

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೃಷಿ ಕುಟುಂಬದಿಂದ ಬಂದ ಬಸವರಾಜ ಹೊರಟ್ಟಿ ಮನುಷ್ಯರ ಬಗ್ಗೆ ಮಾತ್ರವಲ್ಲ ಸಾಕುಪ್ರಾಣಿಗಳ ಬಗ್ಗೆಯೂ ಪ್ರೀತಿ, ಗೌರವ ಹೊಂದಿದ್ದಾರೆ. ಶಿಕ್ಷಕ ಪ್ರತಿನಿಧಿಯಾಗಿ ಶಿಕ್ಷಕರನ್ನು ಗೌರವದಿಂದ ಕಾಣುವ ಅವರ ಮನಸ್ಥಿತಿ ಮೆಚ್ಚುವಂತಹದ್ದು ಎಂದು ಹುಬ್ಬಳ್ಳಿ ಮೂರುಸಾವಿರಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.
ನಗರದ ಜನತಾ ಶಿಕ್ಷಣ ಸಮಿತಿ ವತಿಯಿಂದ ಜೆಎಸ್‌ಎಸ್ ಕಾಲೇಜಿನಲ್ಲಿ ಶನಿವಾರ ಏರ್ಪಡಿಸಿದ್ದ ಬಸವರಾಜ ಹೊರಟ್ಟಿ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸಭಾಪತಿ ಬಸವರಾಜ ಹೊರಟ್ಟಿ, ಪ್ರಾಮಾಣಿಕವಾಗಿ ಶ್ರಮಪಟ್ಟು ಹೆಸರು ಗಳಿಸಿದಾಗ ಮಾತ್ರ ಮಾನಸಿಕ ನೆಮ್ಮದಿ ಸಾಧ್ಯ. ಅಡ್ಡದಾರಿ ಹಿಡಿದಾಗಲಿ, ರಾಜಕೀಯ ಪ್ರೇರಣೆಯಿಂದ ಗಳಿಸಿದ ಹೆಸರು, ಪಡೆದ ಪ್ರಶಸ್ತಿಗಳು ಕ್ಷಣಿಕ. ಶಿಕ್ಷಕರು 8 ಬಾರಿ ನನ್ನನ್ನು ಆಯ್ಕೆ ಮಾಡಿರುವುದು, ಮೂರು ಬಾರಿ ಸಭಾಪತಿಯಾಗಿ ಆಯ್ಕೆ ಆಗಿರುವುದು ನನ್ನ ಪ್ರಾಮಾಣಿಕ ಸೇವಾ ನಿಷ್ಠೆಗೆ ಸಂದ ಗೌರವ. ಈ ಗೌರವ ಶಿಕ್ಷಕ ಸಮುದಾಯಕ್ಕೆ ಸಲ್ಲುತ್ತದೆ ಎಂದರು.
ನನಗೆ ಉಪಕಾರ ಮಾಡಿದ ಶಿಕ್ಷಕರಿಗೆ ಎಂದೂ ಅಪಕಾರ ಮಾಡದೆ ನಿತ್ಯ ಅವರನ್ನು ಸ್ಮರಿಸುತ್ತೇನೆ. ಶಿಕ್ಷಣ ಸಂಸ್ಥೆಯನ್ನು ಕಟ್ಟುವುದು ದೊಡ್ಡದಲ್ಲ, ಸಂಸ್ಥೆ ಮೂಲಕ ಮಕ್ಕಳ ಮನಸ್ಸಿನಲ್ಲಿ ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರ ಬಿತ್ತುವುದು ಮುಖ್ಯ. ಜೆಎಸ್‌ಎಸ್ ಈ ಕಾರ್ಯ ಮಾಡುತ್ತಿದೆ ಎಂದರು.
ಹುಬ್ಬಳ್ಳಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ವೈ.ಎಂ. ಭಜಂತ್ರಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಜೆಎಸ್‌ಎಸ್ ಕಾರ್ಯದರ್ಶಿ ಡಾ. ಅಜಿತ ಪ್ರಸಾದ ಮಾತನಾಡಿ, ಜೆಎಸ್‌ಎಸ್ ಹಾಗೂ ಹೊರಟ್ಟಿ ಅವರಿಗೆ ಅವಿನಾಭಾವ ಸಂಬಂಧವಿದೆ. ನಮ್ಮ ಸಂಸ್ಥೆಗೆ ಅಪಾರ ಸಹಾಯ, ಸಹಕಾರ ನೀಡುತ್ತಿದ್ದಾರೆ ಎಂದರು.
ರಾಜಣ್ಣ ಕೊರವಿ, ಡಾ. ವೈ.ಎಂ. ಭಜಂತ್ರಿ, ಡಾ. ಭಾರತಿ ಶಾನಭಾಗ, ಲಲಿತಕಲಾ ಸಂಘದ ವಿದ್ಯಾರ್ಥಿಗಳು, ಶಿಕ್ಷಕರು, ಇತರರು ಇದ್ದರು. ಜೆಎಸ್‌ಎಸ್ ಕಾಲೇಜಿನ ಅಭಿವೃದ್ಧಿ ಅಧಿಕಾರಿ ಡಾ. ಸೂರಜ ಜೈನ್ ಸ್ವಾಗತಿಸಿದರು. ಡಾ. ಜಿನದತ್ತ ಹಡಗಲಿ ನಿರೂಪಿಸಿದರು. ಮಹಾವೀರ ಉಪಾಧ್ಯೆ ವಂದಿಸಿದರು.