

ಹೊಳೆನರಸೀಪುರ: ತಾಲೂಕಿನಲ್ಲಿ ಮುಂಗಾರು ಮಳೆ ವೇಗ ಪಡೆದುಕೊಂಡಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ರೋಹಿಣಿ ಮಳೆಯ ಆರ್ಭಟ ಜೋರಾಗಿದೆ. ಕಳೆದೆರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಜಿಟಿಜಿಟಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.
ಭಾನುವಾರ ತಾಲೂಕಿನಾದ್ಯಂತ ನಡೆಯುತ್ತಿದ್ದ ಶುಭ, ಸಮಾರಂಭಗಳು ದಿನಪೂರ್ತಿ ಮಳೆ ಸುರಿಯುತ್ತಿರುವುದರಿಂದ ಸಾರ್ವಜನಿಕರು ಹೈರಾಣಾಗಿದ್ದರು. ಹೋಗಲೇಬೇಕಾದ ಸಮಾರಂಭಗಳಿಗೆ ನಾಗರಿಕರು ಮಳೆಯಲ್ಲೇ ನೆನೆದುಕೊಂಡು ಹೋಗುತ್ತಿರುವ ದೃಶ್ಯ ಎಲ್ಲೆಡೆ ಗೋಚರಿಸುತ್ತಿತ್ತು. ದ್ವಿಚಕ್ರ ವಾಹನ ಸವಾರರು ಮಳೆಯ ತೊಯ್ದು ಸಂಚರಿಸುತ್ತಿದ್ದರು.
ಸೋಮವಾರ ಮುಂಜಾನೆಯಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಶಾಲಾ ಮಕ್ಕಳು ಶಾಲೆಗೆ ತೆರಳಲು ಪರದಾಡುತ್ತಿದ್ದರು.
ಪಾಲಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಪಠ್ಯ ಪುಸ್ತಕ, ಸಾಮಗ್ರಿಗಳ ಬ್ಯಾಗ್ ಹಿಡಿದುಕೊಂಡು ತೆರಳುತ್ತಿರುವ ದೃಶ್ಯ ಕಂಡುಬಂತು. ಪಟ್ಟಣದ ಬಸ್ ನಿಲ್ದಾಣದ ಸುತ್ತಮುತ್ತ ರಸ್ತೆಗಳು ತರಕಾರಿ ಹಾಗೂ ಹೂವಿನ ಮಾರುಕಟ್ಟೆಯ ರಸ್ತೆಗಳಲ್ಲಿ ಮತ್ತು ಕಾರಂಜಿ ಕಟ್ಟೆ ರಸ್ತೆ, ಹೌಸಿಂಗ್ ಬೋರ್ಡ್ ರಸ್ತೆ , ನರಸಿಂಹನಾಯಕ ನಗರ, ಕುವೆಂಪು ಬಡಾವಣೆ ರಸ್ತೆ , ಬಿ.ಎಂ.ರಸ್ತೆ, ಸೂರನಹಳ್ಳಿ ರಸ್ತೆಗಳಲ್ಲಿರುವ ನೂರಾರು ಗುಂಡಿಗಳಲ್ಲಿ ನೀರು ತುಂಬಿ ಸಾರ್ವಜನಿಕರು ಹಾಗೂ ವಾಹನ ಸವಾರರು ಸಂಚರಿಸಲು ಪರದಾಡುತ್ತಿದ್ದರು.
ಕೃಷಿ ಚಟುವಟಿಕೆಗಳಿಗೆ ಕೆಲವು ಭಾಗಗಳಲ್ಲಿ ಹದವಾದ ಮಳೆಯಾಗುತ್ತಿದೆ. ತಗ್ಗು ಪ್ರದೇಶಗಳಲ್ಲಿ ಮಳೆ ನೀರಿನಿಂದ ಬೆಳೆ ನಷ್ಟವಾಗುತ್ತಿದೆ. ಕಳೆದ ತಿಂಗಳಿಂದ ಮಳೆಯಾಗುತ್ತಿರುವುದರಿಂದ ತಾಲೂಕಿನ ಹಲವು ಭಾಗಗಳಲ್ಲಿ ಮೆಕ್ಕೆಜೋಳ ಬಿತ್ತನೆ ಮಾಡಿದ್ದಾರೆ. ಮೆಕ್ಕೆಜೋಳ ಬಿತ್ತನೆ ಮಾಡಿರುವ ತಗ್ಗು ಪ್ರದೇಶದ ಗದ್ದೆಗಳು ನೀರಿನಿಂದ ತುಂಬಿ ಬೆಳೆ ಹಾಳಾಗುವ ಆತಂಕದಲ್ಲಿ ರೈತರಿದ್ದಾರೆ. ಹಳ್ಳಿಮೈಸೂರು ಹೋಬಳಿ ಭಾಗದಲ್ಲಿ ಯಥೇಚ್ಛವಾಗಿ ತಂಬಾಕು ಸಸಿಗಳನ್ನು ನಾಟಿ ಮಾಡಿದ್ದಾರೆ. ಅತಿಯಾದ ಮಳೆಯಾಗುತ್ತಿರುವುದರಿಂದ ತಂಬಾಕು ಸಸಿಗಳು ಮಣ್ಣು ಪಾಲಾಗುವ ಭೀತಿಯಲ್ಲಿ ಬೆಳೆಗಾರರು ಇದ್ದಾರೆ.
ಎಡೆಬಿಡದೆ ಮಳೆಯಾದರೆ ಸಸಿ ಬೆಳೆಯಲು ಹಾಗೂ ರಾಸಾಯನಿಕ ಗೊಬ್ಬರ ಒದಗಿಸಲು ತೊಂದರೆ ಆಗುವ ಹಿನ್ನೆಲೆಯಲ್ಲಿ ಬೆಳೆ ನಷ್ಟ ಹೊಂದುತ್ತವೆ ಎಂಬುದು ರೈತ ಬಾಂಧವರ ವ್ಯಥೆಯಾಗಿದೆ. ಈ ವರ್ಷದ ಬೇಸಿಗೆಯಿಂದ ಸಾರ್ವಜನಿಕರಿಗೆ ತೊಂದರೆ ಪ್ರಮಾಣ ಕಡಿಮೆಯಾಗಿತ್ತು. ಜನ-ಜಾನುವಾರುಗಳಿಗೆ ನೀರಿನ ತೊಂದರೆ ತಲೆದೋರಲಿಲ್ಲ. ಮುಂಗಾರು ಮಳೆ ಮುಂಚಿತವಾಗಿ ಪ್ರಾರಂಭವಾಗಿರುವುದರಿಂದ ಕೆರೆಕಟ್ಟೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಸಂಗ್ರಹವಾಗುತ್ತಿದೆ.
ಜಲಾಶಯಗಳಲ್ಲಿ ನೀರು ಭರ್ತಿ ಆಗಿರುವುದರಿಂದ ನಾಲೆಗಳಿಗೆ ನೀರು ಹರಿಸಲಾಗುತ್ತಿದೆ. ಮಳೆ ನೀರು ಹಾಗೂ ನಾಲೆಗೆ ನೀರು ಹರಿಸಿರುವುದರಿಂದ ನೀರಿನ ಪ್ರಮಾಣ ಹೆಚ್ಚಾಗಿ ಗದ್ದೆಗಳಲ್ಲಿ ಬೆಳೆದಿದ್ದ ಬೇಸಿಗೆ ಬೆಳೆ ರೈತನಿಗೆ ನಷ್ಟ ಉಂಟು ಮಾಡುವ ಲಕ್ಷಣ ಕಾಣುತ್ತಿದೆ. ಪ್ರಸಕ್ತ ಋತುಮಾನದಲ್ಲಿ ರೈತಾಪಿ ವರ್ಗದ ಜನಸಾಮಾನ್ಯರು ಮುಂಚಿತವಾಗಿ ಕೃಷಿ ಚಟುವಟಿಕೆಗಳಲ್ಲಿ ಭಾಗಿಯಾಗುವುದು ನಿಚ್ಚಳವಾಗಿದೆ. ನಾಡಿನ ಬೆನ್ನೆಲುಬು ರೈತ ಬಾಂಧವರಾಗಿರುವುದರಿಂದ ಅತಿಯಾದ ಅತಿವೃಷ್ಟಿಯಿಂದ ಯಾವುದೇ ನಷ್ಟವಾಗದಿರಲಿ ಎಂಬುದು ನಮ್ಮೆಲ್ಲರ ಆಶಯ.