

ವಿಜಯವಾಣಿ ಸುದ್ದಿಜಾಲ ಧಾರವಾಡ
ಹೊರಗುತ್ತಿಗೆ ಆಧಾರದಲ್ಲಿ ಕಚೇರಿಯ ವಿವಿಧ ಕೆಲಸಕ್ಕೆ ನೇಮಿಸಿಕೊಳ್ಳುವ ಗುತ್ತಿಗೆ ನೌಕರರಿಗೆ ಸರ್ಕಾರದಿಂದ ನಿರ್ಧರಿತ ನ್ಯಾಯಯುತ ವೇತನ ದೊರೆಯುವಂತೆ ಜವಾಬ್ದಾರಿ ನಿರ್ವಹಿಸಿ, ಸರ್ಕಾರಿ ಅಧಿಕಾರಿಗಳಾದ ನಾವು ಇತರರಿಗೆ ಮಾದರಿ ಆಗೋಣ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕಾರ್ಮಿಕ ಇಲಾಖೆ ಆಶ್ರಯದಲ್ಲಿ ಸೋಮವಾರ ಏರ್ಪಡಿಸಿದ್ದ ಸರ್ಕಾರದ ವಿವಿಧ ಇಲಾಖೆ, ನಿಗಮ ಮಂಡಳಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೊರಗುತ್ತಿಗೆ ನೌಕರರಿಗೆ ದೊರಕುವ ಶಾಸನಾತ್ಮಕ ಸೌಲಭ್ಯ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಅರಿವು ಮೂಡಿಸುವ ಜಿಲ್ಲಾಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಹೊರಗುತ್ತಿಗೆ ನೌಕರರನ್ನು ನೇಮಿಸಿಕೊಳ್ಳುವ ಪ್ರತಿ ಇಲಾಖೆ ಮುಖ್ಯಸ್ಥರು, ಅಧಿಕಾರಿಗಳು ಅವರಿಗೆ ನ್ಯಾಯಯುತ ವೇತನ ಸಿಗುವ ಖಾತರಿ ಮಾಡಿಕೊಳ್ಳಬೇಕು. ಮಾನವ ಸಂಪನ್ಮೂಲ ಒದಗಿಸುವ ಏಜೆನ್ಸಿ, ಗುತ್ತಿಗೆದಾರ ಪ್ರಚಲಿತ ಜಾರಿಯಲ್ಲಿರುವ ಕಾನೂನು ಪಾಲಿಸುವಂತೆ ನೋಡಿಕೊಳ್ಳಬೇಕು. ಕೌಶಲ ಮತ್ತು ಅಕೌಶಲಯುತ ಕಾರ್ಮಿಕರಿಗೆ ನೀಡುವ ವೇತನ ಸರಿಯಾಗಿ ಸಿಗುವಂತೆ ಇಲಾಖಾ ಮುಖ್ಯಸ್ಥರು ಜವಾಬ್ದಾರಿ ನಿರ್ವಹಿಸಬೇಕು ಎಂದರು.
ವಲಯವಾರು ಉದ್ದಿಮೆಗಳಿಗೆ ಅಗತ್ಯವಿರುವ ಸಿಬ್ಬಂದಿಗೆ ಪ್ರತ್ಯೇಕವಾದ ವೇತನ ನಿಗದಿ ಆಗಿರುತ್ತದೆ. ಕಾರ್ಮಿಕ ಇಲಾಖೆ ಅಧಿಕಾರಿಗಳು ಈ ಕುರಿತು ಉದ್ದಿಮೆದಾರರಿಗೆ ಅರಿವು ಮೂಡಸಬೇಕು ಎಂದರು.
ಕಾರ್ಮಿಕ ಇಲಾಖೆ ಬೆಳಗಾವಿ ಪ್ರಾದೇಶಿಕ ವಿಭಾಗದ ಉಪ ಕಾರ್ಮಿಕ ಆಯುಕ್ತ ಡಿ.ಜಿ. ನಾಗೇಶ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಹೊರಗುತ್ತಿಗೆ ನೌಕರರಿಗೆ ದೊರಕುವ ಶಾಸನಾತ್ಮಕ ಸೌಲಭ್ಯ ಕುರಿತು ಪ್ರಾತ್ಯಕ್ಷಿಕೆ ಮೂಲಕ ವಿವರಿಸಿದರು.
ಜಿಪಂ ಉಪ ಕಾರ್ಯದರ್ಶಿ ಬಿ.ಎಸ್. ಮೂಗನೂರಮಠ, ಜಿಪಂ ಮುಖ್ಯ ಲೆಕ್ಕಾಧಿಕಾರಿ ಲಲಿತಾ ಲಮಾಣಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಪಾಟೀಲ ಶಶಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ. ಸಂಗಪ್ಪ ಗಾಬಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಕಾರ್ಮಿಕ ಇಲಾಖೆ ಕಾರ್ಮಿಕ ಅಧಿಕಾರಿಗಳು, ಹಿರಿಯ ಕಾರ್ಮಿಕ ನಿರೀಕ್ಷಕರು ಸೇರಿ ವಿವಿಧ ಸರ್ಕಾರಿ ಇಲಾಖೆ, ನಿಗಮ ಮಂಡಳಿಗಳ ಅಧಿಕಾರಿಗಳು ಭಾಗವಹಿಸಿದ್ದರು.