ಹೊಸ ಬದುಕು ಕಟ್ಟಿಕೊಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ

10blrp4
Published on

ಬೇಲೂರು: ದುಶ್ಚಟಗಳಿಗೆ ದಾಸರಾಗಿ ಜೀವನವನ್ನೇ ಕಳೆದುಕೊಳ್ಳುತ್ತಿದ್ದವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ನವ ಜೀವನೋತ್ಸವ ಕಾರ್ಯಕ್ರಮದ ಮೂಲಕ ಅವರನ್ನು ಉತ್ತಮ ದಾರಿಗೆ ತರುತ್ತಿರುವುದು ಶ್ಲಾಘನೀಯ ಎಂದು ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.

ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಆಯೋಜಿಸಿದ್ದ ನವ ಜೀವನೋತ್ಸವ ಹಾಗೂ ಮದ್ಯ ವಸ್ಯನ ಮುಕ್ತ ಕಾರ್ಯಕ್ರಮ ಉದ್ಘಾಟಿಸಿ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಿ ಮಾತನಾಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯವರು ಯಾರೂ ಮಾಡದ ಉತ್ತಮ ಕೆಲಸ ಮಾಡುತ್ತಿದ್ದಾರೆ. ಎಷ್ಟೋ ಕುಟುಂಬಗಳು ಬೀದಿ ಪಾಲಾಗುವುದನ್ನು ತಪ್ಪಿಸಿ ಅವರಲ್ಲಿ ಹೊಸ ಚೈತನ್ಯ ಹುಟ್ಟಿಸಿ ಉತ್ತಮ ಬದುಕಿಗೆ ದಾರಿ ಮಾಡಿಕೊಡುತ್ತಿದ್ದಾರೆ. ಇಲ್ಲಿವರೆಗೂ 1600 ಮದ್ಯವರ್ಜನ ಶಿಬಿರಗಳನ್ನು ರಾಜ್ಯ ಹಾಗೂ ಹೊರ ರಾಜ್ಯಗಳಲ್ಲೂ ಆಯೋಜಿಸಿ ಲಕ್ಷಾಂತರ ಜನರನ್ನು ದುಶ್ಚಟಗಳಿಂದ ದೂರ ಮಾಡಿದ್ದಾರೆ. ಇಲ್ಲಿಂದ ಮನೆಗೆ ತೆರಳಿದವರು ಮತ್ತೆ ಎಂದಿಗೂ ಮದ್ಯದತ್ತ ತಿರುಗಿಯೂ ನೋಡದೆ ಹೆಂಡತಿ, ಮಕ್ಕಳೊಂದಿಗೆ ಉತ್ತಮವಾಗಿ ಸಂಸಾರ ಮಾಡಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ತಿಳಿಹೇಳಿದರು.

ಬೆಳ್ತಂಗಡಿ ಜನ ಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಮಾತನಾಡಿ, ಬೇಲೂರು ತಾಲೂಕಿನಲ್ಲಿ 5 ಶಿಬಿರ ಆಯೋಜಿಸಿ 500ಕ್ಕೂ ಹೆಚ್ಚು ಜನರನ್ನು ಮದ್ಯವ್ಯಸನ ಮುಕ್ತರಾಗಿಸಿದ್ದೇವೆ. ಮದ್ಯವ್ಯಸನ ಮುಕ್ತರಾದವರಿಗೆ ಧರ್ಮಸ್ಥಳ ಸಂಸ್ಥೆಯಿಂದ ವಾಹನ ಚಾಲನೆ ತರಬೇತಿ ಜತೆಗೆ ಪರವಾನಗಿ ಕೊಡಿಸಿ ಅವರ ಮುಂದಿನ ಜೀವನಕ್ಕೆ ದಾರಿ ಮಾಡಿಕೊಡಲಾಗಿದೆ ಎಂದರು.

ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಬೀದಿಗಳಲ್ಲಿ ನವಜೀವನ ಸಮಿತಿ ಸದಸ್ಯರು ಜಾಥಾ ನಡೆಸಿದರು. ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷ ಸೋಮಶೇಖರ, ನಿರ್ದೇಶಕಿ ಮಮತಾ ರಾವ್, ಸದಸ್ಯರಾದ ಅಮಿತ್ ಶೆಟ್ಟಿ, ನಾಗೇಶ್ ಯಾದವ್, ರಾಮಚಂದ್ರ, ತಾಲೂಕು ಯೋಜನಾಕಾರಿ ಸಂದ್ಯಾಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net