ಹೊಸ ರೂಪದಲ್ಲಿ ಮೈಸೂರಿನ ವೆಲ್ಲಿಂಗ್ಟನ್ ಮ್ಯೂಸಿಯಂ, ದಸರೆಗೆ ಉದ್ಘಾಟನೆ

wellingtan
Published on

ಆರ್.ಕೃಷ್ಣ ಮೈಸೂರು
ಪಾರಂಪರಿಕ ಕಟ್ಟಡವಾದ ವೆಲ್ಲಿಂಗ್ಟನ್ ಸರ್ಕಾರಿ ವಸ್ತುಸಂಗ್ರಹಾಲಯ ನವೀಕರಣಗೊಂಡಿದ್ದು, ಒಂದೂವರೆ ವರ್ಷದ ಬಳಿಕ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳ್ಳಲಿದೆ.
ಎರಡು ಶತಮಾನಗಳನ್ನು ಕಂಡಿರುವ ಕಟ್ಟಡವನ್ನು 62.59 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿ ವಸ್ತುಸಂಗ್ರಹಾಲಯವನ್ನು ಪುನರಾರಂಭಿಸಲಾಗುತ್ತಿದೆ. ಎಲ್ಲ ಸಿದ್ಧತೆಗಳು ನಡೆದಿದ್ದು, ಉದ್ಘಾಟನೆಯ ದಿನ ನಿಗದಿಗೊಳ್ಳಬೇಕಿದೆ.
ನಗರದ ಇರ್ವಿನ್ ರಸ್ತೆಯ ಗ್ರಾಮಾಂತರ ಬಸ್ ನಿಲ್ದಾಣ ಬಳಿ ಇರುವ ಕಟ್ಟಡವನ್ನು ಬ್ರಿಟಿಷ್ ಅಧಿಕಾರಿಯಾಗಿದ್ದ ಕರ್ನಲ್ ಆರ್ಥರ್ ವೆಲ್ಲೆಸ್ಲಿಗಾಗಿ ನಿರ್ಮಿಸಲಾಗಿತ್ತು. ಟಿಪ್ಪು ಸುಲ್ತಾನ್ ಕದನದಲ್ಲಿ ಮಡಿದ ಬಳಿಕ ಬ್ರಿಟೀಷರು, ಆಡಳಿತವನ್ನು ಮೈಸೂರು ಅರಸರಿಗೆ ಬಿಟ್ಟುಕೊಟ್ಟರು. ಆದರೆ, ಮೇಲುಸ್ತುವಾರಿಗಾಗಿ ವೆಲ್ಲೆಸ್ಲಿ ಅವರನ್ನು ನಿಯೋಜಿಸಿತು. ರಾಜಧಾನಿ ಶ್ರೀರಂಗಪಟ್ಟಣದಿಂದ ಮೈಸೂರಿಗೆ ಸ್ಥಳಾಂತರಗೊಂಡಿದ್ದರಿಂದ ವೆಲ್ಲಿಂಗ್ಟನ್ ಕಟ್ಟಡವನ್ನು ನಿರ್ಮಿಸಿ ಅಲ್ಲಿ ಕರ್ನಲ್ ಆರ್ಥರ್ ವೆಲ್ಲೆಸ್ಲಿ 1799ರಿಂದ 1801ರವರೆಗೆ ವಾಸವಾಗಿದ್ದರು.
ಕಟ್ಟಡವು *1,13,365 ಚದರ ಅಡಿ ವಿಸ್ತೀರ್ಣವನ್ನು ಹೊಂದಿದ್ದು, ಆಯತಾಕೃತಿಯ ಒಂದು ಮಹಡಿ, ಜೋಡು ಮೆಟ್ಟಿಲುಗಳು, ಕಲಾವಿದರ ಕಲಾಕೃತಿಗಳ ಪ್ರದರ್ಶನಕ್ಕೆ ವೇದಿಕೆಯನ್ನು ಒಳಗೊಂಡಿದೆ. ವೆಲ್ಲೆಸ್ಲಿ ನೆನಪಿಗಾಗಿ ಕಟ್ಟಡವನ್ನು ಸಂರಕ್ಷಣೆ ಮಾಡಿಕೊಂಡು ಬರಲಾಗುತ್ತಿದ್ದು, 1996ರಿಂದ ಇದನ್ನು ಇಂದಿರಾಗಾಂಧಿ ರಾಷ್ಟ್ರೀಯ ಮಾನವ ವಸ್ತುಸಂಗ್ರಹಾಲಯವನ್ನಾಗಿ ಮಾರ್ಪಾಡು ಮಾಡಲಾಗಿದೆ. ಸ್ಥಿರ ವಸ್ತುಸಂಗ್ರಹಾಲಯಗಳ ಜತೆಗೆ ಆಗಾಗ್ಗೆ ಬೇರೆ ಬೇರೆ ರಾಜ್ಯಗಳ ಕರಕುಲಶ ವಸ್ತುಪ್ರದರ್ಶನ ಸಹ ನಡೆಸಿಕೊಂಡು ಬರಲಾಗುತ್ತಿತ್ತು. ಆದರೆ, ಕಟ್ಟಡ ಶಿಥಿಲಗೊಂಡಿದ್ದರಿಂದ ಒಂದೂವರೆ ವರ್ಷಗಳ ಹಿಂದೆ ಜೀರ್ಣೋದ್ಧಾರ ಕಾರ್ಯ ಕೈಗೊಂಡು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಯಿತು.
220 ವರ್ಷಕ್ಕೂ ಹೆಚ್ಚು ಹಳೆಯದಾದ ಕಟ್ಟಡದ ಮೂಲ ಸ್ವರೂಪ ಉಳಿಸಿಕೊಂಡು ಪಾರಂಪರಿಕತೆಗೆ ಧಕ್ಕೆಯಾಗದಂತೆ ಜೀರ್ಣೋದ್ಧಾರ ಮಾಡಲಾಗಿದೆ. ಕಟ್ಟಡದ ಚಾವಣಿ, ನೆಲ, ಗೋಡೆ, ಬಣ್ಣ, ಎಲೆಕ್ಟ್ರಿಕಲ್ ವರ್ಕ್, ಕಟ್ಟಡದಲ್ಲಿ ನಾಶವಾಗಿದ್ದ ಮರಗಳನ್ನು ಬದಲಿಸಲಾಗಿದೆ. ಸದ್ಯ ಕಟ್ಟಡದಲ್ಲಿ ಹಿಂದೆ ಜೋಡಣೆಯಾಗಿದ್ದ ಮಾದರಿಯಲ್ಲಿಯೇ ವಸ್ತುಗಳನ್ನು ಪ್ರದರ್ಶಿಸಲಾಗಿದೆ. ತನ್ಮೂಲಕ ನಗರದ ಪ್ರಮುಖ ಪಾರಂಪರಿಕ ಕಟ್ಟಡವಾದ ವೆಲ್ಲಿಂಗ್ಟನ್ ಭವನ ಸಂರಕ್ಷಿಸಲಾಗಿದೆ.

ನೂರಾರು ವರ್ಷಗಳ ಐತಿಹಾಸಿಕ ಚಿತ್ರಗಳು
ನೂರಾರು ವರ್ಷಗಳ ಇತಿಹಾಸ ಇರುವ ಅಪರೂಪದ ಛಾಯಾಚಿತ್ರ, ವರ್ಣಚಿತ್ರ, ಕಲಾಕೃತಿಗಳು ಇಲ್ಲಿವೆ. ಮೈಸೂರು ಅರಸರ ಕಾಲದ ಸರ್ಕಾರಿ ಮತ್ತು ಖಾಸಗಿ ದಾಖಲೆಗಳ ಛಾಯಾಚಿತ್ರಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಅಣಿಗೊಳಿಸಲಾಗಿದೆ. 1917ರ ಅಕ್ಟೋಬರ್ 25ರ ದಸರಾ ಕಾರ್ಯಕ್ರಮ, ಯುವರಾಜ ಶ್ರೀಕಂಠೀರವ ನರಸಿಂಹರಾಜ ಒಡೆಯರ್ ವಿವಾಹ ಮಹೋತ್ಸವ, ಚಿತ್ರಕಲಾವಿದ ರಾಜಾ ರವಿವರ್ಮರ ಪತ್ರ, ರಾಜಕುಮಾರಿ ಚೆನ್ನಮ್ಮಾಜಿ ಅವರ ವಿವಾಹ ಮಹೋತ್ಸವ ಆಹ್ವಾನ ಪತ್ರಿಕೆ, ಸರ್ಕಾರಿ ಅತಿಥಿಗೃಹದಲ್ಲಿ ಗಣ್ಯರಿಗೆ ಏರ್ಪಡಿಸಿದ್ದ ಔತಣಕೂಟದಲ್ಲಿ ಉಣಬಡಿಸಿದ್ದ ಆಹಾರ ಪಟ್ಟಿ ಸೇರಿದಂತೆ ಇನ್ನಿತರ ದಾಖಲೆಗಳಿವೆ.
ರಾಜ್ಯದ ವಿಭಿನ್ನ ಕಾಲಘಟ್ಟಕ್ಕೆ ಸಂಬಂಧಿಸಿದಂತೆ ಸಮಕಾಲೀನ ಕಲಾವಿದರು ರಚಿಸಿರುವ ವಿವಿಧ ವರ್ಣಚಿತ್ರಗಳು, ತೈಲ, ಜಲವರ್ಣ, ಮೈಸೂರು ಶೈಲಿ, ಮಿಶ್ರ ಮಾಧ್ಯಮ, ಪೆನ್ಸಿಲ್, ಎಚಿಂಗ್, ವರ್ಣ ಚಿತ್ರಗಳಿವೆ. ಕಲಾವಿದ ಎ.ಆರ್.ವಾಸು ಅವರು 1942ರಲ್ಲಿ ಕ್ಯಾನ್ವಾಸ್ ಮೇಲೆ ರಚಿಸಿರುವ ಮೈಸೂರಿನ 25ನೇ ರಾಜ ಜಯಚಾಮರಾಜ ಒಡೆಯರ್ ಅವರ ಕಲಾಕೃತಿ ವಿಶೇಷವಾಗಿದೆ. ದಿವಾನ್ ಮಾಧವರಾವ್ ಕಲಾಕೃತಿ, ವೈ.ನಾಗರಾಜು ರಚಿಸಿರುವ ಪಂಡಿತ್ ಜವಾಹರಲಾಲ್ ನೆಹರು ಕಲಾಕೃತಿ, ಹಂಪಿಯ ವಿರೂಪಾಕ್ಷ ದೇವಸ್ಥಾನ ಆಕರ್ಷಣೆಯಾಗಲಿವೆ.

ಶಿಲಾ ಶಿಲ್ಪಗಳ ಪ್ರದರ್ಶನ

ಕಟ್ಟಡದ ಒಳಗೆ ಅಲ್ಲದೇ ಹೊರಗೂ ಕೂಡ ಇತಿಹಾಸ, ಪರಂಪರೆಯನ್ನು ಬಿಂಬಿಸುವ ವಸ್ತುಗಳ ಪ್ರದರ್ಶನ ಮಾಡಲಾಗಿದೆ. ವಸ್ತುಸಂಗ್ರಹಾಲಯದ ಆವರಣದ ಉದ್ಯಾನದಲ್ಲಿ ಗಂಗರ ಕಾಲದಿಂದ ವಿಜಯನಗರ ರಾಜರ ಕಾಲದವರೆಗಿನ ಶಿಲಾ ಶಿಲ್ಪಗಳನ್ನು ಪ್ರದರ್ಶಿಸಲಾಗಿದೆ. ಅಲ್ಲದೇ ಮಹಿಷಮರ್ದಿನಿ, ಬ್ರಹ್ಮ, ವಿಷ್ಣು, ಭೈರವ, ಕಾಳಿ, ಭೈರವಿ, ವೀರಭದ್ರ, ಸತಿಶಿಲ್ಪ, ವೀರಗಲ್ಲು, ತೀರ್ಥಂಕರ, ಪಾರ್ಶ್ವನಾಥ, ಮತ್ಸಾೃವತಾರ, ಇನ್ನಿತರ ಪ್ರಮುಖ ಶಿಲ್ಪಗಳ ವೀಕ್ಷಣೆಗೆ ಅವಕಾಶವಿದೆ.

ದಸರೆಗೂ ಮುನ್ನಾ ಉದ್ಘಾಟನೆ
ಐತಿಹಾಸಿಕ ಹಾಗೂ ಪಾರಂಪರಿಕತೆ ಹೊಂದಿರುವ ವೆಲ್ಲಿಂಗ್ಟನ್ ವಸ್ತು ಸಂಗ್ರಹಾಲಯವನ್ನು ದಸರಾ ಒಳಗೆ ಉದ್ಘಾಟಿಸಲು ಉದ್ದೇಶಿಸಲಾಗಿದೆ. ಪಾರಂಪರಿಕತೆಗೆ ಯಾವುದೇ ಧಕ್ಕೆಯಾಗದಂತೆ ನವೀಕರಣ ಕಾರ್ಯ ಪೂರ್ಣಗೊಂಡಿದ್ದು, ಅಪರೂಪದ ವಸ್ತುಗಳ ಸಂಗ್ರಹ ಮತ್ತೆ ಸಾರ್ವಜನಿಕರ ವೀಕ್ಷಣೆಗೆ ಸಿಗಲಿದೆ.

ದೇವರಾಜು, ಆಯುಕ್ತರು, ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net