ಹೊಸ ಕಟ್ಟಡಗಳಿಗೆ ಉದ್ಘಾಟನೆ ಭಾಗ್ಯವಿಲ್ಲ!

DSC_6872
Published on

ಮಂಜುನಾಥ ತಿಮ್ಮಯ್ಯ ಭೋವಿ ಮೈಸೂರು

ಉದ್ಘಾಟನೆಗೂ ಮುನ್ನವೇ ಹೊಸಕಟ್ಟಡಗಳು ಪಾಳುಬಿದ್ದಿವೆ….!
ಮೈಸೂರು ವಿಶ್ವವಿದ್ಯಾಲಯದ ಮುಖ್ಯ ಕ್ಯಾಂಪಸ್ ಆಗಿರುವ ಮಾನಸಗಂಗೋತ್ರಿಯಲ್ಲಿ ಒಂದು ಸುತ್ತು ಹಾಕಿದರೆ ಹೊಸ ಕಟ್ಟಡಗಳು ಹಾಳು ಕೊಂಪೆಯಾಗಿರುವುದು ಗೋಚರವಾಗುತ್ತದೆ. ಇದೀಗ ಇವುಗಳ ನಿರ್ಮಾಣದ ಹಿಂದಿನ ಉದ್ದೇಶವೇ ಮಣ್ಣು ಪಾಲಾಗಿದೆ.
ವಿದ್ಯಾರ್ಥಿಗಳ ಬಳಕೆಗೆ ಮುಕ್ತಗೊಂಡು ಪಾಠ-ಪ್ರವಚನ ಸದ್ದು, ಶೈಕ್ಷಣಿಕ ಚಟುವಟಿಕೆ ಕಲರವ ಮೇಳೈಸಬೇಕಿದ್ದ ಜಾಗದಲ್ಲಿ ಇಲಿ-ಚೇಳುಗಳ ಆವಾಸ, ಪಕ್ಷಿಗಳ ತಾಣ, ಧೂಳಿನ ಸಾಮ್ರಾಜ್ಯ ಸೃಷ್ಟಿಯಾಗಿದೆ.

ಯಾವ ಯಾವ ಕಟ್ಟಡಗಳು?:
ಸಮೂಹ, ಸಂವಹನ ಮತ್ತು ಪತ್ರಿಕೋದ್ಯಮ ಅಧ್ಯಯನ ವಿಭಾಗ, ಶ್ರೀಬಸವೇಶ್ವರ ಸಾಮಾಜಿಕ ಪರಿಷ್ಕರಣೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ, ಔಷಧ ಕಾಲೇಜು ಕಟ್ಟಡಗಳ ನಿರ್ಮಾಣದ ಕೆಲಸ ನಿಗದಿತ ಅವಧಿಯೊಳಗೆ ಪೂರ್ಣಗೊಂಡಿವೆ. ಆದರೆ ಇವುಗಳಿಗೆ ಇನ್ನೂ ಉದ್ಘಾಟನೆ ಭಾಗ್ಯ ದೊರೆಯುತ್ತಿಲ್ಲ. ಇದರಿಂದಾಗಿ ಇವುಗಳು ನಿರುಪಯುಕ್ತವಾಗಿವೆ.

ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಹೊಸ ಕಟ್ಟಡಗಳನ್ನು ಮೈವಿವಿ ನಿರ್ಮಾಣಕ್ಕೆ ಮುಂದಾಯಿತು. 2021ರಲ್ಲಿ ಮಾನಸಗಂಗೋತ್ರಿಯ ಆವರಣದ ವಿವಿಧ ಪ್ರದೇಶಗಳಲ್ಲಿ ಈ ಮೂರು ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿತ್ತು. 12 ಕೋಟಿ ರೂ. ವೆಚ್ಚದಲ್ಲಿ ಇವುಗಳ ನಿರ್ಮಾಣ ಕೆಲಸವನ್ನು ಕೈಗೆತ್ತಿಕೊಳ್ಳಲಾಯಿತು.

ಬಹುತೇಕ ಕಾಮಗಾರಿಗಳು ಗುತ್ತಿಗೆದಾರರ ಕಾರಣದಿಂದ ವಿಳಂಬವಾಗುತ್ತದೆ ಎಂಬ ಅಪವಾದ ಕೇಳಿಬರುತ್ತದೆ. ಆದರೆ ಇಲ್ಲಿ ಟೆಂಡರ್ ಪಡೆದಿರುವ ಗುತ್ತಿಗೆದಾರರು ಸಕಾಲಕ್ಕೆ ಕಾಮಗಾರಿಯನ್ನೂ ಮುಗಿಸಿದ್ದಾರೆ. ಆದರೆ, ಬಿಲ್ ಪಾವತಿ ಮಾಡಿಲ್ಲ. ಮೈವಿವಿ ಈ ಧೋರಣೆಯಿಂದ ಕಟ್ಟಡಗಳಿಗೆ ಈ ದುಸ್ಥಿತಿ ಬಂದಿದೆ.

ಪತ್ರಿಕೋದ್ಯಮ ಅಧ್ಯಯನ ವಿಭಾಗದ ಕಟ್ಟಡ ಒಂದು ವರ್ಷದ ಹಿಂದೆಯೇ ಪೂರ್ಣಗೊಂಡಿದೆ. ಶೈಕ್ಷಣಿಕ ಚಟುವಟಿಕೆಗೆ ಬಳಕೆಯಾಗದ ಕಾರಣ ಇವುಗಳು ಧೂಳು ಹಿಡಿದಿವೆ. ಕಟ್ಟಡದೊಳಗೆ ಕಸ-ಕಡ್ಡಿಗಳು ಬಿದ್ದು, ಹುಲ್ಲು, ಗರಿಕೆಗಳೂ ಬೆಳೆದಿದ್ದರೆ, ಕೊಠಡಿಯ ಒಳಗೆ ಪಕ್ಷಿಗಳು ಗೂಡುಗಳನ್ನು ಕಟ್ಟಿವೆ. ಹೊರಾವರಣದಲ್ಲಿ ಕಳೆ ಗಿಡಗಳು ಬೆಳೆದಿವೆ. ಈ ಕಟ್ಟಡದಲ್ಲಿ ಕೊಠಡಿಗಳು, ಸಭಾಂಗಣ ಸೇರಿದಂತೆ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಆದರೆ ಇವು ಸದ್ಯಕ್ಕೆ ಪ್ರಯೋಜನಕ್ಕೆ ಬಾರದಂತಾಗಿದೆ.

ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರದ ಹೊಸ ಕಟ್ಟಡ ಸ್ಥಿತಿಯೂ ಇದೇ ಆಗಿದೆ. ಇಲ್ಲಿಯೂ ತ್ಯಾಜ್ಯ ಬಿದ್ದಿದೆ. ಕೊಠಡಿಗಳಲ್ಲಿ ಪಕ್ಷಿಗಳು ಆಶ್ರಯ ಪಡೆದುಕೊಂಡಿವೆ.

ಔಷಧ ಕಾಲೇಜು ಕಟ್ಟಡದ್ದು ಅದೇ ಚರ್ವಿತ ಚರ್ವಣ ಕಥೆಯೇ. ಪೂರ್ಣವಾಗಿದ್ದರೂ ಕಟ್ಟಡ ಬಳಕೆಯಾಗುತ್ತಿಲ್ಲ. ಹೊಸ ಕಟ್ಟಡದಲ್ಲಿ ಪ್ರಸಕ್ತ ಸಾಲಿನಿಂದ ಫಾರ್ಮಸಿ ಕಾಲೇಜು ಶುರುವಾಗಬೇಕಿತ್ತು. ಆದರೆ, ಕಟ್ಟಡ ಹಸ್ತಾಂತರವಾಗಿಲ್ಲ. ಅಧಿಕಾರಿಗಳೂ ತಲೆಕಡಿಸಿಕೊಳ್ಳುತ್ತಿಲ್ಲ.

ಗುತ್ತಿಗೆದಾರರಿಗೆ ಬಿಲ್ ನೀಡಿಲ್ಲ
ಗುತ್ತಿಗೆದಾರರಿಗೆ ಬಿಲ್ ನೀಡದಿರುವುದೇ ಈ ಸಮಸ್ಯೆಗೆ ಮೂಲ ಕಾರಣ. ರಾಜ್ಯ ಸರ್ಕಾರದ ಅನುದಾನದ ನಿರೀಕ್ಷೆಯಿಂದ ಟೆಂಡರ್ ಕರೆದು ಕಾಮಗಾರಿ ನೀಡಲಾಗಿದೆ. ಹಣ ದೊರೆಯುವ ವಿಶ್ವಾಸದಿಂದ ಗುತ್ತಿಗೆದಾರರು ಸಹ ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿದ್ದಾರೆ. ಆದರೆ ಮೈಸೂರು ವಿವಿ ಬಳಿ ಹಣವಿಲ್ಲ. ವಿವಿಧ ಕಾರಣಗಳಿಂದ ಹಣಕಾಸಿನ ಕೊರತೆ ಉಂಟಾಗಿದೆ. ಅಂದಾಜು 120 ಕೋಟಿ ರೂ. ಹಣಕಾಸಿನ ಅಭಾವ ಎದುರಾಗಿದ್ದು, ಈ ಪೈಕಿ 50 ಕೋಟಿ ರೂ. ಕಟ್ಟಡ ಕಾಮಗಾರಿ ಮೊತ್ತವೂ ಸೇರಿಕೊಂಡಿದೆ. ಸರ್ಕಾರ ಅನುದಾನ ನೀಡದೆ ಇರುವ ಕಾರಣ ಗುತ್ತಿಗೆದಾರರಿಗೆ ಬಿಲ್ ನೀಡಿಲ್ಲ. ಅಂದಾಜು 10 ಕೋಟಿ ರೂ.ನಷ್ಟು ಬಿಲ್ ಬಾಕಿ ಉಳಿದಿದ್ದು, ಗುತ್ತಿಗೆದಾರರು ಕಚೇರಿಗೆ ಅಲೆಯುತ್ತಿದ್ದಾರೆ.

ಇದೀಗ ಮತ್ತೊಂದು ಸಮಸ್ಯೆ
ಕುಲಪತಿ ಸ್ಥಾನ ಖಾಲಿ ಆಗಿರುವುದು ಸಮಸ್ಯೆಗೆ ಮತ್ತೊಂದು ಕಾರಣವಾಗಿದೆ. ಕುಲಪತಿ ಹುದ್ದೆಗೆ ಪ್ರೊ.ಎನ್.ಕೆ.ಲೋಕನಾಥ್ ನೇಮಕಾತಿ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ. ಇದರಿಂದ ವಿಸಿ ಸ್ಥಾನ ತೆರವಾಗಿದೆ. ವಿವಿ ದೈನಂದಿನ ಆಡಳಿತ, ಕಾರ್ಯನಿರ್ವಹಣೆಗೆ ಕುಲಸಚಿವೆ ವಿ.ಆರ್. ಶೈಲಜಾ ಮತ್ತು ಹಣಕಾಸು ಅಧಿಕಾರಿ ಡಾ.ಸಂಗೀತಾ ಗಜಾನನ ಭಟ್ ಅವರಿಗೆ ಅಧಿಕಾರ ನೀಡಲಾಗಿದೆ. ಆದರೆ, ಮಹತ್ವದ ನಿರ್ಧಾರ ತೆಗೆದುಕೊಳ್ಳಲು ನಿರ್ಬಂಧಿಸಲಾಗಿದೆ. ಕುಲಪತಿ ನೇಮಕಾತಿ ಸಮಸ್ಯೆ ಬಗೆಹರಿದು, ಸರ್ಕಾರದಿಂದ ಅನುದಾನ ಬಂದಾಗ ಈ ಕಟ್ಟಡಗಳ ಸಮಸ್ಯೆ ಸಹ ನಿವಾರಣೆ ಆಗಲಿದೆ. ಅಲ್ಲಿಯವರೆಗೂ ಇದೇ ಅನಿಶ್ಚಿತತೆ ಮುಂದುವರಿಯುವುದು ನಿಶ್ಚಿತ.

ಆರ್ಥಿಕ ಸಂಕಷ್ಟದಲ್ಲಿ ವಿವಿ
ವಿವಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು, ತೀವ್ರ ಅನುದಾನ ಕೊರತೆ ಎದುರಿಸುತ್ತಿದೆ. 2023-24ನೇ ಸಾಲಿನಲ್ಲಿ 347.16 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಅದರಲ್ಲಿ 432.56 ಕೋಟಿ ರೂ. ವೆಚ್ಚವಾಗಿದೆ. 85.40 ಕೋಟಿ ರೂ. ಕೊರತೆ ಉಂಟಾಗಿದೆ. ಪಿಂಚಣಿ ಸೌಲಭ್ಯಕ್ಕೆ ರಾಜ್ಯ ಸರ್ಕಾರದಿಂದ ಕಡಿಮೆ ಅನುದಾನ ನೀಡುತ್ತಿದ್ದು, ಇದರಿಂದಾಗಿ ವಿವಿ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿಕೊಂಡಿದೆ. ಹಣಕಾಸಿನ ಕೊರತೆ ಸರಿದೂಗಿಸಿಕೊಳ್ಳಲು ಅಗತ್ಯ ವೆಚ್ಚ ಹೊರತುಪಡಿಸಿ, ಉಳಿದ ವೆಚ್ಚಗಳಿಗೆ ಕಡಿವಾಣ ಹಾಕಲಾಗುವುದು. ಜತೆಗೆ, ಹೆಚ್ಚುವರಿ ಅನುದಾನಕ್ಕೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಸರ್ಕಾರದಿಂದ ಅನುದಾನ ಬಿಡುಗಡೆ ಮಾಡದಿರುವ ಕಾರಣ ಗುತ್ತಿಗೆದಾರರ ಬಿಲ್ ಕೊಟ್ಟಿಲ್ಲ. ಶೀಘ್ರದಲ್ಲೇ ಬಾಕಿ ಇರುವ ಹಣ ಕೊಡಿಸಲಾಗುವುದು. ಕಟ್ಟಡಗಳ ಉದ್ಘಾಟನೆಗೆ ಕ್ರಮವಹಿಸಲಾಗುವುದು.
ವಿ.ಆರ್. ಶೈಲಜಾ, ಕುಲಸಚಿವೆ, ಮೈವಿವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net