

ಶ್ರೀಧರ ಅಣಲಗಾರ ಯಲ್ಲಾಪುರ
ಹೊಸದಾಗಿ ಪಡಿತರ ಚೀಟಿಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವನ್ನು ಫೆ. 6ರಿಂದ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಮತ್ತೆ ಆರಂಭಿಸಿದೆ. ಆದರೆ, ತಾಲೂಕಿನಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ.
ಕರೊನಾ, ಉಪಚುನಾವಣೆ, ನಂತರ ಗ್ರಾಪಂ ಚುನಾವಣೆಯ ಕಾರಣಗಳಿಗಾಗಿ ಕೆಲ ತಿಂಗಳುಗಳಿಂದ ಹೊಸ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸುವ ಅವಕಾಶವನ್ನು ಸರ್ಕಾರ ಸ್ಥಗಿತಗೊಳಿಸಿತ್ತು. ಈಗ ನಾಲ್ಕು ದಿನಗಳಿಂದ ಅರ್ಜಿ ಸಲ್ಲಿಕೆಗೆ ಜನರು ಬರುತ್ತಿದ್ದರೂ ತಾಂತ್ರಿಕ ಸಮಸ್ಯೆಯಿಂದ ಅರ್ಜಿ ಸಲ್ಲಿಸುವುದಕ್ಕೆ ತೊಂದರೆಯಾಗುತ್ತಿದೆ.
ಆಧಾರ್ಕಾರ್ಡ್ನ ಆಧಾರದಂತೆ ಅರ್ಜಿ ಸಲ್ಲಿಸಬೇಕಾಗಿದ್ದು, ಆನ್ಲೈನ್ ಅರ್ಜಿ ಸಲ್ಲಿಸುವ ವೇಳೆ ವಿಳಾಸ ಹಾಗೂ ದಾಖಲಾತಿಯ ವಿವರ ನೀಡುವ ವೇಳೆ ಪಿನ್ಕೋಡ್ (ಪೋಸ್ಟಲ್ ಇಂಡೆಕ್ಸ್ ನಂಬರ್) ನೀಡಬೇಕು. ತಾಲೂಕಿನಲ್ಲಿ ಒಂದು ಪಿನ್ಕೋಡ್ ಪಟ್ಟಣ ಹಾಗೂ ಗ್ರಾಮೀಣ ಭಾಗದ 3-4 ಪ್ರದೇಶಗಳಿಗೆ ಅನ್ವಯವಾಗುತ್ತದೆ. ಗ್ರಾಮೀಣ ಭಾಗದ ಜನತೆ ಪಿನ್ಕೋಡ್ ನಮೂದಿಸಿದರೆ ಕೆಲವೊಮ್ಮೆ ಪಟ್ಟಣ ಎಂದು ನಮೂದಾಗುತ್ತಿದ್ದು, ಇದರಿಂದ ತೊಂದರೆಯಾಗುತ್ತಿದೆ. ಕೆಲವೊಮ್ಮೆ ಪಟ್ಟಣದವರು ಪಿನ್ಕೋಡ್ ನಮೂದಿಸಿದಾಗ ಗ್ರಾಮೀಣ ಭಾಗ ಎಂದು ನಮೂದಾಗುವುದೂ ಇದೆ. ಈ ಹಿಂದೆ ಪಿನ್ಕೋಡ್ ನಮೂದಿಸಿ, ಊರಿನ ಹೆಸರು ನಮೂದಿಸುವ ಆಯ್ಕೆ ಇತ್ತು, ಆದರೆ, ಈಗ ಅದನ್ನು ತೆಗೆಯಲಾಗಿದ್ದು, ಪಿನ್ಕೋಡ್ ನಮೂದಿಸಿದ ನಂತರ ಊರಿನ ಹೆಸರು ಸ್ವಯಂಚಾಲಿತವಾಗಿ ಬರುತ್ತದೆ. ಅದನ್ನು ಬದಲಾಯಿಸುವ ಅವಕಾಶ ಇರುವುದಿಲ್ಲ. ಅದರಿಂದ ಊರಿನ ಹೆಸರೇ ಬದಲಾಗಿ ಅರ್ಜಿ ಸಲ್ಲಿಕೆಗೆ ತೊಂದರೆಯಾಗುತ್ತಿದೆ.
ಪಟ್ಟಣದ ವಿವಿಧ ಸೇವಾಸಿಂಧು ಕೇಂದ್ರಗಳಲ್ಲಿ ತಾಲೂಕಿನ ಗ್ರಾಮೀಣ ಭಾಗದಿಂದ ಅರ್ಜಿ ಸಲ್ಲಿಕೆಗಾಗಿ ಜನತೆ ಆಗಮಿಸುತ್ತಿದ್ದು, ಅರ್ಜಿ ಸಲ್ಲಿಸುವುದಕ್ಕೇ ಆಗದೆ ಮರಳುತ್ತಿದ್ದಾರೆ. ದೂರದ ಮಲವಳ್ಳಿ, ಈರಾಪುರ, ಕಳಚೆ ಭಾಗದಿಂದ ಕುಟುಂಬದವರೆಲ್ಲ ಸೇರಿ ಅರ್ಜಿ ಸಲ್ಲಿಸುವುದಕ್ಕೆ ಬಂದು 3-4 ತಾಸುಗಳ ಕಾಲ ಕಾದು ಬೇಸತ್ತು ವಾಪಸಾಗುವಂತಾಗಿದೆ. ಇರುವ ಕೆಲಸ ಬಿಟ್ಟು ಅರ್ಜಿ ಸಲ್ಲಿಸುವುದಕ್ಕೆ ಬಂದು ಬರಿಗೈಯಲ್ಲಿ ಮರಳುವಂತಾಗಿರುವುದರಿಂದ ಸರ್ಕಾರ ವ್ಯವಸ್ಥೆ ಬಗೆಗೆ ಜನತೆ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಈ ಮೊದಲು ಇದ್ದಂತೆ ಊರಿನ ಹೆಸರನ್ನು ಸ್ವತಃ ನಮೂದಿಸುವ ಅವಕಾಶವನ್ನು ಇಲಾಖೆ ನೀಡಬೇಕು. ಇಲ್ಲವಾದಲ್ಲಿ ಆಗಿರುವ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಿ, ಆನ್ಲೈನ್ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಬೇಕು. ಅರ್ಜಿ ಸಲ್ಲಿಕೆಗೆ ಅವಕಾಶ ಇಲ್ಲದೇ ಇಷ್ಟು ದಿನ ಕಾಯುವಂತಾಗಿದ್ದು, ಇದೀಗ ಅವಕಾಶವಿದ್ದರೂ ಅರ್ಜಿ ಸಲ್ಲಿಸಲಾಗದ ಸ್ಥಿತಿ ಇದ್ದು, ಆದಷ್ಟು ಬೇಗ ಈ ಸಮಸ್ಯೆ ನಿವಾರಿಸಬೇಕೆಂಬುದು ಜನತೆಯ ಆಗ್ರಹ.
ಆನ್ಲೈನ್ ಅರ್ಜಿ ಸಲ್ಲಿಕೆ ವೇಳೆ ಇಂತಹ ತಾಂತ್ರಿಕ ಸಮಸ್ಯೆ ಬರುವುದು ಸಹಜ. ಅದನ್ನು ಪರಿಶೀಲಿಸಿ, ತಾಂತ್ರಿಕ ತಂಡದೊಂದಿಗೆ ರ್ಚಚಿಸಿ, ಸರಿಪಡಿಸುವ ಬಗೆಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು.| ಮಂಜುನಾಥ ರೇವಣಕರ್ಆ ಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಿಲ್ಲಾ ಉಪನಿರ್ದೇಶಕ