

ಚಿತ್ರದುರ್ಗ: ಬರದ ಬೇಗೆಯಲ್ಲಿ ಬೇಯುತ್ತಿರುವ ಚಿತ್ರದುರ್ಗ ಜಿಲ್ಲೆಯಲ್ಲಿ ನೀರಿನ ಸಮಸ್ಯೆ ನಿವಾರಿಸಲು ಹೊಸ ಕೊಳವೆಬಾವಿ ಕೊರೆಯಿಸಲು ಅಗತ್ಯ ಮಾರ್ಗಸೂಚಿ ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಜತೆಗೆ ಅಗತ್ಯತೆ ಆಧರಿಸಿ ಗೋಶಾಲೆಗಳನ್ನು ತೆರೆಯಲು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ನೇತೃತ್ವದ ಸಭೆ ಸೋಮವಾರ ನಿರ್ಣಯ ಕೈಗೊಂಡಿದೆ.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಕುಡಿಯುವ ನೀರಿನ ವಿಷಯವೇ ಪ್ರಧಾನ ಚರ್ಚೆಗೆ ಬಂದಿತು. ಶಾಸಕರಾದ ಟಿ.ರಘುಮೂರ್ತಿ ಹಾಗೂ ಬಿ.ಜಿ.ಗೋವಿಂದಪ್ಪ ಅವರು ಕೂಡ ಈ ಸಂಬಂಧ ಸಲಹೆ ನೀಡಿದರು.
ತುರ್ತು ಸಂದರ್ಭಗಳಲ್ಲಿ ಕೊನೆಯ ಆಯ್ಕೆಯಾಗಿ ಹೊಸ ಕೊಳವೆ ಬಾವಿ ಕೊರೆಯಿಸಬಹುದೆಂದು ಈಚೆಗೆ ನಡೆದ ಸಭೆಯಲ್ಲಿ ಪಂಚಾಯತ್ ರಾಜ್ ಸಚಿವರು ತಿಳಿಸಿದ್ದಾರೆ.ಆ ಸಭೆಯ ನಡಾವಳಿ ಆಧರಿಸಿ ಬೋರ್‌ವೆಲ್ ಕೊರೆಯಿಸಲು ಅಗತ್ಯ ಮಾರ್ಗಸೂಚಿ ಕೋರಲಾಗುತ್ತಿದೆ ಎಂದು ಜಿಲ್ಲಾ ಸಚಿವರು ಮಾಹಿತಿ ನೀಡಿದರು.
ಸದ್ಯದಲ್ಲೇ ಸಚಿವರಾದ ಪ್ರಿಯಾಂಕ್‌ಖರ್ಗೆ, ಕೃಷ್ಣಭೈರೇಗೌಡ ಅವರ ಜತೆ ಜಿಲ್ಲೆಯ ಶಾಸಕರು, ಅಧಿಕಾರಿಗಳನ್ನು ಒಳಗೊಂಡು ಬೆಂಗಳೂರಲ್ಲಿ ಸಭೆ ನಡೆಸಲಾಗುವುದು ಎಂದು ಸಚಿವ ಸುಧಾಕರ್ ತಿಳಿಸಿದರು.
ಕುಡಿವ ನೀರಿನ ಸಮಸ್ಯೆಗೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು. ಅಗತ್ಯ ಬಿದ್ದರೆ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಈ ವಿಷಯದಲ್ಲಿ ನಿರ್ಲಕ್ಷೃ ತೋರಿದರೆ ಶಿಸ್ತು ಕ್ರಮ ಜರುಗಿಸಲು ಹಿಂದೇಟು ಹಾಕುವುದಿಲ್ಲ ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾತನಾಡಿ, ಸದ್ಯಕ್ಕೆ ಜಿಲ್ಲೆಯ 367 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ. ಆರೂ ತಾಲೂಕುಗಳಿಗೂ ತಲಾ 40 ಲಕ್ಷ ರೂ.ಅನುದಾನ ಒದಗಿಸಲಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಪ್ರತಿ ತಾಲೂಕಿಗೆ 25 ಲಕ್ಷ ರೂ.ಹಂಚಿಕೆಯಾಗಿದೆ. ಪಿಡಿ ಖಾತೆಯಲ್ಲಿ 9 ಕೋಟಿ ರೂ. ಇದೆ. ಬರ ನಿರ್ವಹಣೆಗೆ ಹಣದ ತೊಂದರೆ ಇಲ್ಲ ಎಂದರು.
ಟ್ಯಾಂಕರ್ ಮೂಲಕ ನೀರು ಸರಬರಾಜಿಗೆ ಟೆಂಡರ್ ಕರೆಯಲಾಗಿದೆ. ಡಿಸಿ ಕಚೇರಿಯಲ್ಲಿ 24/7 ಸಹಾಯವಾಣಿ ಸ್ಥಾಪಿಸಲಾಗಿದೆ. ಅನುದಾನ ಇಲ್ಲವೆಂದು ಪಿಡಿಒಗಳು ಸಬೂಬು ಹೇಳಿದರೆ ಶಿಸ್ತು ಕ್ರಮ ಜರುಗಿಸಲಾಗುವುದು. ತುರುವನೂರು, ಚೌಳೂರು ಗೇಟ್, ಅಜ್ಜನಗುಡಿ ಗ್ರಾಮಗಳಲ್ಲಿ ಗೋಶಾಲೆ ತೆರೆಯಲಾಗಿದೆ. ಈವರೆಗೆ 11564 ಜಾನುವಾರುಗಳಿಗೆ 67.550 ಟನ್ ಮೇವು ಪೂರೈಸಲಾಗಿದೆ ಎಂದು ವಿವರಿಸಿದರು.
*ಪ್ರತಿ ತಾಲೂಕಿಗೆ 25 ಲಕ್ಷ ಮೀಸಲು *
ಹೊಸ ಕೊಳವೆ ಬಾವಿ ಕೊರೆಯಿಸಲು ಪ್ರತಿ ತಾಲೂಕಿಗೆ 25 ಲಕ್ಷ ರೂ. ಕಾಯ್ದಿರಿಸಬೇಕು. ಬೇಡಿಕೆ ಅನುಸಾರ ಗೋಶಾಲೆಗಳನ್ನು ಪ್ರಾರಂಭಿಸಬೇಕು. ಶೇ.50 ಭತ್ತ, ಶೇ.25 ರಾಗಿ ಹುಲ್ಲು , ಶೇ.25 ರಷ್ಟು ಜೋಳದ ದಂಟನ್ನು ಪೂರೈಸಬೇಕೆಂದು ಶಾಸಕ ಟಿ.ರಘುಮೂರ್ತಿ ಮನವಿ ಮಾಡಿದರು.
*ಒಬ್ಬರೇ ಜಿಯಾಲಾಜಿಸ್ಟ್
ಸದ್ಯ ಜಿಲ್ಲೆಯಲ್ಲಿ ಹೊರಗುತ್ತಿಗೆಯಡಿ ಒಬ್ಬರು ಜಿಯಾಲಿಜಿಸ್ಟ್ ಇದ್ದಾರೆ. ಎರಡು ತಾಲೂಕುಗಳಿಗೆ ಒಬ್ಬರಂತೆ ಮೂವರು ಜಿಯಾಲಿಜಿಸ್ಟ್‌ಗಳನ್ನು ನೇಮಿಸುವಂತೆ ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಅಧಿಕಾರಿಗಳಿಗೆ ಸೂಚಿಸಿದರು.