ಹೊರಗೆ ಹೋಗಕ್ಕಾಗಲ್ಲ... ಒಳಗೆ ಇರಕ್ಕಾಗಲ್ಲ... : ಬಂಡೆಗಳ ನಾಡಲ್ಲಿ ಬಿಸಿಲ ಝಳಕ್ಕೆ ಜನ ತತ್ತರ

1
Published on

ಗಂಗಾಧರ್ ಬೈರಾಪಟ್ಟಣ ರಾಮನಗರ

ಬಂಡೆಗಳ ನಾಡು ಬಿಸಿಲ ಝಳಕ್ಕೆ ತತ್ತರಿಸುತ್ತಿದೆ. ದಿನದಿಂದ ದಿನಕ್ಕೆ ತಾಪ ಏರುತ್ತಿದ್ದು, ಜನತೆಯನ್ನು ಕಂಗಾಲಾಗುವಂತೆ ಮಾಡಿದೆ.

ಸಪ್ತಗಿರಿಗಳ ನಾಡು ಎಂದು ಖ್ಯಾತಿ ಪಡೆದಿರುವ ಜಿಲ್ಲೆಯಲ್ಲಿ ಹಗಲು ಮಾತ್ರವಲ್ಲದೆ ರಾತ್ರಿಯಾದಂತೆಯೂ ಧಗೆ ಹೆಚ್ಚುತ್ತಿದೆ. ಅಕ್ಕಪಕ್ಕದಲ್ಲಿ ಬೆಟ್ಟಗಳಿರುವುದರಿಂದ ಬೆಳಗ್ಗೆಯಿಂದ ಬಿಸಿಲಿಗೆ ಕಾದ ಬಂಡೆಗಳು ರಾತ್ರಿಯಾಗುತ್ತಿದ್ದಂತೆಯೇ ತಣ್ಣನೆ ಗಾಳಿ ಹೀರಿಕೊಂಡು ತಂಪಾಗತೊಡಗುತ್ತವೆ. ಈ ವೇಳೆ ಬಂಡೆಗಳಿಂದ ಬರುವ ಬಿಸಿಗಾಳಿ ರಾತ್ರಿ ವೇಳೆಯಲ್ಲಿಯೂ ಜನರ ನಿದ್ದೆಗೆಡಿಸುತ್ತಿದೆ.

ಜಿಲ್ಲೆಯಲ್ಲಿ ಹಿಂದಿನ ಬೇಸಿಗೆಗಳಿಗಿಂತ ಈ ಬಾರಿ ಬಿಸಿಲು ಹೆಚ್ಚಾಗಿದೆ. ತಾಪಮಾನ 36 ಡಿಗ್ರಿವರೆಗೂ ತಲುಪಿದೆ. ಇದರಿಂದ ಧಗೆಯಲ್ಲಿ ಜೀವನ ಸಾಗಿಸುವುದು ಜನರಿಗೆ ಕಷ್ಟವಾಗಿದೆ. ಹೊರಗೆ ಹೋಗಲು ಆಗಲ್ಲ, ಒಳಗೆ ಇರಲೂ ಆಗದೆ ಜನರು ತ್ರಿಶಂಕು ಸ್ಥಿತಿಯಲ್ಲಿದ್ದಾರೆ.

ಮಾರ್ಚ್ ಆರಂಭದಿಂದಲೂ ದಿನದಿಂದ ದಿನಕ್ಕೆ ಬಿಸಿಲ ತಾಪ ಹೆಚ್ಚಾಗುತ್ತಿದೆ. ಬೆಳಗ್ಗೆ 9ರ ಸುಮಾರಿಗೆ ಎಳೆ ಬಿಸಿಲು ಚುರುಕು ಮುಟ್ಟಿಸುವಂತಿರುತ್ತದೆ. ಮಧ್ಯಾಹ್ನ 12.30ರ ನಂತರ ರಸ್ತೆಗಳಲ್ಲಿ ತಿರುಗಾಡಿದರೆ ಜ್ವರ ಬಂದಂತಹ ಅನುಭವವಾಗುತ್ತಿದೆ. ತಾಪ ತಡೆದುಕೊಳ್ಳಲಾರದೆ ನಾಗರಿಕರು ತಂಪು ಪಾನೀಯ, ಕಬ್ಬಿನ ಹಾಲು, ಎಳನೀರು, ಹಣ್ಣಿನ ರಸಗಳ ಮೊರೆ ಹೋಗುತ್ತಿರುವುದು ನಿತ್ಯವೂ ಸಾಮಾನ್ಯವಾಗಿದೆ.

ಹಣ್ಣುಗಳ ವ್ಯಾಪಾರ ಜೋರು: ಸೂರ‌್ಯ ಕಿರಣಗಳಿಂದ ದೇಹ ನಿರ್ಜಲೀಕರಣಕ್ಕೆ ಒಳಗಾಗದಂತೆ ತಡೆಯಲು ಜನತೆ ದ್ರವ ಆಹಾರ ಮತ್ತು ಹಣ್ಣುಗಳ ಕಡೆಗೆ ಮುಖ ಮಾಡುತ್ತಿದ್ದಾರೆ. ಬಿಸಿಲಿನ ತಾಪ ಹಣ್ಣಿನ ವ್ಯಾಪಾರಿಗಳಿಗೆ ಶುಕ್ರದೆಸೆ ತಂದಿದೆ. ಕಲ್ಲಂಗಡಿ, ದ್ರಾಕ್ಷಿ, ಐಸ್ ಕ್ರೀಂ, ಸೌತೆಕಾಯಿ ಕರ್ಜೂರಗಳನ್ನು ಜನರು ಹೆಚ್ಚಾಗಿ ಕೊಳ್ಳುತ್ತಿದ್ದಾರೆ. ಒಂದು ಎಳನೀರಿಗೆ ಕನಿಷ್ಠ 25ರಿಂದ 30ರೂ.ವರೆಗೆ ಮಾರಾಟ ಮಾಡಲಾಗುತ್ತಿದೆ. ಜಿಲ್ಲೆಗೆ ಸಾಕಾಗುವಷ್ಟು ಎಳನೀರು ಪೂರೈಕೆಯಾಗುತ್ತಿದೆ. ಇದರ ಜತೆಗೆ, ಬೆಂಗಳೂರು ಮಹಾನಗರಕ್ಕೆ ಇಲ್ಲಿಂದಲೇ ಸರಬರಾಜು ಮಾಡಲಾಗುತ್ತಿದೆ. ಅಲ್ಲಿನ ಮಾರುಕಟ್ಟೆಯಲ್ಲಿ ಜಿಲ್ಲೆಯ ಎಳೆನೀರಿಗೆ ಸಾಕಷ್ಟು ಬೇಡಿಕೆ ಇದೆ.

ಆರೋಗ್ಯದ ಕಡೆ ಇರಲಿ ಗಮನ: ಮುಂದಿನ ದಿನಗಳಲ್ಲಿ ಬಿಸಿಲ ತಾಪ 40 ಡಿಗ್ರಿ ತಲುಪಿದರೂ ಆಶ್ವರ್ಯಪಡಬೇಕಾಗಿಲ್ಲ. ಈ ಹಿನ್ನೆಲೆಯಲ್ಲಿ ಬೇಸಿಗೆ ನಿಭಾಯಿಸಲು ಜನತೆ ದೇಹ ನಿರ್ಜಲೀಕರಣವಾಗದಂತೆ ನೋಡಿಕೊಳ್ಳಬೇಕಿದೆ. ಬೇಸಿಗೆ ಮುಗಿಯುವವರೆಗೂ ಬಿಗಿಯಾದ ಹಾಗೂ ಗಾಢ ಬಟ್ಟೆಗಳನ್ನು ಧರಿಸಬಾರದು. ಕುಷನ್‌ಯುಕ್ತ ಕುರ್ಚಿಯಲ್ಲಿ ಕೂರಬಾರದು, ಬಾಯಾರಿದಾಗೆಲ್ಲಾ ನೀರು ಕುಡಿಯಬೇಕು. ಕಾಫಿ, ಟೀ, ಸಕ್ಕರೆ ಅಂಶವಿರುವ ಪದಾರ್ಥಗಳ ಸೇವನೆ ಹೆಚ್ಚಾಗಿ ಬೇಡ. ಬಿಸಿಯಾದ ಮಸಾಲೆಯುಕ್ತ ಆಹಾರ ಸೇವನೆ ಬೇಡ. ಬಿಗಿಯಾದ ಹಾಗೂ ಗಾಳಿಯಾಡದ ಪಾದರಕ್ಷೆ ಹಾಗೂ ಶೂ - ಧರಿಸಬಾರದು. ಸಾಧ್ಯವಾದಷ್ಟು ತಾಜಾ ಹಣ್ಣಿನ ರಸ ಸೇವಿಸಿದರೆ ಉತ್ತಮ. ಕುದಿಸಿ ಆರಿಸಿದ ನೀರು ಸೇವಿಸಬೇಕು. ಸಾಧ್ಯವಾದಷ್ಟು ಮನೆಯಿಂದಲೇ ಕುಡಿಯಲು ನೀರು ಒಯ್ಯುವುದು ಉತ್ತಮ.

ಬಿಸಿಲ ತಾಪ ಹೆಚ್ಚಿದ್ದು ಉಷ್ಣಾಂಶ ತಡೆಯುವ ನಿಟ್ಟಿನಲ್ಲಿ ಸಾರ್ವಜನಿಕರು ಕ್ರಮವಹಿಸಬೇಕಿದೆ. ದ್ರವ ಆಹಾರಗಳನ್ನು ಹೆಚ್ಚಿಗೆ ಸೇವಿಸಬೇಕು. ಇದರಿಂದ ದೇಹದಲ್ಲಿ ನೀರಿನ ಅಂಶ ಕಡಿಮೆ ಆಗುವುದು ತಪ್ಪುತ್ತದೆ. ಅಗತ್ಯ ಮುಂಜಾಗ್ರತೆ ವಹಿಸಬೇಕು ಹಾಗೂ ಆರೋಗ್ಯ ಇಲಾಖೆ ಮಾರ್ಗದರ್ಶನ ಪಾಲಿಸಬೇಕು. ಡಾ. ಬಿ.ಎಸ್. ನಿರಂಜನ್, ಡಿಎಚ್‌ಒ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net