ಹೊಸ ವರ್ಷಾಚರಣೆಯಲ್ಲಿ ಮಿಂದೆದ್ದ ಜನರು

7
Published on


ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಜನರು ಮಂಗಳವಾರ 2020 ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಂಡರು.
ಹೊಸ ವರ್ಷ ಪ್ರಯುಕ್ತ ನಗರದಲ್ಲಿ ಮಧ್ಯರಾತ್ರಿವರೆಗೆ ಸಡಗರ, ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ನಗರಕ್ಕೆ ಆಗಮಿಸಿ ಈ ಸಂಭ್ರಮದಲ್ಲಿ ಭಾಗಿಯಾದರು.
2019ಕ್ಕೆ ಬೀಳ್ಕೊಟ್ಟು 2020 ಅನ್ನು ಸ್ವಾಗತಿಸಲು ನಗರದ ಹಲವು ಹೋಟೆಲ್, ಕ್ಲಬ್‌ಗಳಲ್ಲಿ ರಾತ್ರಿ ವಿಶೇಷ ಮನರಂಜನಾ ಕಾರ್ಯಕ್ರ ಮಗಳನ್ನು ಹಮ್ಮಿಕೊಳ್ಳಲಾಗಿತ್ತು. ರಾತ್ರಿ 12 ಗಂಟೆ ಆಗುತ್ತಿದ್ದಂತೆಯೇ ಪಟಾಕಿಗಳನ್ನು ಸಿಡಿಸಿ ಪರಸ್ಪರ ಹೊಸ ವರ್ಷದ ಶುಭಾಶಯ ಕೋರಿ ದರು.
ಪ್ರತಿ ವರ್ಷ ನಗರದ ಅರಮನೆ ಆವರಣದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣಗೊಳ್ಳುತ್ತಿತ್ತು. ಸಾವಿರಾರು ಜನರು ಅರಮನೆ ಆವರಣಕ್ಕೆ ಆಗಮಿಸಿ ಹೊಸ ವರ್ಷದ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗುತ್ತಿದ್ದರು. ಆದರೆ, ಪೇಜಾವರ ಶ್ರೀಗಳ ನಿಧನದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೂರು ದಿನ ಶೋಕಾಚರಣೆ ಘೋಷಿಸಿರುವುದರಿಂದ ಅರಮನೆ ಆವರಣದಲ್ಲಿ ಹೊಸ ವರ್ಷವನ್ನು ಸ್ವಾಗತಿಸುವ ಕಾರ್ಯಕ್ರಮವನ್ನು ರದ್ದುಪಡಿಸಲಾಯಿತು.
ಡಿ.31ರಂದು ನಡೆಯಬೇಕಾಗಿದ್ದ ಪೊಲೀಸ್ ಬ್ಯಾಂಡ್, ಶ್ರೀನಿವಾಸ ಕಲ್ಯಾಣ ನೃತ್ಯ ಜ.1ರಂದು ನಡೆಯಲಿದ್ದು, ರಾತ್ರಿ 9ರಿಂದ ಬಣ್ಣಗಳ ಚಿತ್ತಾರಗಳಿಂದ ಕೂಡಿದ ಶಬ್ಧರಹಿತ ಪಟಾಕಿ ಸಿಡಿಸಲಾಗುವುದು. ಜ.2ರಂದು ಸಂಜೆ 7ರಿಂದ ಹರ್ಷ ಹಾಗೂ ಸರಿಗಮಪ, ಕನ್ನಡ ಕೋಗಿಲೆ ತಂಡದಿಂದ ಹರ್ಷಧ್ವನಿ ಸಂಗೀತ ಸಂಜೆ ಆಯೋಜಿಸಲಾಗಿದೆ.
ಪ್ರವಾಸಿಗರ ದಂಡು: ಹೊಸ ವರ್ಷ ಆಚರಣೆಗೆ ನಗರಕ್ಕೆ ಸಾವಿರಾರು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸಿದರು. ನಗರದ ಅರಮನೆ ಆವರಣ, ಮೃಗಾಲ ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಕಂಡುಬಂದರು. ನಗರದ ಬಹುತೇಕ ಹೋಟೆಲ್‌ಗಳು ಭರ್ತಿಯಾಗಿತ್ತು. ಹಲವಾರು ಹೋಟೆಲ್‌ಗಳಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಪ್ರಯುಕ್ತ ಹೋಟೆಲ್‌ಗಳು ವಿದ್ಯುತ್ ದೀಪಗಳಿಂದ ಅಲಂಕೃತಗೊಂಡು ಕಂಗೊಳಿಸುತಿತ್ತು. ನಗರದ ವಿವಿಧ ಚರ್ಚ್‌ಗಳಲ್ಲಿ ಹೊಸ ವರ್ಷವನ್ನು ಸ್ವಾಗತಿಸಲು ಪ್ರಾರ್ಥನೆ, ಪೂಜೆ ನಡೆಯಿತು.
ಕೇವಲ ಹೋಟೆಲ್‌ಗಳಲ್ಲಿ ಮಾತ್ರವಲ್ಲದೆ ನಗರದ ವಿವಿಧೆಡೆ ಹೊಸ ವರ್ಷದ ಸಂಭ್ರಮ ಮನೆ ಮಾಡಿತ್ತು. ಸಾಕಷ್ಟು ಜನರು ಮನೆಗಳಲ್ಲಿಯೇ ಹೊಸ ವರ್ಷವನ್ನು ಸಂಭ್ರಮದಿಂದ ಬರ ಮಾಡಿಕೊಂಡರೆ ಕೆಲವರು ಬಯಲಿನಲ್ಲಿ, ರಸ್ತೆಗಳಲ್ಲಿ ಹೊಸ ವರ್ಷದ ಸಂಭ್ರಮ ಹಂಚಿಕೊಂಡರು.
ಬಿಗಿ ಬಂದೋಬಸ್ತ್: ಹೊಸ ವರ್ಷಾಚರಣೆ ಸಂದರ್ಭ ಸಂಭವಿಸಬಹುದಾದ ಅಹಿತಕರ ಘಟನೆಗಳಿಗೆ ಕಡಿವಾಣ ಹಾಕಲು ನಗರದಲ್ಲಿರುವ 59 ಸಿಸಿ ಕ್ಯಾಮರಾಗಳ ಜತೆಗೆ ಹೊಸದಾಗಿ 250 ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು. ರಿಂಗ್‌ರೋಡ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಮೋಜು ಮಸ್ತಿಯಲ್ಲಿ ತೊಡಗಿದ್ದ ಹಿನ್ನೆಲೆಯಲ್ಲಿ ರಿಂಗ್‌ರೋಡ್‌ನಲ್ಲಿ ಹೈವೇ ಪೆಟ್ರೋಲ್ ವಾಹನ ಮತ್ತು ಇಂಟರ್‌ಸೆಪ್ಟರ್ ವಾಹನಗಳು ಗಸ್ತು ತಿರುಗಿ ಪುಂಡರಿಗೆ ಎಚ್ಚರಿಕೆ ನೀಡುವ ಕಾರ್ಯ ಮಾಡಿದವು.
ನಗರದಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಶುಭ ಕೋರುವ ನೆಪದಲ್ಲಿ ಯಾರಿಗೂ ಕಿರಿಕಿರಿ ಉಂಟು ಮಾಡದಂತೆ ತಡೆಯಲು 18 ವಿಶೇಷ ಕಾರ್ಯಪಡೆ ತಂಡ, ಮಹಿಳೆಯರ ರಕ್ಷಣೆಗಾಗಿ 3 ವಿಶೇಷ ತಂಡ ಹಾಗೂ 4 ಪಿಂಕ್ ಗರುಡ ತಂಡ ನಿಯೋಜಿಸಲಾಗಿತ್ತು. ಪೊಲೀಸರ ತಂಡ ನಗರದ ವಿವಿಧ ಹೋಟೆಲ್‌ಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಹೊಸ ವರ್ಷಾಚರಣೆ ಸಂದರ್ಭ ಕುಡಿದು ವಾಹನ ಚಾಲನೆ ಮಾಡುವವರ ಸಂಖ್ಯೆಯೇ ಹೆಚ್ಚು. ಇಂಥವರನ್ನು ಪತ್ತೆ ಪೊಲೀಸರು ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿದರು. ಸಾಕಷ್ಟು ಜನರು ಕುಡಿದು ವಾಹನ ಚಾಲನೆ ಮಾಡಿ ಪೊಲೀಸರ ಕೈಗೆ ಸಿಕ್ಕಿ ಬಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net