

ರಾಜೇಂದ್ರ ಶಿಂಗನಮನೆ ಶಿರಸಿ
ಮಳೆಗಾಲ ಆರಂಭದೊಂದಿಗೆ ಇಲ್ಲಿನ ಹಲವು ಹಳ್ಳಿಗಳು ನಾಗರಿಕ ಸಂಪರ್ಕ ಕಳೆದುಕೊಳ್ಳುವ ಆತಂಕದಲ್ಲಿವೆ. 50ಕ್ಕೂ ಹೆಚ್ಚು ಗ್ರಾಮಗಳಲ್ಲಿ ಸಂಪರ್ಕ ಸೇತುಗಳಿಲ್ಲದೆ ಜನರ ಬದುಕು ದುಸ್ತರವಾಗಿದೆ.
ಗುಡ್ಡಗಾಡು ಜಿಲ್ಲೆಯಾದ ಉತ್ತರ ಕನ್ನಡದಲ್ಲಿ ಮಳೆ ಆರಂಭವಾದರೆ ಹಲವು ಹಳ್ಳಿಗಳನ್ನು ಹೊಳೆ, ಹಳ್ಳ-ಕೊಳ್ಳಗಳು ಆವರಿಸಿ ಗ್ರಾಮಸ್ಥರು ಜಲದಿಗ್ಬಂಧನದ ಸುಳಿಗೆ ಸಿಲುಕುವಂತೆ ಮಾಡುತ್ತವೆ. ಗ್ರಾಮದಿಂದ ಹೊರ ಹೋಗಲು ಆಗದೇ ಒಳ ಬರಲು ಆಗದೇ ಸಂಪರ್ಕವೇ ಕಳೆದುಕೊಳ್ಳುವ ದುಸ್ಥಿತಿ ಇಲ್ಲಿಯ ಜನರದ್ದು.
ಗ್ರಾಮಸ್ಥರು ಕಂಗಾಲು: ವಿದ್ಯಾರ್ಥಿ ಸ್ನೇಹಿ ಕಾಲುಸಂಕ ಯೋಜನೆ ಕೆಲವೆಡೆ ಮಂಜೂರಾದರೂ ಕಾಮಗಾರಿ ಆರಂಭವಾಗಿಲ್ಲ. ಇನ್ನು ಕೆಲವೆಡೆ ವರ್ಷದಿಂದ ಕಾಮಗಾರಿ ನಡೆಯುತ್ತಿದ್ದರೂ ಕುಂಟುತ್ತ ಸಾಗಿದೆ. ಹೀಗಾಗಿ ಮಳೆಗಾಲದ ಆರಂಭದ ಹೊತ್ತಿನಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಜಿಲ್ಲೆಯ ಬೀರನಮನೆಗದ್ದೆ, ಕೆಳಾಸೆ, ಜನ್ನಕಡ್ಕಲ್, ಮೆಣಸೆಗದ್ದೆ, ಶ್ಯಾಮನೆಗದ್ದೆ, ಅಣಶಿ, ನಾರಗಾಳಿ ಸೇರಿ 50ಕ್ಕೂ ಹೆಚ್ಚು ಕಡೆ ಗ್ರಾಮಸ್ಥರೇ ಅಡಕೆ ಮರದ ದಬ್ಬೆ, ಕಾಡು ಮರ, ಕಾಡು ಬಳ್ಳಿಗಳನ್ನು ಸಂಗ್ರಹಿಸಿ ಸಂಕಗಳ ನಿರ್ಮಾಣ ಕಾರ್ಯ ಆರಂಭಿಸಿದ್ದಾರೆ. ಕೆಲವು ಕಡೆ ಈ ಹಿಂದಿನ ವರ್ಷ ಕಟ್ಟಿದ ಸಂಕವನ್ನೇ ಬಳಸಿದರೆ ಇನ್ನು ಕೆಲವೆಡೆ ಸ್ವತಃ ಕಾಲುಸಂಕ ನಿರ್ವಿುಸಿಕೊಳ್ಳಲು ಆಗದೆ, ಸರ್ಕಾರದಿಂದ ಸಂಪರ್ಕ ಸೇತುವೂ ಅನುಷ್ಠಾನಗೊಳ್ಳದೆ ಗ್ರಾಮಸ್ಥರು ಕಂಗಾಲಾಗಿದ್ದಾರೆ.
ಮಳೆಗಾಲದಲ್ಲಿ ಗ್ರಾಮದಿಂದ ಹಳ್ಳ, ನದಿ ದಾಟಿ ಹೊರ ಊರಿಗೆ ಹೋಗಲು ಸಾಧ್ಯವಾಗುವುದಿಲ್ಲ. ಸರ್ಕಾರದಿಂದ ಕಾಲುಸಂಕ ನಿರ್ವಿುಸಿಕೊಟ್ಟಿಲ್ಲ. ಅನಿವಾರ್ಯವಾಗಿ ಗ್ರಾಮಸ್ಥರು ಸೇರಿ ಕಾಲು ಸಂಕ ಕಟ್ಟಿಕೊಳ್ಳುತ್ತೇವೆ. ಇಲ್ಲದಿದ್ದರೆ ಉಪವಾಸ ಬೀಳಬೇಕಾಗುತ್ತದೆ. | ದೇವೂ ಗೌಡ ಕೆಳಾಸೆ ಗ್ರಾಮಸ್ಥ
ಉತ್ತರ ಕನ್ನಡ ಜಿಲ್ಲೆಗೆ ಕಳೆದ ವರ್ಷ ಮಂಜೂರಾದ ಅನೇಕ ಕಾಲುಸಂಕಗಳ ಕಾಮಗಾರಿ ಇನ್ನೂ ಪೂರ್ಣವಾಗಿಲ್ಲ. ಈ ವರ್ಷ ಹೊಸದಾಗಿ ಯಾವ ಕಾಲುಸಂಕವೂ ಮಂಜೂರಾಗಿಲ್ಲ. ಕರೊನಾದಿಂದಾಗಿ ಕಾಮಗಾರಿಗಳು ಹಿಂದೆ ಬಿದ್ದಿವೆ. ಹೀಗಾಗಿ ಜಿಲ್ಲೆಯಲ್ಲಿ ಸಾಕಷ್ಟು ಕಾಲುಸಂಕಗಳ ಅಗತ್ಯವಿದೆ. ಒಟ್ಟು ಎಷ್ಟು ಕಾಲು ಸಂಕಗಳು ಬೇಕು? ಅದಕ್ಕಾಗುವ ಅಂದಾಜು ವೆಚ್ಚ ಎಷ್ಟು? ಎಂಬುದನ್ನು ಆಯಾ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಂದ ಮಾಹಿತಿ ಪಡೆದು ತಿಳಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗೆ ಸೂಚಿಸಲಾಗಿದೆ. ಕಾಲುಸಂಕಗಳ ಸಮಗ್ರ ಮಾಹಿತಿ ಪಡೆದು ಸರ್ಕಾರದ ಗಮನ ಸೆಳೆಯಲಾಗುವುದು. | ಶಿವರಾಮ ಹೆಬ್ಬಾರ ಜಿಲ್ಲಾ ಉಸ್ತುವಾರಿ ಸಚಿವ
ಕೆಳಾಸೆ ಸಂಕಷ್ಟ: ಶಿರಸಿಯ ಕೆಳಾಸೆ ಭಾಗದಲ್ಲಿ ಹರಿದ ಪುಟ್ಟ ಹೊಳೆಯೊಂದು ಗ್ರಾಮಸ್ಥರಿಗೆ ನಾಲ್ಕೈದು ಕಾಲುಸಂಕದ ಅನಿವಾರ್ಯತೆ ಸೃಷ್ಟಿಸಿದೆ. ಇಲ್ಲಿನ ಮಕ್ಕಳು ಮಳೆಗಾಲದಲ್ಲಿ ಶಾಲೆಗೆ ತೆರಳಿದರೆ ಮನೆಗೆ ಮರಳುವವರೆಗೂ ಪಾಲಕರಿಗೆ ಭೀತಿ. ಮಳೆ ಹೆಚ್ಚಿದರೆ ಪಾಲಕರು ಹೆಗಲ ಮೇಲೆ ಮಕ್ಕಳನ್ನು ಕುಳ್ಳಿರಿಸಿ ಹೊಳೆ ದಾಟಿಸುತ್ತಾರೆ. ನಾಲ್ಕೈದು ಕಡೆ ಕಾಲು ಸಂಕ ಕಟ್ಟಲು ಗ್ರಾಮಸ್ಥರಿಗೂ ಕಷ್ಟ. ಹೊಳೆ ಅಬ್ಬರಿಸಿದರೆ ಇಲ್ಲಿನ ಮಕ್ಕಳ ಶಾಲೆಗೆ ರಜೆಯಾಗುತ್ತದೆ. ಗ್ರಾಮಸ್ಥರಿಗೆ ದಿನಸಿಯಿಲ್ಲದೆ ಉಪವಾಸ ಬೀಳುವ ಸನ್ನಿವೇಶ ಎದುರಾಗುತ್ತದೆ. ಜತೆಗೆ ರೋಗಿಗಳನ್ನು ಕಂಬಳಿಯಲ್ಲಿ ಹೊತ್ತು ಸಾಗುವ ಕಷ್ಟದ ಸ್ಥಿತಿ ಇಲ್ಲಿನದಾಗಿದೆ. ಬಹುತೇಕ ಹಳ್ಳಿಗಳಲ್ಲಿ ಮಳೆ ಹೆಚ್ಚಾದಂತೆ ನಿತ್ಯದ ಚಟುವಟಿಕೆಗಳು ಬಂದ್ ಆಗಿ ಹೊಳೆ ನೀರು ಇಳಿಯುವುದನ್ನೇ ಕಾಯಬೇಕಾಗುತ್ತದೆ. ಇಂಥದ್ದೇ ಸ್ಥಿತಿ ಜಿಲ್ಲೆಯ ಹಲವು ಹಳ್ಳಿಗಳಲ್ಲಿದ್ದು, ಮಳೆಗಾಲವೆಂದರೆ ಗ್ರಾಮಸ್ಥರು ಭಯಪಡುವ ಸನ್ನಿವೇಶವಿದೆ.