

ಅರಕಲಗೂಡು: ಹೊಸ ವರ್ಷದ ಅಂಗವಾಗಿ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಜೋಡೆತ್ತಿನ ಗಾಡಿ ಓಟದ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು.
ರಾಜ್ಯ ರೈತ ಸಂಘ ಹಸಿರು ಸೇನೆ ಗೌರವಾಧ್ಯಕ್ಷ ಸಿ.ಡಿ. ದಿವಾಕರ ಗೌಡ ಅಭಿಮಾನಿ ಬಳಗದ ವತಿಯಿಂದ 2 ದಿನಗಳ ಕಾಲ ಆಯೋಜಿಸಿದ್ದ ಜೋಡೆತ್ತಿನ ಗಾಡಿ ಓಟ ಸ್ಪರ್ಧೆಯಿಂದ ಪಟ್ಟಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಮದ್ದೂರು, ಕೊಳ್ಳೇಗಾಲ, ಟಿ ನರಸೀಪುರ, ಚಿತ್ರದುರ್ಗ, ತರೀಕೆರೆ, ಶಿವಮೊಗ್ಗ, ಚಿಕ್ಕಮಗಳೂರು, ಮೈಸೂರು ಭಾಗದಿಂದ ಸುಮಾರು 20ಕ್ಕೂ ಹೆಚ್ಚು ಜೊತೆ ಎತ್ತುಗಳು ಪಾಲ್ಗೊಂಡಿದ್ದವು.
ರೈತ ಸಂಘದ ಗೌರವಾಧ್ಯಕ್ಷ ದಿವಾಕರ ಗೌಡ ಅವರು ಜೋಡೆತ್ತಿನ ಗಾಡಿ ಓಟದಸ್ಪರ್ಧೆಗೆ ಚಾಲನೆ ನೀಡಿ, ಬಳಿಕ ಮಾತನಾಡಿದ ಅವರು, ಟಿಲ್ಲರ್, ಟ್ರ್ಯಾಕ್ಟರ್ ಬಂದ ಬಳಿಕ ಹಳ್ಳಿಭಾಗದಲ್ಲಿ ರೈತರು ಎತ್ತುಗಳನ್ನು ಸಾಕುವವರ ಸಂಖ್ಯೆ ಕಡಿಮೆಯಾಗಿದೆ. ಸರ್ಕಾರ ಹಸುಗಳನ್ನು ಸಾಕಲು ಹೈನುಗಾರಿಕೆಗೆ ಹೆಚ್ಚಿನ ಪ್ರೋತ್ಸಹ ನೀಡಬೇಕು ಎಂದರು.
ಎತ್ತಿನಗಾಡಿ ಓಟ ಸ್ಪರ್ಧೆ ಆಯೋಜಿಸುತ್ತಿರುವುದರಿಂದ ಕೆಲವರು ಎತ್ತುಗಳನ್ನು ಸಾಕಿರಬಹುದು. ಇಂದು ಹಳ್ಳಿಗಳಲ್ಲಿ ಎತ್ತಿನಗಾಡಿಗಳೇ ಇಲ್ಲವಾಗಿವೆ ಎಂದ ಅವರು, ಮುಂದಿನ ದಿನಗಳಲ್ಲೂ ರೈತಾಪಿ ವರ್ಗದ ಕ್ರೀಡಾಕೂಟವನ್ನು ಮುಂದುವರೆಸಿಕೊಂಡು ಹೋಗುವುದಾಗಿ ತಿಳಿಸಿದರು.
ಬಹುಮಾನ ವಿತರಣೆ: ಚಿಕ್ಕಮಗಳೂರಿನ ಎಂ. ಡಿ. ಸುಲ್ತಾನ ಪ್ರಥಮ, ಜೈ ಆಂಜನೇಯ ದ್ವಿತೀಯ, ಕೋಟೆ ಸತೀಶ್ ತೃತೀಯ, ಟಿ. ನರಸೀಪುರದ ಕರಿಯ ಮೈಲಾರಿ ನಾಲ್ಕನೇ ಹಾಗೂ ಮರಿತ್ವಗೌಡ 5ನೇ ಬಹುಮಾನ ಪಡೆದುಕೊಂಡಿತು.
ರೈತ ಸಂಘದ ಅಧ್ಯಕ್ಷ ಯೋಗೇಶ್,ಆಟೋ ಚಾಲಕರ ಸಂಘದ ಪುಟ್ಟರಾಜು, ಯುವಕಮಿತ್ರ ಬಳಗದ ಉಮೇಶ್, ದರ್ಶನ್, ಕಾರ್ತಿಕ್,ರವಿ, ಮಂಜು, ಲೋಕೇಶ್ ಮತ್ತಿತರಿದ್ದರು.