

ಜಿ.ಬಿ. ಹೆಸರೂರ ಶಿರಹಟ್ಟಿ
ತಾಲೂಕಿನಲ್ಲಿ ಕಟಾವಿಗೆ ಬಂದಿದ್ದ ಉಳ್ಳಾಗಡ್ಡಿ ಫಸಲು ಅತಿಯಾದ ಮಳೆಯಿಂದಾಗಿ ಹೊಲದಲ್ಲೇ ಕೊಳೆಯುತ್ತಿದೆ. ಕೈಗೆ ಬಂದು ತುತ್ತು ಬಾಯಿಗೆ ಬಾರದಂತಾಗಿರುವುದು ರೈತರನ್ನು ಮತ್ತಷ್ಟು ಆರ್ಥಿಕ ಸಂಕಷ್ಟಕ್ಕೆ ದೂಡಿದೆ.
ಕಳೆದ ವರ್ಷ ಉಳ್ಳಾಗಡ್ಡಿ ಬೆಳೆಗೆ ಬಂಪರ್ ಬೆಲೆ ಬಂದಿತ್ತು. ಈ ಬಾರಿಯೂ ಅದೃಷ್ಟ ಖುಲಾಯಿಸಬಹುದೆಂಬ ಲೆಕ್ಕಾಚಾರದಲ್ಲಿದ್ದ ರೈತರ ನಿರೀಕ್ಷೆ ಈಗ ಸತತ ಮಳೆಯಿಂದ ಹುಸಿಯಾಗಿದೆ. ತಾಲೂಕಿನ ಯರಿ ಪ್ರದೇಶವಾದ ಮಾಗಡಿ, ಛಬ್ಬಿ, ಬೆಳ್ಳಟ್ಟಿ, ಹೆಬ್ಬಾಳ, ಬನ್ನಿಕೊಪ್ಪ, ಸುಗ್ನಳ್ಳಿ, ಕೊಂಚಿಗೇರಿ, ತಂಗೋಡ, ಕಡಕೋಳ ಸೇರಿ 1,320 ಹೆಕ್ಟೇರ್ ಪ್ರದೇಶದಲ್ಲಿ ಉಳ್ಳಾಗಡ್ಡಿ ಬೆಳೆಯಲಾಗಿದೆ. ಆದರೆ, ಅತಿಯಾದ ಮಳೆಯಿಂದ ತೇವಾಂಶ ಹೆಚ್ಚಾಗಿ ಬೆಳೆಯಲ್ಲಿ ಸುಳಿ ರೋಗ ಕಾಣಿಸಿದೆ. ಉಳಿದ ಬೆಳೆಯನ್ನಾದರೂ ಕಟಾವು ಮಾಡಬೇಕೆಂದರೆ ಅದು ಕೂಡ ಕೊಳೆಯುವ ಹಂತ ತಲುಪಿದೆ.
ಉಳ್ಳಾಗಡ್ಡಿ ಬೆಳೆಯಲು ಬಿತ್ತನೆ ಬೀಜ, ಗೊಬ್ಬರ, ಔಷಧ, ಕಳೆ ತೆಗೆಯುವ ಕಾರ್ವಿುಕರ ಕೂಲಿ ಮತ್ತಿತರ ಖರ್ಚು ಸೇರಿ ಪ್ರತಿ ಎಕರೆಗೆ 25 ಸಾವಿರ ರೂ. ಖರ್ಚಾಗಿದೆ. ಆದರೀಗ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಾಲ್ ಉಳ್ಳಾಗಡ್ಡಿಗೆ 900ರಿಂದ 1,400 ರೂ.ವರೆಗೆ ಬೆಲೆ ಇದೆ. ಇದರಿಂದಾಗಿ ಬೆಳೆಗೆ ಮಾಡಿದ ಖರ್ಚು ಸಹ ಬಾರದಂತಾಗಿದೆ ಎಂದು ರೈತರು ಅಲವತ್ತುಕೊಳ್ಳುತ್ತಿದ್ದಾರೆ.
ಇನ್ನು ತಾಲೂಕಿನ ಕೆಲವೆಡೆ ಉಳ್ಳಾಗಡ್ಡಿ ಜತೆ ಮಿಶ್ರ ಬೆಳೆಯಾಗಿ ಮೆಣಸಿನಕಾಯಿ ಬೆಳೆಯಲಾಗಿದೆ. ಅದು ಸಹ ಮಳೆಯಿಂದಾಗಿ ತೇವಾಂಶ ಹೆಚ್ಚಾಗಿ ಎಲೆ ಮುಟುರು ರೋಗದಿಂದ ಗಿಡಗಳು ಕೊಳೆಯುವ ಹಂತ ತಲುಪಿವೆ.
ಕಳೆದ ವರ್ಷ ಉಳ್ಳಾಗಡ್ಡಿಗೆ ಸಿಕ್ಕಾಪಟ್ಟೆ ಬೆಲೆ ಬಂದಿತ್ತು. ಈ ಬಾರಿಯೂ ಉತ್ತಮ ಬೆಲೆ ಬರಬಹುದೆಂಬ ನಿರೀಕ್ಷೆಯಿಂದ ಸಾಲ ಮಾಡಿ ಕಷ್ಟಪಟ್ಟು ಬೆಳೆದ ಫಸಲು ಕಟಾವು ಹಂತದಲ್ಲಿತ್ತು. ಆದರೆ, ಸತತವಾಗಿ ಸುರಿದ ಮಳೆಯಿಂದ ತೇವಾಂಶ ಹೆಚ್ಚಾಗಿ ಬೆಳೆಯೆಲ್ಲ ಭೂಮಿಯಲ್ಲೇ ಕೊಳೆಯುಂತಾಗಿದೆ. ರೈತರನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡಲು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಉಳ್ಳಾಗಡ್ಡಿ ಬೆಳೆ ಹಾನಿಗೆ ಪರಿಹಾರ ನೀಡಬೇಕು. | ಬಸವಣ್ಣೆಪ್ಪ ಜಕ್ಕಲಿ, ಸುಗ್ನಳ್ಳಿ ಗ್ರಾಮದ ರೈತ
ಶಿರಹಟ್ಟಿ ತಾಲೂಕಿನಲ್ಲಿ 350 ಹೆಕ್ಟೇರ್ಗಿಂತ ಹೆಚ್ಚು ಪ್ರದೇಶದಲ್ಲಿ ಉಳ್ಳಾಗಡ್ಡಿ ಬೆಳೆ ಹಾಳಾಗಿದೆ. ಕೃಷಿ, ತೋಟಗಾರಿಕೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ಮಾಡಿ ತಹಸೀಲ್ದಾರ್ ಹಾಗೂ ಇಲಾಖೆಗಳ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು. | ಸುರೇಶ ಕುಂಬಾರ, ತೋಟಗಾರಿಕೆ ಇಲಾಖೆ ಶಿರಹಟ್ಟಿ ಹಿರಿಯ ಸಹಾಯಕ ನಿರ್ದೇಶಕ