ಹೊಸ ಕೊಳವೆಬಾವಿ ಕೊರೆಸದಿರಿ-ಉಮಾಶಂಕರ್ ಸೂಚನೆ

IMG-20221214-WA0016.jpg
Published on
ದಾವಣಗೆರೆ: ಜಿಲ್ಲೆಯಲ್ಲಿ ಹೊಸ ಕೊಳವೆಬಾವಿ ಕೊರೆಯಬೇಡಿ. ಹಳೆಯ ಬೋರ್‌ವೆಲ್‌ಗಳಲ್ಲೇ ಜಲಮರುಪೂರಣಕ್ಕೆ ಕ್ರಮ ಕೈಗೊಳ್ಳಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದಾವಣಗೆರೆ ಜಿಪಂ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲೆಡೆ ಜಲಜೀವನ ಮಿಷನ್, ಬಹುಗ್ರಾಮ ಕುಡಿವ ನೀರಿನ ಯೋಜನೆ ಚಾಲ್ತಿಯಲ್ಲಿದೆ. ಅಗತ್ಯವಿದ್ದೆಡೆ ನದಿ ಮೂಲದ ನೀರನ್ನು ಬಳಸಿಕೊಳ್ಳುವುದು ಉತ್ತಮ ಎಂದು ಸಲಹೆ ನೀಡಿದರು. ಹೊಸ ಬೋರ್‌ವೆಲ್ ಕೊರೆಸಿದರೆ ಮತ್ತೆ ಮೋಟಾರ್, ಪಂಪ್, ಕೇಬಲ್ ಇತರೆ ಸಾಮಗ್ರಿ ಬೇಕಾಗಿಬರಬಹುದು. ಹೀಗಾಗಿ ಕೆರೆ ಆಸುಪಾಸಿನಲ್ಲಿ ನಿಷ್ಕ್ರಿಯ ಹಳೇ ಕೊಳವೆಬಾವಿಗಳನ್ನೇ ರೀಜಾರ್ಚ್ ಮಾಡಿ. ತುರ್ತು ಅಗತ್ಯವಿದ್ದಲ್ಲಿ ಜಂಟಿ ಸಮೀಕ್ಷೆ ಮಾಡಿಸಿ ವರದಿ ಸಲ್ಲಿಸಿ ಎಂದು ಹೇಳಿದರು. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯ 1.56 ಲಕ್ಷ ರೈತರ ಖಾತೆಗೆ ಜಮೆ ಆಗುತ್ತಿದೆ. 40 ಸಾವಿರ ರೈತರ ಇಕೈವಿಸಿ ಮಾಡಿಸುತ್ತಿಲ್ಲ. ಒಟಿಪಿ ನೀಡಲು ಸಹಕರಿಸುತ್ತಿಲ್ಲ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ತಿಳಿಸಿದಾಗ ಸರ್ಕಾರವೇ ಸಹಾಯಧನ ನೀಡುವಾಗ ರೈತರು ಸಹಕರಿಸಬೇಕು. ಈ ಬಗ್ಗೆ ಹೆಚ್ಚು ಪ್ರಯತ್ನ ನಡೆಸಿ ಎಂದು ಕಾರ್ಯದರ್ಶಿ ಸೂಚಿಸಿದರು. ಜಿಲ್ಲೆಯಲ್ಲಿ ಚರ್ಮಗಂಟು ರೋಗಬಾಧಿತ 1188 ರಾಸು ಮೃತಪಟ್ಟಿವೆ. ಲಸಿಕೆ ನೀಡಿದ ನಂತರವೂ 300ರಿಂದ (ಶೇ.30) 350 ಜಾನುವಾರು ಸಾವಿಗೀಡಾಗಿವೆ.ವಿಷಯ ತಜ್ಞರನ್ನು ಕಳಿಸುವಂತೆ ಬೀದರ್ ವಿವಿಗೆ ಕೋರಲಾಗುತ್ತಿದೆ ಎಂದು ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ. ಚಂದ್ರಶೇಖರ ಸುಂಕದ್ ಹೇಳಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ಜಿಪಂ ಸಿಇಒ ಡಾ.ಎ.ಚನ್ನಪ್ಪ ಇದ್ದರು. ----
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net