

ಗೋಕರ್ಣ: ಐತಿಹಾಸಿಕ ತಾಣ ಗೋಕರ್ಣ ಸ್ವಚ್ಛತೆ ವಿಷಯದಲ್ಲಿ ಹೊರಗೆ ಥಳಕು, ಒಳಗೆ ಹುಳುಕು ಎಂಬಂತಾಗಿದೆ. ಊರ ಪ್ರವೇಶ ದ್ವಾರದಿಂದ ರಥಬೀದಿ, ಸಮುದ್ರ ತೀರದವರೆಗೆ ನಿಯಮಿತವಾಗಿ ಶುಚಿ ಮಾಡಲಾಗುತ್ತದೆ. ಆದರೆ, ಬಹುತೇಕ ವಾರ್ಡ್ಗಳಲ್ಲಿ ತಿಂಗಳಿಗೆ ಒಮ್ಮೆಯೂ ಸ್ವಚ್ಛತೆ ಕಾರ್ಯ ಮಾಡುತ್ತಿಲ್ಲ. ಹಾಗೆಂದು, ಸ್ಥಳೀಯ ಆಡಳಿತ ನಿರ್ಲಕ್ಷಿಸಿದೆ ಎಂದಲ್ಲ; ಸ್ವಚ್ಛತಾ ಸಿಬ್ಬಂದಿ ಇರುವುದು ಕಡಿಮೆ. ಎಲ್ಲ ವಾರ್ಡ್ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲು ಪಂಚಾಯಿತಿ ಹೆಣಗಾಡುವಂತಾಗಿದೆ.
ಗ್ರಾಪಂ ವ್ಯಾಪ್ತಿ ಒಂದು ನಗರಸಭೆಯ ವ್ಯಾಪ್ತಿಯನ್ನೂ ಮೀರಿದೆ. ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುವ ಐದು ಬೀಚ್ಗಳು ಸೇರಿ 8.2 ಕಿಮೀ ಸುತ್ತಳತೆಯ 10 ವಾರ್ಡ್ಗಳಲ್ಲಿ ಇದು ಕಾರ್ಯನಿರ್ವಹಿಸಬೇಕಾಗಿದೆ. ನಿತ್ಯ ಸ್ವಚ್ಛತೆಗೆ ಪ್ರತಿ ವಾರ್ಡ್ಗೆ ಕನಿಷ್ಠ 3 ಸ್ವಚ್ಛತಾ ಸಿಬ್ಬಂದಿಯಂತೆ 30 ಕಾರ್ವಿುಕರ ಅಗತ್ಯವಿದೆ. ಆದರೆ, ಇಲ್ಲಿರುವವರು 10 ಸಿಬ್ಬಂದಿ ಮಾತ್ರ. ಆ ಪೈಕಿ ನಾಲ್ವರು ಮಹಿಳಾ ಸಿಬ್ಬಂದಿಯಿದ್ದು, ಇವರಷ್ಟೇ ಕಸ ಗೂಡಿಸಲು ಲಭ್ಯ. ಒಬ್ಬ ವಾಹನ ಚಾಲಕ. ಇಬ್ಬರು ಕೈಗಾಡಿ ಮೂಲಕ ಕಸ ಸಂಗ್ರಹಿಸಿದರೆ ಉಳಿದ ಮೂವರು ವಾಹನದಲ್ಲಿರುತ್ತಾರೆ. ಇಷ್ಟು ಜನ ನಿತ್ಯ ಬೆಳಗ್ಗೆ 7ರಿಂದ ಸಂಜೆ 7 ರವರೆಗೆ ಪಟ್ಟಣದಲ್ಲಿ ಸ್ವಚ್ಛತೆ ಕಾರ್ಯ ನಡೆಸುತ್ತಾರೆ.
ಎಲ್ಲ ಮುಖ್ಯ ಬೀಚ್ಗಳ ಸ್ವಚ್ಛತೆಯನ್ನು ಅಲ್ಲಿರುವ ಅಂಗಡಿಕಾರರ ಮತ್ತು ಹೋಟೆಲ್ ಮಾಲೀಕರ ಯೂನಿಯನ್ ಉತ್ತಮವಾಗಿ ನೋಡಿಕೊಳ್ಳುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಗೋಕರ್ಣದ ಸಮುದ್ರ ಸನಿಹ ಒಳಭಾಗದ ದಂಡೆಭಾಗ, ಬೇಲೆಹಿತ್ತಲು, ರುದ್ರಪಾದ, ಬಿಜ್ಜೂರು, ತಾರಮಕ್ಕಿ ಕಡೆಗಳಲ್ಲಿ ವಿದೇಶಿ ಮತ್ತು ಸ್ಥಳೀಯ ಪ್ರವಾಸಿಗರು ವಾಸಿಸುತ್ತಿದ್ದಾರೆ. ಇದರಿಂದ ಸಹಜವಾಗಿ ಈ ಪ್ರದೇಶಗಳಲ್ಲಿ ತ್ಯಾಜ್ಯ ಮತ್ತು ಕಸದ ಪ್ರಮಾಣ ಹೆಚ್ಚಾಗಿದೆ. ಸ್ವಚ್ಛತಾ ಕಾರ್ವಿುಕರು ಆಗೊಮ್ಮೆ- ಈಗೊಮ್ಮೆ ಇಲ್ಲಿ ಸ್ವಚ್ಛತೆ ಮಾಡುವುದರಿಂದ ಕಸ ಹೆಚ್ಚಾಗಿ ಕಂಡು ಬರುತ್ತಿದೆ.
ಹಣ ಇಲ್ಲದೆ ಹೊಣೆ ಇಲ್ಲ?
ನಿಯಮದ ಪ್ರಕಾರ ಒಂದು ಗ್ರಾಪಂ ತನ್ನ ಒಟ್ಟು ಆದಾಯದ ಶೇ. 40ರಷ್ಟನ್ನು ಮಾತ್ರ ಆಡಳಿತ ಮತ್ತು ಸಿಬ್ಬಂದಿ ವೆಚ್ಚಕ್ಕೆ ವ್ಯಯಿಸಬಹುದು. ಇದರ ಪ್ರಕಾರ ಪಂಚಾಯಿತಿಗೆ 16 ಲಕ್ಷ ರೂ. ಮಿತಿಯಿದೆ. ಈಗಾಗಲೆ ಗ್ರಾಪಂ ಈ ಮಿತಿಯನ್ನು ಮೀರಿದೆ. ಇಲ್ಲಿ ಸದ್ಯ 10 ಜನ ಸ್ವಚ್ಛತಾ ಕಾರ್ವಿುಕರು ಮತ್ತು ಮೂವರು ಹಂಗಾಮಿ ನೌಕರರಿದ್ದು, ಅವರಿಗಾಗಿ 16 ಲಕ್ಷ ರೂ.ಗಳಿಗೂ ಹೆಚ್ಚು ವೆಚ್ಚ ತಗಲುತ್ತಿದೆ.
ಏರದ ಆದಾಯ: ಪಂಚಾಯಿತಿಯ ಕರ ಆಕರಣೆಯನ್ನು 52 ಲಕ್ಷ ರೂ.ಗೆ ನಿಗದಿ ಪಡಿಸಲಾಗಿದೆ. ಆದರೆ, ಪ್ರತಿವರ್ಷ 40 ಲಕ್ಷ ರೂ. ವಸೂಲಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಈ ಗ್ರಾಪಂ ಕೋಟ್ಯಂತರ ರೂ. ಆದಾಯ ಗಳಿಸುವ ಅವಕಾಶವಿದೆ. ಸಿಆರ್ರೆಡ್, ಬಿನ್ಶೇತ್ಕಿ ನಿಯಮದಂಥ ಕಾನೂನಿನ ತೊಡಕಿನಿಂದಾಗಿ ಇಲ್ಲಿರುವ ಶೇ. 90 ಹೋಟೆಲ್, ವಸತಿ ಗೃಹ, ರೆಸ್ಟೋರೆಂಟ್, ಬೀಚ್ಗಳಲ್ಲಿನ ಅಂಗಡಿ ಮತ್ತು ಹೋಮ್ ಸ್ಟೇಗಳಿಗೆ ಅನುಮತಿಯನ್ನು ಗ್ರಾಪಂ ಒದಗಿಸುತ್ತಿಲ್ಲ. ಹೀಗಾಗಿ ಇವುಗಳಿಂದ ಬರಬಹುದಾದ ಕೋಟ್ಯಂತರ ರೂ. ಆದಾಯಕ್ಕೆ ಕತ್ತರಿ ಬಿದ್ದಿದೆ.
ಅನುಮತಿಗೆ ತಕರಾರು: ಈ ನಡುವೆ ಬೀಚ್ ಅಂಗಡಿಗಳಿಗೆ ಹಂಗಾಮಿ ಪರವಾನಗಿ ನೀಡಲಾಗುತ್ತಿತ್ತು. ಇದರಿಂದ ಪ್ರತಿ ವರ್ಷ 12 ರಿಂದ 15 ಲಕ್ಷ ರೂ. ಕರ ಸಂದಾಯವಾಗುತ್ತಿತ್ತು. ಆದರೆ, ಇದಕ್ಕೆ ಕರಾವಳಿ ವಲಯ ನಿಯಂತ್ರಣ ಇಲಾಖೆ ತಕರಾರು ಮಾಡಿದೆ. ಹೀಗಾಗಿ 3 ವರ್ಷದಿಂದ ತಾತ್ಕಾಲಿಕವಾಗಿ ನೀಡುವ ಅನುಮತಿಯಿಂದ ಬರುವ ಹಣ ಕೈತಪ್ಪಿದೆ.
ಗೋಕರ್ಣದ ಬೀಚ್ಗಳು ಮಾತ್ರವಲ್ಲದೆ, ಎಲ್ಲ ವಾರ್ಡ್ಗಳು ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಹೀಗಾಗಿ ಎಲ್ಲ ಕಡೆಗಳಲ್ಲಿ ಸ್ವಚ್ಛತೆ ಕಾಪಾಡುವ ಅಗತ್ಯವಿದೆ. ಈ ಬಗ್ಗೆ ಪ್ರತ್ಯೇಕ ಯೋಜನೆ ಮಾಡಿ ಅಗತ್ಯ ಧನಸಹಾಯ ಪಡೆಯಲು ಯತ್ನಿಸಲಾಗುವುದು.| ಮಂಜುನಾಥ ಜನ್ನು ಗೋಕರ್ಣ ಗ್ರಾಪಂ ಅಧ್ಯಕ್ಷಗೋಕರ್ಣ ಗ್ರಾಪಂಗೆ ಸ್ವಚ್ಛತಾ ಸಿಬ್ಬಂದಿ ಕೊರತೆಯಿದೆ. ಇದರಿಂದ ಸ್ವಚ್ಛತಾ ಕಾರ್ಯದಲ್ಲಿ ಯೋಜಿತ ಗುರಿ ಮುಟ್ಟಲಾಗುತ್ತಿಲ್ಲ. ಗ್ರಾಪಂ ಆದಾಯ ವೃದ್ಧಿ, ಸರ್ಕಾರದ ಅನುಮತಿ ಮತ್ತು ಅನುದಾನದ ಮೂಲಕ ಸಿಬ್ಬಂದಿ ಹೆಚ್ಚಿಸಲು ಪ್ರಯತ್ನಿಸುವ ಅಗತ್ಯವಿದೆ.| ವಿನಯಕುಮಾರ ಪಿಡಿಒ ಗೋಕರ್ಣ