

ಮೈಸೂರು: ರಂಗಭೂಮಿಯಲ್ಲಿ ಸಮನ್ವಯತೆ ಮುಖ್ಯ. ಎಲ್ಲರನ್ನು ರಂಗದ ಮೇಲೆ ತರುವ ಸಮನ್ವಯತೆ ಸಾಧಿಸುವುದು ಅಗತ್ಯವಾಗಿದೆ ಎಂದು ಎಂದು ಹಿರಿಯ ರಂಗಕರ್ಮಿ ಜನಾರ್ದನ್(ಜನ್ನಿ ) ಅಭಿಪ್ರಾಯಪಟ್ಟರು.
ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ವತಿಯಿಂದ ನಗರದ ಕಿರು ರಂಗಮಂದಿರ ಆವರಣದಲ್ಲಿ ಇತ್ತೀಚಿಗೆ ಏರ್ಪಡಿಸಿದ್ದ ಸದಸ್ಯತ್ವ ಅಭಿಯಾನ ಉದ್ಘಾಟಿಸಿ ಅವರು ಮಾತನಾಡಿದರು.
ಮೈಸೂರಿನಲ್ಲಿ ರಾಜರ ಕಾಲದಿಂದ ರಂಗಭೂಮಿಯ ಪರಂಪರೆ ಬೆಳೆದಿದೆ. ಆದರೆ, ಈಗ ರಂಗಭೂಮಿ ಕ್ಲಿಷ್ಟವಾಗಿದೆ. ಈಗಿನ ಯುವ ತಲೆಮಾರಿಗೆ ಓದಿನ ಕೊರತೆಯಿದೆ, ಶ್ರದ್ಧೆಯೂ ಇಲ್ಲ. ಇದಕ್ಕಾಗಿ ಸಂಘಟನೆಯ ಮೂಲಕ ಯುವ ತಲೆಮಾರನ್ನು ರಂಗಭೂಮಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೇವಲ ನಗರಕ್ಕೆ ಸೀಮಿತವಾಗದೆ ಗ್ರಾಮೀಣದಲ್ಲೂ ಹವ್ಯಾಸಿ ರಂಗಭೂಮಿ ಚಟುವಟಿಕೆಗಳಿಗೆ ಒತ್ತು ನೀಡಬೇಕಿದೆ. ಈ ಮೂಲಕ ಕನ್ನಡ ರಂಗಭೂಮಿ ಕಟ್ಟಬೇಕಿದೆ ಎಂದು ಕಿವಿಮಾತು ಹೇಳಿದರು.
ನಟ, ನಿರ್ದೇಶಕ, ಮೇಕಪ್ ಮಾಡುವವರು ರಂಗಭೂಮಿಗೆ ಬೇಕು. ಎಲ್ಲಕ್ಕಿಂತ ಸಂಘಟಕ ಮುಖ್ಯ. ಇದನ್ನು ಅರಿಯಬೇಕಿದೆ. ಇದಕ್ಕಾಗಿ ಸಮುದಾಯದಲ್ಲೆ ಬೆರೆಯುವಂತಾಗಬೇಕು. ಸಮುದಾಯ ಸಂಘಟನೆಯ ಮೂಲಕ ರಂಗಭೂಮಿಗೆ ಬಂದೆ. ಈಗ ರಂಗಭೂಮಿಗೆ ಅನೇಕರು ಬರುತ್ತಿದ್ದರೂ ಸಮುದಾಯದ ಒಡನಾಟವಿರಲಿ ಎಂದು ಹೇಳಿದರು.
ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ರಾಮು, ರಂಗ ಕಲಾವಿದರಾದ ಸರೋಜಾ ಹೆಗಡೆ, ನೂರ್ ಅಹಮ್ಮದ್ ಶೇಖ್, ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಅಧ್ಯಕ್ಷ ರಾಜೇಶ್ ತಲಕಾಡು, ಚಂದ್ರಶೇಖರಾಚಾರ್, ಮೋಹನ್ ರಾಜ್ ಶೆಟ್ಟಿ, ಅಬ್ದುಲ್ ಕರೀಂ, ಕಾತ್ಯಾಯಿನಿ ಯಶೋಮಿತ್ರ ಇದ್ದರು.