

ಕಳಸ: ಹೊರನಾಡು ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ರಥೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು. ಗಣಪತಿ ಪೂಜೆ, ರಂಗಪೂಜೆಯೊಂದಿಗೆ ಜಾತ್ರಾ ಉತ್ಸವ ಆರಂಭಗೊಂಡಿತು.
ಹೊರನಾಡಿನಲ್ಲಿ ಬೆಳಗ್ಗೆಯಿಂದಲೇ ಜನ ಜಂಗುಳಿ ಏರ್ಪಟ್ಟಿತ್ತು. ಕಳಸ, ಚಿಕ್ಕನಕುಡಿಗೆ, ಬಲಿಗೆ, ಬಾಳೆಹೊಳೆ, ಕುದುರೆಮುಖ, ಜಾಂಬ್ಳೆ, ನೆಲ್ಲಿಬೀಡು, ಕಲ್ಕೋಡು, ಮರಸಣಿಗೆ, ಹಿರೇಬೈಲು, ಕಲ್ಮಕ್ಕಿ, ಜಾವಳಿ, ಹಳುವಳ್ಳಿ, ಮುನ್ನೂರುಪಾಲ್, ಬಸರೀಕಟ್ಟೆ, ಅಂತಾರಾಜ್ಯಗಳಿಂದಲೂ ಸಾವಿರಾರು ಭಕ್ತರು ಆಗಮಿಸಿದ್ದರು.
ಇಡೀ ಊರನ್ನು ಸ್ವಚ್ಛಗೊಳಿಸಿ ತಳಿರು ತೋರಣಗಳಿಂದ ಶೃಂಗಾರ ಮಾಡಲಾಗಿತ್ತು. ಇಡೀ ದೇವಾಲಯಕ್ಕೆ ವಿದ್ಯುತ್‌ದೀಪ, ಹೂ ಗಳಿಂದ ಶೃಂಗಾರ ಮಾಡಲಾಗಿತ್ತು. ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿಗಳನ್ನು ತೆರೆಯಲಾಗಿದೆ.
ಬ್ರಹ್ಮರಥದಲ್ಲಿ ಜಗನ್ಮಾತೆ ಶ್ರೀ ಅನ್ನಪೂರ್ಣೇಶ್ವರಿಯು ವಿರಾಜಾಮಾನರಾಗುವುದನ್ನು ಕಣ್ತುಂಬಿಸಿಕೊಳ್ಳಲು ಸಾವಿರಾರು ಭಕ್ತರು ಕಾತರದಿಂದ ಕಾಯುತ್ತಿದ್ದರು. ಮಧ್ಯಾಹ್ನ 12 ಗಂಟೆಗೆ ಸ್ತುತಿ ಪಾಠಕರು ಸ್ತುತಿ ಘೋಷಗಳನ್ನು ಪಠಿಸುತ್ತ, ಛತ್ರಿ ಚಾಮರ, ಮಂಗಳವಾದ್ಯಗಳೊಂದಿಗೆ ಹೂವಿನಿಂದ ಸಿಂಗರಿಸಿ ದೇವರ ಉತ್ಸವಮೂರ್ತಿಯನ್ನು ಹೊತ್ತುಕೊಂಡು ಬರಲಾಯಿತು. ಈ ಸಂದರ್ಭದಲ್ಲಿ ಸಾವಿರಾರು ಕೃಷಿಕರ ಮುಖದಲ್ಲಿ ಸಂತೋಷ ಕಂಡುಬಂದಿತು. ದೇವರ ಮೂರ್ತಿಯನ್ನು ಕಂಡ ಭಕ್ತರು ಭಕ್ತಿ, ಭಾವ ಪರವಶವಾದರು. ರಥದ ಬಳಿ ಬಂದ ಜಗನ್ಮಾತೆ ಅನ್ನಪೂರ್ಣೇಶ್ವರಿಯನ್ನು ಭವ್ಯ ರಥದಲ್ಲಿ ಕುಳ್ಳಿರಿಸಿ ಪೂಜೆ ನೆರವೇರಿಸಲಾಯಿತು. ಆ ವೇಳೆ ಭಕ್ತರು ದೇವರಿಗೆ ಫಲ, ಪುಷ್ಪ, ಅರ್ಚನೆ ಸೇವೆ ಮಾಡಿಸಿದರು. ಬೆಳೆದ ಕಾಫಿ, ಕಾಳುಮೆಣಸು, ಏಲಕ್ಕಿ ಮುಂತಾದ ದವಸ ಧಾನ್ಯಗಳನ್ನು ಬ್ರಹ್ಮರಥಕ್ಕೆ ಎಸೆದು ಪುನೀತರಾದರು. ಭಕ್ತಾದಿಗಳು ರಥದ ಚಕ್ರಕ್ಕೆ ತೆಂಗಿನಕಾಯಿಯನ್ನು ಒಡೆದು ಹರಕೆ ತೀರಿಸಿದರು. ನಂತರ ಅಲಂಕೃತ ಬ್ರಹ್ಮ ರಥವನ್ನು ಶ್ವೇತ ವಸ್ತ್ರದಾರಿಗಳಾದ ಭಕ್ತಾದಿಗಳು ಎಳೆದರು.
ರಾತ್ರಿ ರಾಜಬೀದಿಯಲ್ಲಿ ಮೆರವಣಿಗೆ ನಡೆಸಲಾಯಿತು. ಗ್ರಾಮ ಪ್ರದಕ್ಷಿಣೆಯಲ್ಲಿ ಬಂದ ಬ್ರಹ್ಮರಥಕ್ಕೆ ಮನೆ ಮನೆ ಬಾಗಿಲಲ್ಲಿ ಹಣ್ಣು, ಕಾಯಿ, ಫಲ, ಪುಷ್ಪಗಳನ್ನು ಅರ್ಪಿಸಿ ಪೂಜಿಸಿದರು. ಗ್ರಾಮದುದ್ದಕ್ಕೂ ಸಾಗಿದ ರಥ ಮರಳಿ ದೇಗುಲವನ್ನು ಸೇರಿತು. ಮೆರವಣಿಗೆಯಲ್ಲಿ ಚಂಡೆ, ಓಲಗ, ವಿವಿಧ ವೇಷಭೂಷಣ ವಿನೋದಾವಳಿಗಳು ಮೆರುಗು ನೀಡಿದವು.
ದೇವಾಲಯದ ಧರ್ಮಕರ್ತ ಡಾ. ಜಿ.ಭೀಮೇಶ್ವರ ಜೋಷಿ, ಜೋಷಿ ಕುಟುಂಬವರ್ಗದವರು ಇದ್ದರು.