

ಹೊಸಕೋಟೆ/ ಬೆಂ.ಗ್ರಾಮಾಂತರ: ಮಳೆಯಿಂದ ಮನೆ ಹಾನಿಯಾಗಿರುವವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವ ಜತೆಗೆ ಸೂಕ್ತ ಜಾಗದಲ್ಲಿ ಶೀಘ್ರ ಬಸವ ವಸತಿ ಯೋಜನೆಯಡಿ ಮನೆ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಹೊಸಕೋಟೆಗೆ ಸೋಮವಾರ ಭೇಟಿ ನೀಡಿ ಮಳೆಯಿಂದ ಹಾನಿಯಾಗಿರುವ ಪ್ರದೇಶ ಪರಿಶೀಲನೆ ನಡೆಸಿದರು. ರಾಜಕಾಲುವೆಯ ಸಮೀಪದಲ್ಲಿ ಮನೆ ನಿರ್ಮಿಸಿಕೊಂಡಿದ್ದು ಕೆಲವು ಕಡೆಗಳಲ್ಲಿ ಒತ್ತುವರಿಯೂ ಆಗಿದೆ. ಅಲ್ಲಿನ ನಿವಾಸಿಗಳನ್ನು ಸ್ಥಳಾಂತರಿಸಿ ರಾಜಕಾಲುವೆಗೆ ಕಾಯಕಲ್ಪ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಇಲ್ಲಿನ ಕೆರೆ ತುಂಬಿದರೂ ಯಾವುದೇ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮವಹಿಸುವಂತೆ ಸೂಚಿಸಿದ್ದೇನೆ ಎಂದರು.
ಅತಿವೃಷ್ಟಿ ಪರಿಹಾರ ಕಾರ್ಯಕ್ಕೆ ವೇಗ ನೀಡಲು ಚುನಾವಣಾ ನೀತಿ ಸಂಹಿತೆಯಲ್ಲಿ ರಿಯಾಯಿತಿ ನೀಡಲು ಚುನಾವಣಾ ಆಯೋಗಕ್ಕೆ ಪತ್ರ ಬರೆಯಲಾಗಿದೆ ಎಂದು ಸಿಎಂ ತಿಳಿಸಿದರು.
ವರದಿ ಬಳಿಕ ಪರಿಹಾರ ಮೊತ್ತ: ವ್ಯಾಪಕ ಮಳೆಯಿಂದಾಗಿ ಬೆಳೆ ಹಾನಿಯಾಗಿದೆ. ಹಲವು ಕಡೆಗಳಲ್ಲಿ ಮನೆಗಳು ಕುಸಿದಿವೆ. ಇದರಿಂದಾದ ಆರ್ಥಿಕ ನಷ್ಟದ ಬಗ್ಗೆ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಸ್ಪಷ್ಟ ವರದಿ ಬಳಿಕ ಪರಿಹಾರ ಮೊತ್ತ ನಿರ್ಧರಿಸಿ, ಆದ್ಯತೆ ಮೇರೆಗೆ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಸಚಿವ ಎಂಟಿಬಿ ನಾಗರಾಜ್ ತಿಳಿಸಿದರು.
ಹಲವೆಡೆ ಜಮೀನು ಮುಳುಗಡೆಯಾಗಿದ್ದು, ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾಗಿದೆ, ಪೂರ್ಣ ಪ್ರಮಾಣದಲ್ಲಿ ಕುಸಿದ ಮನೆ ಹಾಗೂ ಭಾಗಶಃ ಕುಸಿದು ಬಿದ್ದ ಮನೆಗಳಿಗೆ ಹಾನಿಗನುಸಾರ ಪರಿಹಾರ ನೀಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರಾಷ್ಟ್ರೀಯ ವಿಪತ್ತಿನ ಸಮಯದಲ್ಲಿ ತ್ವರಿತವಾಗಿ ಸ್ಪಂದಿಸುವ ಮೂಲಕ ಉತ್ತಮ ಆಡಳಿತ ನೀಡುತ್ತಿದೆ, ಅಕಾಲಿಕ ಮಳೆ ಸೃಷ್ಟಿಸಿರುವ ಅವಾಂತರದ ಬಗ್ಗೆ ಆದ್ಯತೆ ಮೇರೆಗೆ ಪರಿಹಾರ ಕಾರ್ಯ ಚುರುಕುಗೊಂಡಿದೆ ಎಂದು ತಿಳಿಸಿದರು.
ಮೂಲಸೌಕರ್ಯಕ್ಕೆ ಮನವಿ: ಮನೆಗಳಿಗೆ ನೀರುನುಗ್ಗಿ ಅವಾಂತರ ಸೃಷ್ಟಿಯಾಗುತ್ತದೆ, ಮೂಲಸೌಕರ್ಯ ಕೊರತೆಯಿದ್ದು ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರು ಸಿಎಂಗೆ ಮನವಿ ಮಾಡಿದರು. ಗ್ರಾಮನಕ್ಷೆಯಲ್ಲಿ ರಾಜಕಾಲುವೆ ಸ್ಥಳವನ್ನೇ ಗುರುತಿಸಿಲ್ಲ, ಕೆರೆ ನೀರು ಹೊರ ಹೋಗಲು ಜಾಗವಿಲ್ಲದಂತಾಗಿದೆ, ಈ ಬಗ್ಗೆ ಅಗತ್ಯಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
ಪರಿಶೀಲನೆ ನಡೆಸಿ ಕ್ರಮ: ಸರ್ವೇ ಪ್ರಕಾರ ಪರಿಶೀಲನೆ ನಡೆಸಿ ಆ ಜಾಗದಲ್ಲಿ ರಾಜಕಾಲುವೆ ಇತ್ತೆ ಅಥವಾ ಅಕ್ರಮವಾಗಿ ಕಟ್ಟಡಗಳು ನಿರ್ಮಾಣವಾಗಿದೆಯೇ ಎಂದು ಪರಿಶೀಲಿಸುವಂತೆ ಸಿಎಂ ಸೂಚಿಸಿದ್ದಾರೆ. ಈ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ತಹಸೀಲ್ದಾರ್ ಗೀತಾ ಹೇಳಿದರು.
ಈಗಾಗಲೆ ಅಗಸಿನಕೆರೆ ಅಂಗಳ ಹಾಗೂ ಕೆರೆ ಕಟ್ಟೆಗಳ ಮೇಲೆ ಮನೆ ನಿರ್ಮಾಣವಾಗಿದೆ, ಇದಕ್ಕೆ ಅಂದಿನ ಪುರಸಭೆ ಅನುಮತಿ ನೀಡಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ, ದಾಖಲೆ ಪರಿಶೀಲಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ನಗರಸಭೆ ಆಯುಕ್ತ ರಮೇಶ್ ತಿಳಿಸಿದರು