

ಚಿತ್ರದುರ್ಗ: ಇವತ್ತಿನ ವೈಜ್ಞಾನಿಕ ಯುಗಕ್ಕೆ ಹೊಂದಿಕೊಂಡು ಹೊಸ ಆವಿಷ್ಕಾರಗಳೊಂದಿಗೆ ಸಾಧನೆ ದಾರಿಯಲ್ಲಿ ಸಾಗುವಂತೆ ಹೊಸದಿಲ್ಲಿ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯ ಡಾ.ಕೆ.ಶಿವಶರಣ್ ಶೆಟ್ಟಿ ದಂತ ವೈದ್ಯರಿಗೆ ಸಲಹೆ ನೀಡಿದರು.
ನಗರದ ಶ್ರೀ ಮುರುಘರಾಜೇಂದ್ರ ಬೃಹನ್ಮಠದಲ್ಲಿ ಮಂಗಳವಾರ ಏರ್ಪಡಿಸಿದ್ದ ಎಸ್‌ಜೆಎಂ ದಂತ ಮಹಾವಿದ್ಯಾಲಯದ 33ನೇ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ತ್ರಿ ಡಿ ಮೊದಲಾದ ಹೊಸ ವೈಜ್ಞಾನಿಕ ಅವಿಷ್ಕಾರಗಳನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳುವ ಆಸಕ್ತಿ ನಿಮ್ಮಲ್ಲಿ ಇರಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ, ಎಸ್‌ಜೆಎಂ ವಿದ್ಯಾಪೀಠದ ಆಡಳಿತಾಧಿಕಾರಿ ಬಿ.ಎಸ್.ರೇಖಾ ಅವರು ಮಾತನಾಡಿ, ವೈದ್ಯರಲ್ಲಿ ಸತ್ಯದ ಆಲೋಚನೆಗಳಿರಬೇಕು. ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಬೇಕು. ನಿಮ್ಮ ಪಾಲಕರಿಗೆ ಹೆಮ್ಮೆಯ ಮಕ್ಕಳಾಗಬೇಕು. ಅವರಿಗೆ ಗೌರವ ತರುವಂಥ ಕೆಲಸ ಮಾಡಬೇಕು. ಪದವಿ ಪ್ರಮಾಣ ಪತ್ರಗಳನ್ನು ಜಾಗರೂಕತೆಯಿಂದ ಕಾಪಾಡಿಕೊಳ್ಳಿ,ದಾಖಲೆಗಳು ಬಹಳ ಮುಖ್ಯ ವೆಂದರು.
ಶ್ರೀ ಬಸವಪ್ರಭು ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ವಿದ್ಯಾಪೀಠದ ಸಿಇಒ ಎಂ.ಭರತ್‌ಕುಮಾರ್, ಎಚ್.ಆರ್.ವಿಜಯ ಕೆ. ಮಠ್, ಡಾ.ರಘುನಾಥರೆಡ್ಡಿ, ಡಾ.ನಾಗರಾಜಪ್ಪ ಮತ್ತಿತರರು ಇದ್ದರು.
ಇಬ್ಬರು ಸ್ನಾತಕೋತ್ತರ ಮತ್ತು 52 ವಿದ್ಯಾರ್ಥಿಗಳಿಗೆ ಸ್ನಾತಕ ಪದವಿ ಸೇರಿ ಪದವಿ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು. ಪ್ರಾಚಾರ‌್ಯೆ ಡಾ.ಗೌರಮ್ಮ ಸ್ವಾಗತಿಸಿದರು. ಡಾ.ವಿನುತಾ, ಡಾ.ದಿಶಾ ನಿರೂಪಿಸಿದರು.