

ಹೊಳೆಹೊನ್ನೂರು: ಇಲ್ಲಿಗೆ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಎರಡು ದಿನ ಮೊದಲ ಮೊದಲೇ ಧ್ವಜ ಹಾರಿಸಲಾಗಿದೆ.
ಹರ್ ಘರ್ ತಿರಂಗಾ ಅಂಗವಾಗಿ ಸ್ಥಳೀಯ ಗ್ರಾಪಂಗಳು ತಮ್ಮ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಪ್ರತಿಯೊಂದು ಮನೆಗೂ ಉಚಿತವಾಗಿ ತ್ರಿವರ್ಣ ಧ್ವಜಗಳನ್ನು ವಿತರಿಸಿ ಆ.13ರಿಂದ 15ರ ವರೆಗೆ ಮನೆಗಳ ಮೇಲೆ ಧ್ವಜ ಹಾರಿಸುವಂತೆ ಗ್ರಾಮಸ್ಥರಿಗೆ ಮಾಹಿತಿ ನೀಡುತ್ತಿವೆ. ಆದರೆ ಗ್ರಾಮ ಪಂಚಾಯಿತಿಯಿಂದ ಉಚಿತವಾಗಿ ವಿತರಿಸುತ್ತಿರುವ ಧ್ವಜಗಳನ್ನು ಪಡೆಯಲು ಗ್ರಾಮಸ್ಥರು ಉತ್ಸಾಹದಿಂದ ಮನೆಗಳ ಮುಂಭಾಗ ನಿಂತು ಗ್ರಾಪಂ ಸಿಬ್ಬಂದಿ ಬಂದೊಡನೆ ಧ್ವಜ ಪಡೆದು ಉದ್ದದ ಕೋಲುಗಳನ್ನು ಬಳಸಿ ಮನೆ ಮೇಲೆ ಧ್ವಜ ಹಾರಿಸುತ್ತಿದ್ದಾರೆ.
ಗ್ರಾಪಂ ಸಿಬ್ಬಂದಿ ಇನ್ನೆರಡು ದಿನ ಬಿಟ್ಟು ಧ್ವಜ ಹಾರಿಸುವಂತೆ ಹೇಳಿದರೂ ಕೇಳಲೊಪ್ಪದ ಕೆಲ ಗ್ರಾಮಸ್ಥರು ಉತ್ಸಾಹದಿಂದ ಗುರುವಾರವೇ ತ್ರಿವರ್ಣ ಧ್ವಜಗಳನ್ನು ತಮ್ಮ ಮನೆಗಳ ಮೇಲೆ ಕಟ್ಟಿ ಖುಷಿಪಟ್ಟರು. ಧ್ವಜದೊಂದಿಗೆ ಗ್ರಾಪಂ ಸಿಬ್ಬಂದಿ ನೀಡುತ್ತಿರುವ ಬಿದಿರಿನ ಕಡ್ಡಿಗಳು ಸಣ್ಣದಾಗಿರುವುರಿಂದ ಗ್ರಾಮಸ್ಥರೇ ಮನೆಯಲ್ಲಿರುವ ಉದ್ದದ ಗಳುಗಳನ್ನು ಬಳಸಿಕೊಂಡು ಮನೆ ಮುಂಭಾಗ ಧ್ವಜಾರೋಹಣ ಮಾಡುತ್ತಿದ್ದಾರೆ. ಉದ್ದದ ಕೋಲು ಇಲ್ಲದವರ ಮನೆಯ ಕೆಂಪಚಿನ ಸೂರಿಗೆ ಬಾವುಟವನ್ನು ಸಿಕ್ಕಿಸಿ ಸಂಭ್ರಮಿಸಿದರು. ಗ್ರಾಮಾಂತರದ ಬಹುತೇಕ ಹಳ್ಳಿಗಳಲ್ಲಿ ಮನೆಗಳ ಮೇಲೆ ಗುರುವಾರವೇ ತ್ರಿವರ್ಣ ಧ್ವಜಗಳು ರಾರಾಜಿಸಿವೆ.