆ ಸಾಗುವ ರಾಜಮಾರ್ಗದಲ್ಲಿ ಆಕರ್ಷಕ ದೀಪಾಲಂಕಾರ ಮಾಡಲು ಚಿಂತನೆ ನಡೆಸಲಾಗಿದೆ. ಜತೆಗೆ ನಗರದಲ್ಲಿರುವ ವೃತ್ತಗಳಲ್ಲಿ ವಿನೂತನ ರೀತಿಯಲ್ಲಿ ದೀಪಾಲಂಕಾರ ಮಾಡಬೇಕೆಂದು ನಿರ್ಧರಿಸಿದ್ದು, ಇದಕ್ಕಾಗಿ ಅಗತ್ಯವಿರುವ ರೂಪುರೇಷೆಗಳು, ಕೆಲವೊಂದು ಡಿಸೈನ್ ಈಗಾಗಲೇ ಸಿದ್ಧಪಡಿಸಲಾಗುತ್ತಿದೆ ಎಂದರು.
ದಸರಾ ಆರಂಭದಿಂದಲೇ ವಿದ್ಯುತ್ ದೀಪಾಲಂಕಾರಕ್ಕೂ ಚಾಲನೆ ದೊರೆಯಲಿದೆ. ಹೀಗಾಗಿ ದೀಪಾಲಂಕಾರ ಮಾಡುವ ಜವಾಬ್ದಾರಿ ಹೊತ್ತವರು ಕೊನೆಯ ಹಂತದವರೆಗೂ ಕೆಲಸ ಮಾಡದೆ ಪೂರ್ವಸಿದ್ಧತೆ ಮಾಡಿಕೊಳ್ಳಬೇಕಿದೆ. ಕಳೆದ ಬಾರಿ ಕೆಲವೊಂದು ರಸ್ತೆಗಳಲ್ಲಿ ಮಾಡಲಾಗಿದ್ದ ದೀಪಾಲಂಕಾರ ನಿರೀಕ್ಷಿತ ಮಟ್ಟದಲ್ಲಿ ಇರಲಿಲ್ಲ. ಹೀಗಾಗಿ ಈ ಬಾರಿ ಇಂತಹ ಸಮಸ್ಯೆಗಳು ಆಗದಂತೆ ನಿಗಾವಹಿಸಿ, ನಿಗದಿತ ಸಮಯಕ್ಕೆ ದೀಪಾಲಂಕಾರದ ಕೆಲಸ ಪೂರ್ಣಗೊಳಿಸಬೇಕು ಎಂದು ಸೂಚಿಸಿದರು.
ಯುವ ಸಂಭ್ರಮ ಹಾಗೂ ಯುವ ದಸರಾ ಕಾರ್ಯಕ್ರಮ ನಡೆಯುವ ಸ್ಥಳಗಳ ಸುತ್ತಲಿನ ರಸ್ತೆಗಳು ಹಾಗೂ ವೃತ್ತಗಳಲ್ಲಿ ದೀಪಾಲಂಕಾರ ಆಕರ್ಷಣೆಯಿಂದ ಕೂಡಿರಬೇಕಿದೆ. ಯುವ ಸಂಭ್ರಮ ಕಾರ್ಯಕ್ರಮ ದಸರಾ ಆರಂಭಕ್ಕೂ ಮೊದಲೇ ನಡೆಯುವುದರಿಂದ ಈ ಸ್ಥಳದಲ್ಲಿ ಮಾಡಲಾಗುವ ದೀಪಾಲಂಕಾರ ಎಲ್ಲರ ಆಕರ್ಷಣೆ ಮತ್ತು ಕುತೂಹಲವನ್ನು ಹೆಚ್ಚುವಂತೆ ಮಾಡುತ್ತದೆ. ಆದ್ದರಿಂದ ಈ ಭಾಗಗಳಲ್ಲಿ ದೀಪಾಲಂಕಾರ ಮಾಡುವವರು ಇದನ್ನು ಗಮನದಲ್ಲಿಟ್ಟುಕೊಂಡು ದೀಪಾಲಂಕಾರ ಮಾಡಬೇಕಿದೆ ಎಂದು ಸಲಹೆ ನೀಡಿದರು.
ಕಳೆದ ವರ್ಷದ ದಸರಾ ಸಂದರ್ಭದಲ್ಲಿ ನಡೆದ ಡ್ರೋನ್ ಪ್ರದರ್ಶನ ಎಲ್ಲರ ಆಕರ್ಷಣೆ ಮತ್ತು ಮೆಚ್ಚುಗೆ ಪಡೆದಿತ್ತು. ಹೀಗಾಗಿ ಡ್ರೋನ್ ಶೋ ಕುರಿತಂತೆ ಜನರ ನಿರೀಕ್ಷೆಗಳು ಹೆಚ್ಚಾಗಿರಲಿದೆ. ಆದ್ದರಿಂದ ಈ ಬಾರಿಯ ಡ್ರೋನ್ ಶೋ ಕಾರ್ಯಕ್ರಮದ ಮೆರುಗು ಹೆಚ್ಚಿಸುವ ನಿಟ್ಟಿನಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಡ್ರೋನ್ ಬಳಸಿ ಹೆಚ್ಚು ಆಕರ್ಷಣೀಯವಾಗಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಕೆ.ಎಂ. ಮುನಿಗೋಪಾಲ್ ರಾಜು ತಿಳಿಸಿದರು.