ವಿಜಯವಾಣಿ ಸುದ್ದಿಜಾಲ ಕುಂದಾಣ
ಸಲು ಬಂದಿರುವ ಬೆಳೆಗಳಿಗೆ ತೋಟದಲ್ಲೇ ಬೆಲೆ ಕಟ್ಟಿ ರೈತರಿಗೆ ಮುಂಗಡ ಹಣ ಕೊಟ್ಟು ಇಡೀ ಸಲು ಸಾಗಿಸಿದ ನಂತರ ಉಳಿದ ಹಣ ಕೊಡದೆ ಯಾಮಾರಿಸುವ ಜಾಲವೊಂದು ದೇವನಹಳ್ಳಿ ತಾಲೂಕಿನಲ್ಲಿ ಕದ್ದುಮುಚ್ಚಿ ಓಡಾಡುತ್ತಿದೆ.
ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಗಲು ರಾತ್ರಿ ಕಷ್ಟಪಟ್ಟು ಬೆಳೆ ಬೆಳೆದ ದುದ್ದನಹಳ್ಳಿಯ ನೂರಾರು ರೈತರು ಮೋಸದ ಜಾಲಕ್ಕೆ ಸಿಲುಕಿ ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.ರೈತರು ಬೆಳೆದ ಬ್ರೊಕ್ಲಿ, ಪುದೀನಾ, ಕರಿಬೇವು, ಕೊತ್ತಂಬರಿ, ಬದನೆ, ಮೂಲಂಗಿ, ಗೆಡ್ಡೆ ಕೋಸು ಮುಂತಾದ ತರಕಾರಿ ಬೆಳೆಗಳಿಗೆ ದೊಡ್ಡಬಳ್ಳಾಪುರ ತಾಲೂಕು ಹೆಸರುಘಟ್ಟ ಮೂಲದ ಮಂಜುಳಾ ಎಂಬುವವರು ಗ್ರಾಮದ ದಲ್ಲಾಳಿಗಳ ಮೂಲಕ ಜಮೀನುಗಳಿಗೆ ತೆರಳಿ ತರಕಾರಿ ಬೆಳೆಗಳನ್ನು
ಖರೀದಿಸುವ ನಾಟಕವಾಡಿ ಅಂದಾಜು ದರ ನಿಗದಿಪಡಿಸಿ ಮುಂಗಡವಾಗಿ 5 ಸಾವಿರ ರೂಪಾಯಿ ಕೊಟ್ಟು ಉಳಿದ ಹಣ ಮತ್ತೆ ನೀಡುತ್ತೇವೆಂದು ನಂಬಿಸಿ ಬೆಳೆ ತೆಗೆದುಕೊಂಡು ಹೋದವರು ಮತ್ತೆ ಗ್ರಾಮದತ್ತ ತಿರುಗಿ ನೋಡಿಲ್ಲ. ಬಾಕಿ ಹಣ ಕೇಳಲು ಕರೆ ಮಾಡಿದರೆ ಆಕೆಯ ಮೊಬೈಲ್ ನಂಬರ್ ಸ್ವಿಚ್ಡ್ ಆ್ ಆಗಿದೆ ಎನ್ನುತ್ತಾರೆ ದುದ್ದನಹಳ್ಳಿಯ ಸಂತ್ರಸ್ತ ರೈತ ಮಂಜುನಾಥ್.
ಐದಾರು ವರ್ಷಗಳಿಂದ ಅಮಾಯಕ ರೈತರು ಮೋಸ ಹೋಗುತ್ತಿದ್ದಾರೆ, ಕುಂದಾಣ ಹೋಬಳಿಯ ನೂರಾರು ರೈತರನ್ನು ಯಾಮಾರಿಸಲಾಗುತ್ತಿದೆ. ಸಾಲ ಮಾಡಿ ಭೂಮಿಯನ್ನು ಹಸನು ಮಾಡಿ ಬೀಜ, ಗೊಬ್ಬರ, ನಾರು, ಔಷಧ ಕೂಲಿ ಇನ್ನಿತರ ಖರ್ಚುಗಳಿಗೆ 30 ರಿಂದ 50 ಸಾವಿರ ರೂಪಾಯಿವರೆಗೆ ಭರಿಸುತ್ತೇವೆ. ಮುಂಗಡ ಹಣ ಕೊಟ್ಟು ಹೋದ ಮಂಜುಳಾ ಉಳಿದ ಹಣ ಕೊಟ್ಟಿಲ್ಲ ಎಂದು ಮಂಜುನಾಥ್ ಅಳಲು ತೋಡಿಕೊಂಡಿದ್ದಾರೆ.
ದುದ್ದನಹಳ್ಳಿ ಆನಂದ್, ದಿನ್ನೂರು ವೆಂಕಟೇಶ್, ಅಭಿಷೇಕ್, ಮೋಹನ್ ಕುಮಾರ್, ಕುಂದಾಣ ರವಿಕುಮಾರ್, ಲೀಗದೀರಗೊಲ್ಲಹಳ್ಳಿ ಮುನಿಯಪ್ಪ, ರಾಮಣ್ಣ, ತಿಮ್ಮರಾಯಪ್ಪ, ಕುಂದಾಣ ಕೊಪ್ಪಲು ಪ್ರಕಾಶ್, ದಿಲೀಪ್ ಇನ್ನೂ ಮುಂತಾದ ರೈತರು ಮಹಿಳೆ ಕೈಗೆ ಸಲು ಬಂದ ಬೆಳೆ ಕೊಟ್ಟು ಹಣವೂ ಇಲ್ಲ, ಬೆಳೆಯೂ ಇಲ್ಲ ಎಂದು ಚಿಂತಿಸುತ್ತಿದ್ದಾರೆ.
ಇಲ್ಲಿ ಯಾಮಾರಿಸಿ, ನಾಳೆ ಪಕ್ಕದ ಊರಲ್ಲಿ ವ್ಯವಹಾರ: ಮುಂಗಡ ಹಣ ನೀಡಿ, ಬೆಳೆ ಕಟಾವು ಮಾಡಿಕೊಂಡು ಮೂರು ನಾಲ್ಕು ವರ್ಷದ ನಂತರ ವ್ಯವಹಾರ ಮಾಡಿದ ಗ್ರಾಮವನ್ನು ಬಿಟ್ಟು ಪಕ್ಕದ ಗ್ರಾಮದಲ್ಲಿ ವ್ಯವಹರಿಸುತ್ತಾರೆ. ಇಂತಹ ವಂಚನೆ ಸುತ್ತ-ಮುತ್ತ ಹೇಳತೀರಾಗಿದೆ.
ಮಂಜುಳಾ ಅವರ ಪತಿ ಸುರೇಶ ಕೆಲ ದಿನಗಳ ಹಿಂದೆ ಸೂಲಕುಂಟೆ ಗ್ರಾಮದಲ್ಲಿ ಬುಧವಾರ ಸಿಕ್ಕಿಬಿದ್ದಿದ್ದು, ಆತನ ಬೈಕ್ ಹಾಗೂ ೆನ್ ಕಸಿದುಕೊಂಡಾಗ ಊರಿನ ಮುಖಂಡರ ಸಮಕ್ಷಮದಲ್ಲಿ ಹಣ ಕೊಡಿಸುವ ನಾಟಕಮಾಡಿ ನಾಪತ್ತೆ ಆಗಿದ್ದಾನೆ. ಒಬ್ಬ ರೈತನಿಗೆ ಕನಿಷ್ಠ 50 ರಿಂದ 80 ಸಾವಿರ ವರೆಗೆ ತರಕಾರಿ ಹಣದ ಬಾಕಿ ಕೊಡಬೇಕಿದೆ ಎಂದರು ಪ್ರಗತಿ ಪರ ರೈತ ಸೂಲಕುಂಟೆ ಜಗದೀಶ್.