ಹೊಸ ವರ್ಷಕ್ಕೆ ಭರ್ಜರಿ ಸ್ವಾಗತ

h31-Dharwad dance 1
Published on

ಹುಬ್ಬಳ್ಳಿ: ಡಿ. 31ರ ಮಧ್ಯರಾತ್ರಿ 12 ಗಂಟೆಗೆ ಗಡಿಯಾರದ ಮುಳ್ಳಿನ ಸ್ಪರ್ಶವಾಗುತ್ತಿದ್ದಂತೆ ಎಲ್ಲೆಡೆ ಕೇಕೆ, ಚಪ್ಪಾಳೆ, ಹಾಡು, ಡಾನ್ಸ್, ಶಿಳ್ಳೆ.., ಹ್ಯಾಪಿ ನ್ಯೂ ಇಯರ್... ಗುಡ್​ಬೈ 2019, ವೆಲ್​ಕಮ್ 2020 ಎಂಬ ಕಿವಿಗಡಚಿಕ್ಕುವ ಘೋಷಣೆ, ನಭೋಮಂಡಲಕ್ಕೆ ಜಿಗಿದು ಸ್ಪೋಟಗೊಂಡು ಬೆಳಕಿನ ಚಿತ್ತಾರ ಮೂಡಿಸಿದ ಪಟಾಕಿಗಳು... ಶುಭಾಶಯ ವಿನಿಮಯ...

ನಗರದಲ್ಲಿ ಹೊಸ ವರ್ಷವನ್ನು ಪ್ರತಿ ವರ್ಷದಂತೆಯೇ ಅದ್ದೂರಿಯಾಗಿ ಬರಮಾಡಿಕೊಂಡಿದ್ದು ಹೀಗೆ.

ನಗರದ ಡೆನಿಸನ್ಸ್ ಹೋಟೆಲ್​ನಲ್ಲಿ ಹೊಸ ವರ್ಷಾಚರಣೆಗಾಗಿ ಹಾಡು-ನೃತ್ಯ ಸಹಿತ ಸಂತೋಷ ಕೂಟ ಏರ್ಪಡಿಸಲಾಗಿತ್ತು. ಸಯಕ್ಲಾನ್ ಡಾನ್ಸ್ ಗ್ರೂಪ್ ಸದಸ್ಯರು, ಡಿಜೆ ಕುಶಾಲ್ ಸೇರಿ ವೇದಿಕೆಗೆ ಆಗಮಿಸಿದ ಕಲಾವಿದರು ಹಿಂದಿ, ಕನ್ನಡ, ಪಂಜಾಬಿ ಹಾಡುಗಳನ್ನು ಹಾಡಿ, ನರ್ತಿಸಿ ರಂಜಿಸಿದರು.

ಪಾಲ್ಗೊಂಡಿದ್ದ ಸಾವಿರಾರು ಜನರು ಅಬ್ಬರದ ಸಂಗೀತಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಸಂತೋಷ ಪಟ್ಟರು. ನಗರದ ಓಣಿಗಳಲ್ಲಿ ಕುಟುಂಬದವರು, ಸ್ನೇಹಿತರು, ಸಮಾನ ಮನಸ್ಕರು, ಹೀಗೆ ತಂಡೋಪತಂಡವಾಗಿ ಒಂದೆಡೆ ಸೇರುವ ಮೂಲಕ ಹೊಸ ವರ್ಷವನ್ನು ತಮ್ಮದೇ ರೀತಿಯಲ್ಲಿ ಆಚರಿಸಿದರು.

ಹೊಸ ವರ್ಷಕ್ಕೆಂದೇ ನಗರದ ಹಲವು ಕಡೆ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗಿತ್ತು. ಡಿಜೆ ಸೌಂಡ್​ಗೆ ಹೆಜ್ಜೆ ಹಾಕುವ ಮೂಲಕ ಕುಣಿದು ಕುಪ್ಪಳಿಸಿದರು. ಬಹುತೇಕ ಯುವಪಡೆಯೇ ಎಲ್ಲೆಡೆ ಸಂಭ್ರಮಾಚರಣೆ ಮಾಡುತ್ತಿರುವುದು ಕಂಡುಬಂತು. ಬಾರ್ ಆಂಡ್ ರೆಸ್ಟೋರೆಂಟ್​ಗಳು ಸಂಜೆ ವೇಳೆಗೆಲ್ಲ ತುಂಬಿ ತುಳುಕುತ್ತಿದ್ದವು. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬಾರ್​ಗಳು ತಡರಾತ್ರಿವರೆಗೆ ತೆರೆದಿದ್ದವು. ನಗರ, ಗ್ರಾಮೀಣ ಪ್ರದೇಶ ಎನ್ನದೇ ಎಲ್ಲ ಕಡೆ ರಸ್ತೆ, ಗೋಡೆಗಳ ಮೇಲೆ ಹ್ಯಾಪಿ ನ್ಯೂ ಈಯರ್ ಎಂದು ಬರೆಯಲಾಗಿತ್ತು. ಪೊಲೀಸ್ ಕಮಿಷನರೇಟ್ ವತಿಯಿಂದ ನಗರದಲ್ಲಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು. ಆರೋಗ್ಯ ಕವಚ ವಾಹನವನ್ನು ಚನ್ನಮ್ಮ ವೃತ್ತ ಸೇರಿ ಕೆಲವೆಡೆ ಸನ್ನದ್ಧ ಸ್ಥಿತಿಯಲ್ಲಿ ಇಡಲಾಗಿತ್ತು.

ವಿಶೇಷ ಪ್ರಾರ್ಥನೆ: ರಾತ್ರಿ 12 ಗಂಟೆಯಾಗುತ್ತಿದ್ದಂತೆ ಚರ್ಚ್​ಗಳ ಘಂಟೆಗಳು ಮೊಳಗಿದವು. ಫಾದರ್​ಗಳ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಲೋಕ ಕಲ್ಯಾಣಕ್ಕಾಗಿ ಪ್ರಾರ್ಥಿಸಲಾಯಿತು. ಪ್ರತಿ ಚರ್ಚ್​ನಲ್ಲೂ ನೂರಾರು ಜನ ಪಾಲ್ಗೊಂಡು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು.

ಪೂಜೆ, ಭಜನೆ: ಹುಬ್ಬಳ್ಳಿ ಕೋರ್ಟ್ ವೃತ್ತದ ಸಾಯಿ ಮಂದಿರದಲ್ಲಿ ರಾತ್ರಿ 12ರವರೆಗೆ ವಿಶೇಷ ಪೂಜೆ, ಭಜನೆ ಏರ್ಪಡಿಸಲಾಗಿತ್ತು. ಇತರ ಕೆಲವು ದೇವಾಲಯಗಳಲ್ಲಿ ಸಹ ವಿಶೇಷ ಪೂಜೆ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net