ಹೊರರಾಜ್ಯದ ವಾಹನಗಳಿಗೆ ಪ್ರವೇಶ ಶುಲ್ಕ

21-GPT-1A
ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಯೋಜನೆಯ ಚೆಕ್ ಪೋಸ್ಟ್‌ಗಳಲ್ಲಿ ಪ್ರವೇಶ ಶುಲ್ಕ ವಸೂಲಿ ಮಾಡಲಾಗುತ್ತಿದೆ.
Published on

ಗುಂಡ್ಲುಪೇಟೆ: ಬಂಡೀಪುರದ ಮಾರ್ಗವಾಗಿ ಸಾಗುವ ಹೊರರಾಜ್ಯದ ವಾಹನಗಳಿಗೆ ಅರಣ್ಯ ಇಲಾಖೆ ಪ್ರವೇಶ ಶುಲ್ಕ ವಸೂಲಿ ಆರಂಭಿಸಿದೆ.
ಶುಕ್ರವಾರದಿಂದ ಅರಣ್ಯ ಇಲಾಖೆಯು ಹುಲಿ ಯೋಜನೆಯ ತಮಿಳುನಾಡು ಹಾಗೂ ಕೇರಳಕ್ಕೆ ಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಾಗುವ ಹೊರರಾಜ್ಯಗಳ ವಾಹನಗಳಿಂದ ಪ್ರವೇಶ ಶುಲ್ಕ ವಸೂಲಿ ಮಾಡಲಾರಂಭಿಸಿದೆ. ತಮಿಳುನಾಡು ರಸ್ತೆಯ ಮೇಲುಕಾಮನಹಳ್ಳಿ ಹಾಗೂ ಕೆಕ್ಕನಹಳ್ಳ ಚೆಕ್‌ಪೋಸ್ಟ್, ಕೇರಳ ರಸ್ತೆಯ ಮದ್ದೂರು ಹಾಗೂ ಮೂಲೆಹೊಳೆ ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿ ನಿಯೋಜಿಸಿ ಪ್ರವೇಶಶುಲ್ಕ ವಸೂಲಿ ಆರಂಭಿಸಿದೆ. ಲಘು ವಾಹನಗಳಿಗೆ 20 ರೂ., ದೊಡ್ಡ ವಾಹನಗಳಿಗೆ 50 ರೂಪಾಯಿ ನಿಗದಿಸಲಾಗಿದೆ.

ಬಂಡೀಪುರಕ್ಕೆ ಹೊಂದಿಕೊಂಡಿರುವ ನೆರೆಯ ಮಧುಮಲೈ ಅರಣ್ಯ ಪ್ರದೇಶದ ಮಾರ್ಗವಾಗಿ ಸಾಗುವ ಹೊರರಾಜ್ಯಗಳ ವಾಹನಗಳಿಗೆ ಚೆಕ್ ಪೋಸ್ಟ್‌ನಲ್ಲಿ ತಮಿಳುನಾಡು ಸರ್ಕಾರ ಹಸಿರು ತೆರಿಗೆ ವಿಧಿಸುತ್ತಿದೆ. ಈ ಹಣವನ್ನು ಪರಿಸರ ಸಂಬಂಧಿತ ಚಟುವಟಿಕೆಗಳಿಗೆ ಬಳಸಿಕೊಳ್ಳಲಾಗುತ್ತಿದೆ. ನಾಗರಹೊಳೆ ಅಭಯಾರಣ್ಯದಲ್ಲಿಯೂ ಪ್ರವೇಶ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಂಡೀಪುರದಲ್ಲಿಯೂ ಹಸಿರು ತೆರಿಗೆ ವಸೂಲು ಮಾಡಲು ಅರಣ್ಯ ಇಲಾಖೆ ಪ್ರಸ್ತಾವನೆ ಕಳುಹಿಸಿದ್ದರೂ ಸರ್ಕಾರದ ಮಟ್ಟದಲ್ಲಿ ಅನುಮತಿ ದೊರಕಲಿಲ್ಲ. ಈ ಹಿನ್ನೆಲೆಯಲ್ಲಿ ಹುಲಿ ಯೋಜನೆಯ ವ್ಯಾಪ್ತಿಯ ಚೆಕ್‌ಪೋಸ್ಟ್‌ಗಳಲ್ಲಿ ಕರ್ನಾಟಕ ನೋಂದಣಿ ಹೊರತುಪಡಿಸಿ ಬೇರೆ ಹೊರರಾಜ್ಯಗಳ ವಾಹನಗಳಿಂದಲೂ ಪ್ರವೇಶ ಶುಲ್ಕ ವಸೂಲಾತಿ ಆರಂಭಿಸಿದೆ.

ಹಿಂದೆ ಬಂಡೀಪುರದಲ್ಲಿಯೂ ಹೊರರಾಜ್ಯಗಳ ವಾಹನಗಳಿಂದ ಹಸಿರು ತೆರಿಗೆ ವಸೂಲಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಇದರ ಬದಲು ಹುಲಿ ಸಂರಕ್ಷಿತ ಪ್ರದೇಶಕ್ಕೆ ಪ್ರವೇಶ ಶುಲ್ಕ ವಸೂಲಾತಿ ಮಾಡುವಂತೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದರಿಂದ ಇಂದಿನಿಂದ ಆರಂಭಿಸಲಾಗಿದೆ.
ಡಾ.ರಮೇಶ್‌ಕುಮಾರ್ ಬಂಡೀಪುರ ಹುಲಿ ಯೋಜನೆ ನಿರ್ದೇಶಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net