

ಶಿಕಾರಿಪುರ: ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಎನ್‌ಎಸ್ ಯು ಐ ಕಾರ್ಯಕರ್ತರು ಶನಿವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ತಾಲೂಕು ಅದ್ಯಕ್ಷ ಶಿವು ಹುಲ್ಮಾರ್ ಮಾತನಾಡಿ, ಏಕಾಏಕಿ ಬಿಜೆಪಿ ಸರ್ಕಾರ ಯಾವುದೇ ಪೂರ್ವ ತಯಾರಿಯಿಲ್ಲದೆ ವಿದ್ಯಾರ್ಥಿಗಳ ಮೇಲೆ ನೂತನ ಶಿಕ್ಷಣ ನೀತಿ ಹೇರಿರುವುದು ಸರಿಯಲ್ಲ. ಇದನ್ನು ಸರಿಯಾಗಿ ಪರಾಮರ್ಶಿಸಿ ಜಾರಿಗೊಳಿಸಬೇಕಿತ್ತು ಎಂದು ಹೇಳಿದರು. ಗ್ರಾಮಾಂತರ ಪ್ರದೇಶದ ಮಕ್ಕಳಿಗೆ ಸರಿಯಾಗಿ ಬಸ್ ಸೌಲಭ್ಯ ಸಿಗುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳಿಗೆ ಬಹಳ ತೊಂದರೆಯಾಗಿದೆ. ಶಿಕ್ಷಣಮಟ್ಟ ಕುಂಠಿತವಾಗುತ್ತಿದೆ. ಪದವಿ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆಯಾಗುತ್ತಿಲ್ಲ. ಉಚಿತ ಬಸ್ ಪಾಸ್ ವಿತರಣೆ ವಿಸ್ತರಣೆ ಸಮಸ್ಯೆಯಾಗಿದೆ. 1ರಿಂದ 10 ನೇ ತರಗತಿಯವರೆಗೆ ವಿದ್ಯಾರ್ಥಿ ವೇತನವನ್ನು ಕೇಂದ್ರ ಸರ್ಕಾರ ನಿಲ್ಲಿಸಿರುವದರಿಂದ ಸಾಕಷ್ಟು ತೊಂದರೆಯಾಗಿದೆ. ಕೂಡಲೆ ಬಿಜೆಪಿ ಸರ್ಕಾರ ವಿದ್ಯಾರ್ಥಿ ಗಳ ಸಮಸ್ಯೆಗಳ ಕಡೆಗೆ ಗಮನಹರಿಸಬೇಕು ಎಂದು ಆಗ್ರಹಿಸಿದರು. ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು.