ಹೊಸ ವರ್ಷಾಚರಣೆಗೆ ಬಂಡೀಪುರದಲ್ಲಿ ನಿರ್ಬಂಧ

27-GPT-1
Published on

ಗುಂಡ್ಲುಪೇಟೆ: ಹೊಸ ವರ್ಷಾಚರಣೆಗೆ ಬಂಡೀಪುರದಲ್ಲಿ ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಅರಣ್ಯ ಇಲಾಖೆ ತಿಳಿಸಿದೆ.

ಈ ಬಾರಿಯೂ ಅರಣ್ಯ ಇಲಾಖೆ ಹೊಸ ವರ್ಷಾಚರಣೆಯ ಸಂದರ್ಭದಲ್ಲಿ ಪ್ರವಾಸಿಗರಿಗೆ ವಸತಿಗೃಹಗಳನ್ನು ನೀಡದಿರಲು ನಿರ್ಧರಿಸಿದ್ದು, ಡಿ.31 ಮತ್ತು ಜ.1ರಂದು ಅರಣ್ಯ ಇಲಾಖೆಗೆ ಸೇರಿದ ವಸತಿಗೃಹಗಳು, ಕಾಟೇಜ್‌ಗಳು ಪ್ರವಾಸಿಗರಿಗೆ ಲಭ್ಯವಿರುವುದಿಲ್ಲ.

ಪ್ರತಿ ವರ್ಷವೂ ಹೊಸ ವರ್ಷ ಆಚರಣೆ ಸಂದರ್ಭದಲ್ಲಿ ಮೋಜು-ಮಸ್ತಿ ಮಾಡಲೆಂದು ರಾಜ್ಯದ ವಿವಿಧ ಭಾಗಗಳಿಂದ ಬಂಡೀಪುರಕ್ಕೆ ಆಗಮಿಸುವ ಪ್ರವಾಸಿಗರಿಂದ ವನ್ಯಜೀವಿಗಳ ಸಹಜ ಜೀವನಕ್ಕೆ ಧಕ್ಕೆಯಾಗುತ್ತಿದ್ದ ಹಿನ್ನೆಲೆಯಲ್ಲಿ ಕಳೆದ ಏಳು ವರ್ಷಗಳಿಂದ ಅರಣ್ಯ ಇಲಾಖೆ ತನ್ನ ಅತಿಥಿಗೃಹಗಳನ್ನು ಬಾಡಿಗೆಗೆ ಕೊಡುವುದು ನಿರ್ಬಂಧಿಸುತ್ತಿದೆ.

ಈ ಬಾರಿ ಸಹ ಅರಣ್ಯ ಇಲಾಖೆಯ ವಸತಿಗೃಹಗಳ ಬುಕಿಂಗ್ ಬ್ಲಾಕ್ ಮಾಡಿದೆ. ಅಕ್ಕಪಕ್ಕದ ರೆಸಾರ್ಟ್‌ಗಳಲ್ಲಿಯೂ ಅಬ್ಬರದ ಸಂಗೀತ ಹಾಗೂ ಕಣ್ಣುಕೋರೈಸುವ ದೀಪ ಅಳವಡಿಸಬಾರದು ಹಾಗೂ ಅಬ್ಬರದ ವರ್ಷಾಚರಣೆ ಮಾಡಲು ಅವಕಾಶ ನೀಡಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಸಫಾರಿ ಎಂದಿನಂತೆ ನಡೆಯಲಿದೆ ಎಂದು ಹುಲಿ ಯೋಜನೆಯ ನಿರ್ದೇಶಕ ಎಸ್.ಪ್ರಭಾಕರನ್ ವಿಜಯವಾಣಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net