

*ಇನಿದನಿ ಬಳಗದ ಮುಖ್ಯಸ್ಥ ಡಾ.ಕಾ.ರಾಮೇಶ್ವರಪ್ಪ ಅಭಿಪ್ರಾಯ
*ವಿಶ್ವ ಸಮ್ಮೇಳನ ಯಶಸ್ವಿಕರ್ತೃಗಳಿಗೆ ಸನ್ಮಾನ
ಚಾಮರಾಜನಗರ: ಅಮೇರಿಕಾದಲ್ಲಿ ವಿಶ್ವ ಕನ್ನಡ ಸಮ್ಮೇಳನ ಸಂಘಟನೆ ಮಾಡುವುದು ಬಹುದೊಡ್ಡ ಕೆಲಸವಾಗಿದ್ದು, ಈ ನಿಟ್ಟನಲ್ಲಿ ಹೊರನಾಡು ಕನ್ನಡಿಗರಲ್ಲಿರುವ ಕನ್ನಡ ಪ್ರೀತಿಗೆ ಬೆಲೆ ಕಟ್ಟಲಾಗದು ಎಂದು ಇನಿದನಿ ಬಳಗದ ಮುಖ್ಯಸ್ಥ, ಜಾನಪದ ಕಲಾವಿದ ಹಾಗೂ ಆಹಾರ ಇಲಾಖೆಯ ನಿವೃತ್ತ ಜಂಟಿ ನಿರ್ದೇಶಕ ಡಾ.ಕಾ.ರಾಮೇಶ್ವರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಕೋರಂ ಹೋಟೆಲ್ನಲ್ಲಿ ಮೈಸೂರಿನ ಸಾಂಸ್ಕೃತಿಕ ಸಂಘಟನೆ ಇನಿದನಿ ಮಣ್ಣ ಮಕ್ಕಳ ಹೊನ್ನ ಪದಗಳ ಬಳಗದ ವತಿಯಿಂದ ಅಮೇರಿಕಾದ ವರ್ಜೀನಿಯಾ ರಾಜ್ಯದ ರಿಚ್ಮಂಡ್ ನಗರದಲ್ಲಿ ಜರುಗಿದ ವಿಶ್ವಕನ್ನಡ ಸಮ್ಮೇಳನವನ್ನು ಯಶಸ್ವಿಯಾಗಿ ಸಂಘಟಿಸಿದ ಅಕ್ಕ ಸಂಸ್ಥೆಯ ಕಾರ್ಯದರ್ಶಿ ಮಾದೇಶ್, ಬಸವರಾಜ್, ಆತಿಥ್ಯ ಸಮಿತಿಯ ಶ್ರೀಶೈಲನ್ ಹಾಗೂ ವಿನಾಯಕ್ ಅವರಿಗೆ ಬುಧವಾರ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಕನ್ನಡ ನಾಡು-ನುಡಿ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿ ಸಂರಕ್ಷಣೆಗೆ ಕಳೆದ ಮೂರು ದಶಕಗಳಿಂದ ಅಕ್ಕ ಸಂಸ್ಥೆ ಮತ್ತು ಅಮೇರಿಕಾದ ಕನ್ನಡಿಗರು ಸೇವೆ ಸಲ್ಲಿಸುತ್ತಿದ್ದಾರೆ. ಈ ಮೂಲಕ ಅಮೇರಿಕಾದಲ್ಲಿರುವ ಕನ್ನಡಿಗರು ಕನ್ನಡ ಸಂಘಟನೆಗಳನ್ನು ಕಟ್ಟಿಕೊಂಡಿದ್ದಾರೆ. ಅದರ ಜತೆಗೆ ಭಾಷಾ ಕಲಿಕಾ ಕೇಂದ್ರಗಳು, ಸಾಂಸ್ಕೃತಿಕ ಭವನಗಳು ಹಾಗೂ ಮಂದಿರಗಳನ್ನು ತೆರೆದಿದ್ದಾರೆ. ಈ ನಿಟ್ಟನಲ್ಲಿ ಹೊರನಾಡ ಕನ್ನಡ ಸಂಘಟನೆಗಳ ಪಾತ್ರ ಅಪಾರವಾಗಿದೆ ಎಂದರು.
ಅಮೇರಿಕಾದಲ್ಲಿ ಅನೇಕ ಕಲಾವಿದರು ಮತ್ತು ಸಾಹಿತಿಗಳು ರೂಪುಗೊಂಡಿದ್ದು, ಅಕ್ಕ ಸಂಸ್ಥೆಯ ವಿಶ್ವ ಕನ್ನಡ ಸಮ್ಮೇಳನಗಳ ಸಂಘಟನೆಗೆ ಕೊಟ್ಯಾಂತರ ರೂಪಾಯಿಗಳನ್ನು ವೆಚ್ಚ ಮಾಡುತ್ತಾರೆ. ನಾವು ನಮ್ಮ ದೇಶದಲ್ಲಿ ನೆಲೆಸಿ ಸಮ್ಮೇಳನ ಮಾಡುವುದು ದೊಡ್ಡ ವಿಷಯವಲ್ಲ. ಆದರೇ ಅಮೇರಿಕಾದಲ್ಲಿ ವಿಶ್ವ ಕನ್ನಡ ಸಮ್ಮೇಳನ ಸಂಘಟನೆ ಮಾಡುವುದು ದೊಡ್ಡ ಕೆಲಸವೆಂದು ತಿಳಿಸಿದರು.
ವಿಜಯವಾಣಿ ಬ್ಯೂರೋ ಮುಖ್ಯಸ್ಥ ಸತ್ಯನಾರಾಯಣ ಮಾತನಾಡಿ, ಅಮೇರಿಕಾದ ಅಕ್ಕ ಸಂಸ್ಥೆಯ ಕಾರ್ಯಕ್ರಮಗಳ ಬಗ್ಗೆ ಕರ್ನಾಟಕದಲ್ಲಿ ಆಗಾಗ ಚರ್ಚೆಗಳು ನಡೆಯುತ್ತಲೇ ಇವೆ. ಡಾ.ಕಾ.ರಾಮೇಶ್ವರಪ್ಪ ಮತ್ತು ಮಾದೇಶ್ ಬಸವರಾಜ್ ಅವರು ನೀಡಿದ ವಿವರಣೆಗಳನ್ನು ಕೇಳಿ ತುಂಬಾ ಸಂತೋಷವಾಯಿತು. ಸರ್ಕಾರಗಳು ಯಾವುದೇ ಸಹಾಯ ಮಾಡದಿದ್ದರೂ ಅಕ್ಕ ಸಂಸ್ಥೆ ಕಳೆದ ಮೂರು ದಶಕಗಳಿಂದ 12 ವಿಶ್ವ ಕನ್ನಡ ಸಮ್ಮೇಳನಗಳು ಮತ್ತು ಅಸಂಖ್ಯಾತ ನಾಡು-ನುಡಿಯ ಕಾರ್ಯಕ್ರಮ ಹಾಗೂ ದಾನ ದತ್ತಿ ಕಾರ್ಯಕ್ರಮ ಮಾಡುತ್ತಿರುವುದು ಹೆಮ್ಮೆಯ ವಿಚಾರವಾಗಿದೆ ಎಂದು ಹೇಳಿದರು.
ಹೊರ ದೇಶದಲ್ಲಿರುವ ಕನ್ನಡ ಸಂಘಟನೆಗಳಿಗೆ ಅಲ್ಲಿರುವ ಪ್ರತಿಯೊಬ್ಬ ಕನ್ನಡಿಗರೂ ಸ್ಪಂದಿಸುತ್ತಾರೆ. ನುಡಿ ಹಬ್ಬಗಳಲ್ಲಿ ಭಾಗವಹಿಸಿ ಸಂಭ್ರಮಿಸುತ್ತಾರೆ. ಈ ನಿಟ್ಟಿನಲ್ಲಿ ಹೊರನಾಡು ಕನ್ನಡಿಗರ ಭಾಷಾ ಪ್ರೇಮ ದೊಡ್ಡದಾಗಿದೆ. ಮನರಂಜನೆ ಮನಸ್ಸನ್ನು ಅರಳಿಸುವಂತಿರಬೇಕು. ಆದರೆ ಮನಸ್ಸು, ಮೆದುಳು ಕೆರಳಿಸುವಂತಹ ವಾತಾವರಣ ಬದಲಾಗಬೇಕು. ನಮ್ಮ ನೆಲಮೂಲದ ಸಂಸ್ಕೃತಿ ಬಿಂಬಿಸುವ ಕೆಲಸವನ್ನು ಇನಿದನಿ ಮಣ್ಣ ಮಕ್ಕಳ ಹೊನ್ನ ಪದಗಳ ಬಳಗದ ಕಲಾವಿದರು ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ನರಸಿಂಹ ಮೂರ್ತಿ, ಇನಿದನಿ ಮಣ್ಣ ಮಕ್ಕಳ ಹೊನ್ನ ಪದಗಳ ಬಳಗದ ಕಲಾವಿದರು ಹಾಗೂ ಇತರರು ಹಾಜರಿದ್ದರು.