

ಬೀದರ್: ರಾಜ್ಯ ಸರ್ಕಾರದ ನೂತನ ಕೈಗಾರಿಕಾ ನೀತಿ 2020-25 ದೇಶದಲ್ಲೇ ಮಾದರಿಯಾಗಿದೆ. ಕೈಗಾರಿಕೆಗಳಲ್ಲಿ ಹಿಂದುಳಿದಿರುವ ಜಿಲ್ಲೆಗಳ ಅಭಿವೃದ್ಧಿಗೆ ಇದು ಅನುಕೂಲ ಮಾಡಿಕೊಡಲಿದೆ ಎಂದು ಸಂಸದ ಭಗವಂತ ಖೂಬಾ ಹೇಳಿದರು.
ಇಲ್ಲಿನ ಪ್ರತಾಪನಗರದ ಶಾರದಾ ರೂಡಸೆಟ್ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹೊಸ ಕೈಗಾರಿಕೆ ನೀತಿ ಮತ್ತು ಹೂಡಿಕೆ ಅವಕಾಶಗಳ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಕೈಗಾರಿಕೆ ನೀತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಉದ್ಯಮ ಆರಂಭಿಸಲು ಹಣಕಾಸು ಸಂಸ್ಥೆಗಳಿಗೆ ಸಕಾಲದಲ್ಲಿ ಆರ್ಥಿಕ ನೆರವು ಸಿಗುತ್ತಿದೆ ಎಂದರು.
ವಿವಿಧ ಕಾರಣಕ್ಕೆ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳು ಸ್ಥಾಪನೆಯಾಗಿಲ್ಲ. ಆದರೆ ಸಣ್ಣ ಕೈಗಾರಿಕೆಗಳು ಉತ್ತಮ ಕಾರ್ಯನಿರ್ವಹಿಸುತ್ತಿವೆ. ಕೈಗಾರಿಕೆ ನೀತಿ ಎಷ್ಟೇ ಸರಳೀಕರಣಗೊಳಿಸಿದರೂ ಕೆಲ ಸಮಸ್ಯೆಗಳಿಂದ ಮುಕ್ತ್ತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಜಿಲ್ಲೆಯಲ್ಲಿ ಸಣ್ಣ ಕೈಗಾರಿಕೆ ಸ್ಥಾಪನೆಗೆ ಮುಂದೆ ಬರುವ ಉದ್ಯಮಿಗಳಿಗೆ ಸಣ್ಣ ಕೈಗಾರಿಕೆ ಇಲಾಖೆ ಅಧಿಕಾರಿಗಳು ಅನುಕೂಲ ಮಾಡಿಕೊಡಬೇಕು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅವಕಾಶಗಳ ಸದುಪಯೋಗ ಪಡೆದು ಆರೋಗ್ಯಕರ ಪೈಪೋಟಿ ನೀಡಿ ಪ್ರಗತಿ ಸಾಧಿಸಬೇಕು ಎಂದು ಹೇಳಿದರು.
ಕಾಸಿಯಾ ಅಧ್ಯಕ್ಷ ಕೆ.ಬಿ.ಅರಸಪ್ಪ ಅಧ್ಯಕ್ಷತೆ ವಹಿಸಿದ್ದರು. ಲೀಡ್ ಬ್ಯಾಂಕ್ ವ್ಯವಸ್ಥಾಪಕ ಬಿ.ಎಂ.ಕಮತಗಿ, ಕಿರು,ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳ ಎಂಟರ್ಪ್ರೈಸಸ್ ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕ ಎಚ್.ಎಂ.ಶ್ರೀನಿವಾಸ, ಎಸ್ಸಿ, ಎಸ್ಟಿ, ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಪಿ.ವಿಜಯಕುಮಾರ, ಪ್ರಮುಖರಾದ ಶಿವರಾಜ ಹಲಶೆಟ್ಟಿ, ಜಿ.ಕೆ.ದೇವೇಂದ್ರಪ್ಪ, ಪಿ.ಎಂ.ಜಯಕುಮಾರ, ಭೀಮಾಶಂಕರ ಪಾಟೀಲ್, ಎನ್.ಎಂ. ಜಗದೀಶ ಇದ್ದರು. ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕಿ ಸುರೇಖಾ ಮುನೋಳಿ ವಂದಿಸಿದರು.