

ಹಾವೇರಿ: ಜಿಲ್ಲೆಯಲ್ಲಿ ಕರೊನಾ ವೈರಸ್ ಹರಡುವಿಕೆ ತಪ್ಪಿಸಲು ಮುನ್ನೆಚ್ಚರಿಕೆಯಾಗಿ ಪ್ರಯಾಣಿಕರಿಗೆ ಕಡ್ಡಾಯವಾಗಿ ಸ್ಕ್ರೀನಿಂಗ್ ಮಾಡಲು ಜಿಲ್ಲೆಯ ರೈಲ್ವೆ, ಬಸ್ ನಿಲ್ದಾಣಗಳಲ್ಲಿ ಆರೋಗ್ಯ ಇಲಾಖೆಯ ಹೆಲ್ತ್ಡೆಸ್ಕ್ ಸಿಬ್ಬಂದಿಗೆ ಸಹಕಾರ ನೀಡಲು ಪೊಲೀಸ್ ಸಿಬ್ಬಂದಿಯನ್ನು ಶುಕ್ರವಾರದಿಂದ ನಿಯೋಜಿಸಲಾಗಿದೆ.
ರೈಲ್ವೆ ಹಾಗೂ ಬಸ್ ನಿಲ್ದಾಣದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿಗೆ ಪ್ರಯಾಣಿಕರು ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಇದ್ದಲ್ಲಿ ಪೊಲೀಸ್ ಸಹಕಾರ ಪಡೆದು ಸಂಶಯಾಸ್ಪದ ವ್ಯಕ್ತಿಗಳ ಸ್ಕ್ರೀನಿಂಗ್ ನಡೆಸಲಾಗುತ್ತಿದೆ. ರೈಲ್ವೆ ಹಾಗೂ ಬಸ್ನಿಲ್ದಾಣಗಳಲ್ಲಿ ದಿನದ 24 ತಾಸು ತಪಾಸಣೆ ನಡೆಸಬೇಕಾಗಿದೆ. ನಿತ್ಯವೂ ಹೊರರಾಜ್ಯ ಹಾಗೂ ಪ್ರದೇಶಗಳಿಂದ ಸಾವಿರಾರು ಪ್ರಯಾಣಿಕರು ಬಂದು ಹೋಗುವುದರಿಂದ ಮಾಹಿತಿ ಸಂಗ್ರಹಿಸಬೇಕಾದ ಕಾರಣ ಪೊಲೀಸ್ ನಿಯೋಜಿಸಲು ಎಸ್ಪಿಯವರಿಗೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಪ್ರಯಾಣದ ಮುನ್ನೆಚ್ಚರಿಕೆ ಕುರಿತು ಹೆಲ್ತ್ಡೆಸ್ಕ್ನಿಂದ ಜಾಗೃತಿ ಮೂಡಿಸಲಾಗುತ್ತಿದೆ. ಪ್ರಯಾಣಿಕರು ಯಾವ ಊರಿನಿಂದ ಬಂದಿದ್ದಾರೆ ಎಂಬ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಹೊರರಾಜ್ಯಗಳಿಂದ ಬಂದಿದ್ದರೆ, ಅವರ ಸಂಪರ್ಕ ಸಂಖ್ಯೆ ಬರೆದುಕೊಂಡು ಎಲ್ಲಿಗೆ ಹೋಗುತ್ತಾರೆ. ಎಷ್ಟು ದಿನ ವಾಸ್ತವ್ಯವಿರುತ್ತಾರೆ ಎಂಬ ಮಾಹಿತಿಯನ್ನು ಆರೋಗ್ಯ ಇಲಾಖೆ ಸಿಬ್ಬಂದಿ ಸಂಗ್ರಹಿಸುತ್ತಿದ್ದಾರೆ. ಯಾರಿಗಾದರೂ ಕರೊನಾ ಸೋಂಕಿನ ಶಂಕೆ ಕಂಡುಬಂದರೆ ಅವರನ್ನು ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ಕಳುಹಿಸಲು ಮೇಲಧಿಕಾರಿಗಳು ತಿಳಿಸಿದ್ದಾರೆ. ಆದರೆ, ಈವರೆಗೂ ಅಂತಹ ಯಾವುದೇ ವ್ಯಕ್ತಿಗಳು ಕಂಡುಬಂದಿಲ್ಲ.
ರೈಲುಗಳು ನಿಲ್ದಾಣಕ್ಕೆ ಬರುವುದಕ್ಕಿಂತ ಮುನ್ನ ಹಾಗೂ ಬಂದ ಬಳಿಕ ಕರೊನಾ ವೈರಸ್ ಕುರಿತು ಧ್ವನಿವರ್ಧಕಗಳ ಮೂಲಕ ಮಾಹಿತಿ ನೀಡಲಾಗುತ್ತಿದೆ. ಹಾಗೂ ರೈಲ್ವೆ ನಿಲ್ದಾಣದಲ್ಲಿರುವ ಕ್ಯಾಂಟೀನ್, ಮಿಲ್ಕ್ ಪಾರ್ಲರ್, ಕುಡಿಯುವ ನೀರಿನ ವ್ಯವಸ್ಥೆ ಹೊರತು ಪಡಿಸಿ ಉಳಿದೆಲ್ಲ ಆಹಾರ ಪದಾರ್ಥ, ತಿಂಡಿ, ತಿನಿಸುಗಳ ಮಾರಾಟ ಹಾಗೂ ರೈಲ್ವೆ ಪ್ರಯಾಣಿಕರಿಗೆ ಒದಗಿಸಲಾಗುತ್ತಿದ್ದ ಬ್ಲಾಂಕೆಟ್ ನೀಡುವುದನ್ನು ಸ್ಥಗಿತಗೊಳಿಸಲಾಗಿದೆ.
ರೈಲ್ವೆ ಮುಂಗಡ ಬುಕ್ಕಿಂಗ್ ರದ್ದು:
ಪ್ರತಿದಿನ ರೈಲ್ವೆ ನಿಲ್ದಾಣದ ಶೌಚಗೃಹ, ಕಾರಿಡಾರ್ಗಳ ಸ್ವಚ್ಛತೆ ನಡೆಯುತ್ತಿದೆ. ಹರಿಹರ, ಹುಬ್ಬಳ್ಳಿ, ಯಶವಂತಪುರ ಹಾಗೂ ಬೆಂಗಳೂರಿಗೆ ಪ್ರತಿದಿನ ಸಂಚರಿಸುವ ರೈಲುಗಳ ಪ್ರತಿ ಬೋಗಿಯನ್ನು ಸ್ವಚ್ಛಗೊಳಿಸಲಾಗುತ್ತಿದೆ. ಕರೊನಾ ವೈರಸ್ ತಡೆಯುವ ಉದ್ದೇಶದಿಂದ ಹಾವೇರಿ ಮಾರ್ಗವಾಗಿ ಪ್ರತಿದಿನ ಸಂಚರಿಸುತ್ತಿದ್ದ ಬೆಳಗ್ಗೆ 7 ಗಂಟೆಯ ಇಂಟರ್ಸಿಟಿ ಎಕ್ಸ್ಪ್ರೆಸ್, ಬೆ. 5 ಗಂಟೆಯ ವಾಸ್ಕೋ, ಯಶವಂತಪುರ, ಸಂಜೆ 7.35ರ ಇಂಟರ್ಸಿಟಿ ಎಕ್ಸ್ಪ್ರೆಸ್ ಹಾಗೂ ರಾತ್ರಿ 9 ಗಂಟೆಯ ಯಶವಂತಪುರ ವಾಸ್ಕೋ ಎಕ್ಸ್ಪ್ರೆಸ್ ರೈಲುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಮುಂಗಡ ಬುಕ್ಕಿಂಗ್ ಆಗಿದ್ದ ಟಿಕೆಟ್ಗಳನ್ನು ರದ್ದುಗೊಳಿಸಲಾಗಿದೆ ಎಂದು ಹಾವೇರಿ ರೈಲ್ವೆ ನಿಲ್ದಾಣದ ಅಧಿಕಾರಿ ವಿಜಯಕುಮಾರ್ ಸಿಂಗ್ ತಿಳಿಸಿದರು.
ಬಸ್ಗಳ ಸಂಖ್ಯೆ ಕಡಿತ:
ಹಾವೇರಿಯಿಂದ ಸಂಚರಿಸುವ ಬಸ್ ಸಂಖ್ಯೆಗಳನ್ನು ಕಡಿತಗೊಳಿಸಲಾಗಿದೆ. ಹಾವೇರಿಯಿಂದ ಬಾಂಬೆಗೆ ಹೋಗುವ ನಾಲ್ಕು ಬಸ್ಗಳಲ್ಲಿ ಒಂದು ಬಸ್ ಮಾತ್ರ ಸಂಚರಿಸುತ್ತಿದೆ. ಮಹಾರಾಷ್ಟ್ರಕ್ಕೆ ಜಿಲ್ಲೆಯಿಂದ 20 ಬಸ್ಗಳಲ್ಲಿ 5 ಬಸ್ಗಳನ್ನು ಕಡಿತಗೊಳಿಸಲಾಗಿದೆ. ಪ್ರಯಾಣದ ಸಂಖ್ಯೆ ಶೇಕಡ 20ರಷ್ಟು ಕಡಿಮೆಯಾಗಿದೆ. ಶುಕ್ರವಾರದಿಂದ ಬಾಂಬೆ, ಪೂಣಾ, ಗೋವಾ, ಪಣಜಿಗೆ ಸಂಚರಿಸುವ ಎಲ್ಲ ಬಸ್ಗಳನ್ನು ಸ್ಥಗಿತಗೊಳಿಸಲಾಗಿದೆ. ಜಿಲ್ಲೆಯಲ್ಲಿ ಸಂಚರಿಸುವ ಬಸ್ಗಳನ್ನೂ ಕಡಿತಗೊಳಿಸಲಾಗಿದೆ. ಬಸ್ ನಿಲ್ದಾಣದಲ್ಲಿರುವ ಹೆಲ್ತ್ಡೆಸ್ಕ್ನಲ್ಲಿ ಇಬ್ಬರು ವೈದ್ಯಕೀಯ ಆರೋಗ್ಯ ಸಹಾಯಕರು ////24*7//// ಕಾರ್ಯನಿರ್ವಹಿಸುತ್ತಿದ್ದಾರೆ. ಹೊರ ಜಿಲ್ಲೆಯಿಂದ ಬರುವ ಬಸ್ಗಳ ಚಾಲಕರು ಮತ್ತು ನಿರ್ವಾಹಕರಿಂದ ರೋಗದ ಲಕ್ಷಣವಿರುವ ವ್ಯಕ್ತಿಗಳ ಪ್ರಯಾಣದ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ ಎಂದು ಸಾರಿಗೆ ನಿಯಂತ್ರಕ ಲೊಕೇಶ ಮಿನಗಲವರ ತಿಳಿಸಿದರು.
ಸಾರಿಗೆ ಇಲಾಖೆಗೆ ಪ್ರತಿದಿನ 12 ಲಕ್ಷ ನಷ್ಟ:
ಜಿಲ್ಲೆಯಿಂದ ಹೊರಹೋಗುವ ಹಾಗೂ ಜಿಲ್ಲೆಯಲ್ಲಿಯೇ ಸಂಚರಿಸುವ ಅನೇಕ ವಾಹನಗಳನ್ನು ರದ್ದುಗೊಳಿಸಿರುವ ಪರಿಣಾಮ ಪ್ರತಿದಿನ ವಾಯವ್ಯ ಸಾರಿಗೆ ಇಲಾಖೆಗೆ 10ರಿಂದ 12 ಲಕ್ಷ ರೂ. ನಷ್ಟವಾಗುತ್ತಿದೆ. ಶನಿವಾರ ಹಾಗೂ ಭಾನುವಾರ ಇದು ಇನ್ನಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಅಲ್ಲದೆ, ಹೊರ ಜಿಲ್ಲೆಗೆ ಹೋಗುವ ಪ್ರತಿ ಬಸ್ಗೂ ನಿತ್ಯವೂ ಸ್ಯಾನಿಟೈಜೇಶನ್ ಮಾಡಲಾಗುತ್ತದೆ. ಸ್ಥಳೀಯ ಬಸ್ಗಳನ್ನು ಡೆಟಾಲ್ ಮತ್ತು ಪಿನಾಯಿಲ್ ಬಳಸಿ ಸ್ವಚ್ಛಗೊಳಿಸಲಾಗುತ್ತಿದೆ. ವಿಭಾಗದಲ್ಲಿಯೇ ಸಿಬ್ಬಂದಿಯಿಂದ ಕಾಟನ್ ವಾಶೇಬಲ್ ಮಾಸ್ಕ್ ತಯಾರಿಸಿ ಪೂರೈಸಲಾಗುತ್ತದೆ. ಸಾರಿಗೆ ಸಿಬ್ಬಂದಿ ಹಾಗೂ ಪ್ರಯಾಣಿಕರ ಆರೋಗ್ಯದ ಬಗ್ಗೆ ಮುನ್ನೆಚ್ಚರಿಕೆ ವಹಿಸಿದ್ದೇವೆ ಎಂದು ವಾಕರಸಾಸಂ ವಿಭಾಗೀಯ ನಿಯಂತ್ರಣಾಧಿಕಾರಿ ಜಗದೀಶ ಲಮಾಣಿ ತಿಳಿಸಿದ್ದಾರೆ.