

ರಾಯಬಾಗ: ಸರ್ಕಾರದ ಹೊಸ ನಿಯಮದ ಪ್ರಕಾರ ಮಧ್ಯಾಹ್ನ 12ಗಂಟೆವರೆಗೂ ವ್ಯಾಪಾರ- ವಹಿವಾಟಿಗೆ ಅವಕಾಶವಿದೆ. ಸಾರ್ವಜನಿಕರು ಮಾತ್ರ ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನುತ್ತಿಲ್ಲ. ಅಂತರ ಮರೆತು ವಸ್ತುಗಳ ಖರೀದಿಗೆ ಜನರು ನಿತ್ಯ ಮುಗಿಬೀಳುತ್ತಿದ್ದಾರೆ.
ಕರೊನಾ ನಿಯಂತ್ರಣಕ್ಕಾಗಿ ಪಟ್ಟಣದ ಸೋಮವಾರ ವಾರದ ಸಂತೆ ರದ್ದು ಮಾಡಿದ್ದರಿಂದ ಪಟ್ಟಣದ ಜನರು ವಾರಕ್ಕೆ ಬೇಕಾಗಿದ್ದ ದಿನಸಿ ಮತ್ತು ತರಕಾರಿ ಖರೀದಿಗಾಗಿ ಮಾರುಕಟ್ಟೆಯಲ್ಲಿ ದೈಹಿಕ ಅಂತರವಿಲ್ಲದೆ, ಕರೊನಾ ಭಯವಿಲ್ಲದೆ ಮೈಮರೆತು ಖರೀದಿಯಲ್ಲಿ ತೊಡಗಿದ್ದರು. ಪಟ್ಟಣವಷ್ಟೇ ಅಲ್ಲದೆ, ಗ್ರಾಮೀಣ ಭಾಗದಲ್ಲಿ ನಡೆದ ಸಂತೆಗಳಲ್ಲಿಯೂ ಜನ ಅಂತರ ಕಾಯ್ದುಕೊಳ್ಳದಿರುವುದು ಹಾಗೂ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದರಿಂದ ತಾಲೂಕಿನ ಜನರಲ್ಲಿ ಹೆಚ್ಚು ಆತಂಕ ಮೂಡಿಸಿದೆ. ಮಧ್ಯಾಹ್ನ 12 ಗಂಟೆ ಆಗುತ್ತಿದ್ದಂತೆ ಪೊಲೀಸರು ರಸ್ತೆಗಿಳಿದು ವ್ಯಾಪರ ವಹಿವಾಟಿನಲ್ಲಿ ತೊಡಗಿದ್ದ ಜನರನ್ನು ಚದುರಿಸಲು ಮುಂದಾದರು. ವ್ಯಾಪಾರಸ್ಥರು ತಮ್ಮ ಅಂಗಡಿ-ಮುಂಗಟ್ಟುಗಳನ್ನು ಬಂದ್ ಮಾಡಿದರು. ತರಕಾರಿ ಮಾರುವವರು ಮಾರುಕಟ್ಟೆಯಿಂದ ಹೊರ ನಡೆದರು. ಅನವಶ್ಯಕವಾಗಿ ರಸ್ತೆಯಲ್ಲಿ ಓಡಾಡುತ್ತಿದ್ದ ವಾಹನ ಸವಾರರಿಗೆ ಪೊಲೀಸರು ಲಾಠಿ ಬೀಸುತ್ತಿರುವುದು ಕಂಡು ಬಂದಿತು. ಮಧ್ಯಾಹ್ನ 12 ಗಂಟೆ ನಂತರ ಪಟ್ಟಣದಲ್ಲಿ ಜನರ ಓಡಾಡ ವಿರಳವಾಯಿತು. ಪಟ್ಟಣದ ಕೆಲವು ಬ್ಯಾಂಕ್‌ಗಳ ಮುಂದೆ ಜನದಟ್ಟಣೆ ಇರುವುದು ಕಂಡು ಬಂದಿತು. ತಾಲೂಕಿನಲ್ಲಿ ಕರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಜನರಲ್ಲಿ ಕರೊನಾ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವ ಕಾರ್ಯಕ್ಕೆ ತಾಲೂಕಾಡಳಿತ, ಪಪಂ, ಪೊಲೀಸ್ ಮತ್ತು ಆರೋಗ್ಯ ಇಲಾಖೆ ಮುಂದಾಗಬೇಕಾಗಿದೆ ಎಂಬುದು ಪ್ರಜ್ಞಾವಂತರ ಒತ್ತಾಸೆಯಾಗಿದೆ.