ಹೊಳೆ ನೀರಿನಲ್ಲಿ ಮಿಂದೆದ್ದ ಹನುಮಪ್ಪ

ydg08
Published on

ಕೊಡೇಕಲ್: ಬರದೇವನಾಳ ಗ್ರಾಮದ ಹನುಮಂತ ದೇವರ ಮೂಲ ಸ್ಥಾನವಾದ ನಾಕನಕೆರೆ ಹನುಮಪ್ಪನಿಗೆ ಶ್ರಾವಣ ಮಾಸದ ಕೊನೆಯ ಶನಿವಾರ ಹೊಳೆ ನೀರಿನ ಅಭಿಷೇಕದೊಂದಿಗೆ ವಿವಿಧ ಸೇವೆಗಳು ಜರುಗಿದವು.

ಬೆಳಗ್ಗೆ ದೇವಸ್ಥಾನದಲ್ಲಿ ಸುಪ್ರಭಾತದೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಪ್ರಾರಂಭವಾದ ಮೇಲೆ ಭಕ್ತರು ತಂಡೋಪ ತಂಡವಾಗಿ ಹನುಮಂತ ದೇವರ ದೇವಸ್ಥಾನಕ್ಕೆ ತೆರಳಿ ವಿವಿಧ ಪೂಜೆ ಸಲ್ಲಿಸಿ, ಹರಕೆ ತೀರಿಸಿದರು. ಅರ್ಚಕ ಜಗನ್ನಾಥ ಆಚರ‍್ಯ ಜೋಶಿ ನೇತೃತ್ವದಲ್ಲಿ ಮುಖ್ಯಪ್ರಾಣ ದೇವರಿಗೆ ತುಳಸಿದಳದ ಮಾಲೆ ಸೇರಿ ವಿವಿಧ ಪುಷ್ಪಗಳ ಅಂಲಕಾರ ಸಹಿತ ಪೂಜೆ ನೆರವೇರಿಸಿದರು.

ಮದ್ಯಾಹ್ನ ೨ಕ್ಕೆ ವಾದ್ಯಮೇಳದೊಂದಿಗೆ ಮುಖ್ಯಪ್ರಾಣದೇವರ ಉತ್ಸವ ಮೂರ್ತಿ ಸಮೇತ ಪಲ್ಲಕ್ಕಿ ಸೇವೆಗೆ ಚಾಲನೆ ನೀಡಲಾಯಿತು. ಈ ವೇಳೆ ನಾಡಿಗೇರ ಮನೆತನದವರಾದ ಕಲ್ಯಾಣರಾವ್ ದೇಶಪಾಂಡೆ ಅವರು ಗ್ರಾಮದ ದೇವಸ್ಥಾನದಿಂದ ಹನುಮಂತದೇವರ ಮೂಲಸ್ಥಾನವಾಗಿರುವ ನಾಕನಕೆರೆ ದೇವಸ್ಥಾನದವರೆಗೆ ಗೋಪಾಳ ಸೇವೆ ಸಲ್ಲಿಸಿದರು. ಅದರಲ್ಲೂ ಪಲ್ಲಕ್ಕಿ ಕಡೆಗೆ ಮುಖಮಾಡಿ ನಡೆಯುವುದು ವಿಶೇಷವಾಗಿತ್ತು. ಕಲ್ಯಾಣರಾವ ನಾಡಗೇರ ಸೇರಿದಂತೆ ಪುರೋಹಿತರು, ಬರದೇವನಾಳ ಗ್ರಾಮದ ವತನದಾರ ಮನೆತನದವರು, ಬರದೇವನಾಳ, ಕೊಡೇಕಲ್, ನಾರಾಯಣಪುರ ಗ್ರಾಮಗಳಿಂದ ಭಕ್ತರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net