

ಅಥಣಿ: ಸ್ವಾವಲಂಬಿಯಾಗಿ ಬದುಕು ನಡೆಸಲು ಬಡ ಮಹಿಳೆಯರಿಗೆ ಪುರಸಭೆಯ ವಿವಿಧ ಯೋಜನೆಯಡಿ ಹೊಲಿಗೆ ಯಂತ್ರ ಹಾಗೂ ಬೆಳಕು ನೀಡುವ ಉದ್ದೇಶದಿಂದ ಇನ್ವರ್ಟರ್ ವಿತರಿಸುವ ಕಾರ್ಯ ಮಾಡಿರುವುದು ಶ್ಲಾಘನೀಯ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದ ಪುರಸಭೆಯ ಸಭಾಂಗಣದಲ್ಲಿ ೨೦೨೨-೨೩ನೇ ಸಾಲಿನ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯಡಿ ಫಲಾನುಭವಿಗಳಿಗೆ ೨೦೬ ಹೊಲಿಗೆ ಯಂತ್ರ ಹಾಗೂ ೫೩ ಇನ್ವರ್ಟರ್ ವಿತರಣಾ ಕಾರ್ಯಕ್ರಮಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು. ಸ್ವಂತ ಉದ್ಯೋಗ ಕೈಗೊಂಡು ಕುಟುಂಬ ನಿರ್ವಹಿಸಲು ಹೊಲಿಗೆ ಯಂತ್ರಗಳು ನೆರವಾಗಲಿವೆ. ಇವುಗಳಿಂದ ಮಹಿಳೆಯರು ಆರ್ಥಿಕವಾಗಿ ಸದೃಢವಾಗಲಿದ್ದಾರೆ. ವಿದ್ಯುತ್ ಸಂಪರ್ಕ ಕಡಿತವಾದ ಸಂದರ್ಭದಲ್ಲಿ ಇನ್ವರ್ಟರ್ ಮೂಲಕ ಮಕ್ಕಳು ಮನೆಯಲ್ಲಿ ಓದಲು ಮತ್ತಿತರರ ಕೆಲಸ ಕಾರ್ಯಗಳಿಗೆ ಉಪಯೋಗವಾಗಲಿದೆ ಎಂದರು. ಪಟ್ಟಣದ ರಾಜ್ಯ ಹೆದ್ದಾರಿಗಳ ಡಿವೈಡರ್‌ಗಳಲ್ಲಿ ಪುರಸಭಾ ಸದಸ್ಯರು ಸ್ವಂತ ಖರ್ಚಿನಿಂದ ಸಸಿ ನೆಟ್ಟು, ಸೌಂದರ್ಯ ಹೆಚ್ಚಿಸಬೇಕು. ತಾಲೂಕಿನಲ್ಲಿ ೨೫ ಸಾವಿರ ಸಸಿ ನೆಡುವ ಕಾರ್ಯ ಯೋಜನೆಯಂತೆ ವಿದ್ಯಾರ್ಥಿಗಳು ಸಸಿ ದತ್ತು ತೆಗೆದುಕೊಂಡು ಬೆಳಸಬೇಕು. ಅರಣ್ಯ ಇಲಾಖೆಯ ಸಹಕಾರದಿಂದ ಪರಿಸರ ಬೆಳೆಸುವ ಕಾರ್ಯ ತಾಲೂಕಿನಲ್ಲಿ ನಡೆದಿದೆ ಎಂದರು.
ಸದಸ್ಯರಾದ ಸಂತೋಷ ಸಾವಡಕರ ಹಾಗೂ ದತ್ತಾ ವಾಸ್ಟರ ಸಸಿನೆಡುವ ಕಾರ್ಯಕ್ಕೆ ಸಹಕಾರ ನೀಡುವ ಭರವಸೆ ನೀಡಿದರು.
೨೦೨೧-೨೨ನೇ ಸಾಲಿನ ೧೫ನೇ ಹಣಕಾಸು ಆಯೋಗದ ಅನುದಾನದಡಿ ಆಟೋ ಟಿಪ್ಪರ್, ೨ ಟ್ರ‍್ಯಾಕ್ಟರ್ ಮತ್ತು ೧ ಸ್ಕಿಡ್ ಲೋಡರ್ ವಾಹನಗಳಿಗೆ ಶಾಸಕರು ಪೂಜೆ ನೆರವೇರಿಸಿದರು.
ಪುರಸಭಾ ಅಧ್ಯಕ್ಷೆ ಶಿವಲೀಲಾ ಬುಟಾಳೆ, ಉಪಾಧ್ಯಕ್ಷೆ ಭುವನೇಶ್ವರಿ ಯಂಕಚ್ಚಿ, ಮುಖ್ಯಾಧಿಕಾರಿ ಅಶೋಕ ಗುಡಿಮನಿ, ಸದಸ್ಯರಾದ ಕಲ್ಲೇಶ ಮಡ್ಡಿ, ಮಲ್ಲಿಕಾರ್ಜುನ ಬುಟಾಳೆ, ರಾಜು ಗುಡೋಡಗಿ, ಉದಯ ಸೊಳಸಿ, ಪ್ರಮೋದ ಬಿಳ್ಳೂರ ಇತರರಿದ್ದರು.