

ಚಾಮರಾಜನಗರ: ಕೆಎಸ್ಆರ್ಟಿಸಿಯಲ್ಲಿ ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಅವ್ಯವಹಾರ ನಡೆಯುತ್ತಿದ್ದು, ಹೊರಗುತ್ತಿಗೆ ಚಾಲಕರಿಂದ ಜಿಲ್ಲೆಯಲ್ಲಿ ಹೆಚ್ಚಿನ ಅಪಘಾತ ಸಂಭವಿಸುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಕ್ವಾಲಿಟಿ ನವೀನ್ ಆರೋಪಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಹೊರಗುತ್ತಿಗೆ ನೌಕರರನ್ನು ಹಣದ ಬೇಡಿಕೆ ಇಟ್ಟು ಆಯ್ಕೆ ಮಾಡಿಕೊಂಡಿರುವ ಅಧಿಕಾರಿಗಳ ನಿರ್ಲಕ್ಷ್ಯದಿಂದ ಒಂದು ತಿಂಗಳಲ್ಲಿ ಎಂಟರಿಂದ ಹತ್ತು ಅಪಘಾತಗಳು ಕೆಎಸ್ಆರ್ ಟಿ ಸಿ ಹೊರಗುತ್ತಿಗೆ ಚಾಲಕರಿಂದ ಆಗುತ್ತಿದೆ. ನೂರಾರು ಜನ ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ ಈ ರೀತಿ ಅಪಘಾತಗಳು ನಡೆದರೆ ಯಾರು ಹೊಣೆ ಎಂದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.
ಹೊರಗುತ್ತಿಗೆ ಚಾಲಕರನ್ನು ಆಯ್ಕೆ ಮಾಡುವಾಗ ವಾಹನ ಪರವಾನಗಿ (ಡಿ ಎಲ್) ಪರೀಕ್ಷೆಯಲ್ಲಿ ಪಾಸಾದವರನ್ನು ಮಾತ್ರ ಕೆಲಸಕ್ಕೆ ತೆಗೆದುಕೊಳ್ಳಬೇಕು ಇಲ್ಲವಾದಲ್ಲಿ ಮುಂದೆ ದಿನದಲ್ಲಿ ಕರವೇ ವತಿಯಿಂದ ಕೆಎಸ್ಆರ್ ಟಿಸಿ ಡಿಸಿ ಅವರ ಕಚೇರಿ ಮುಂದೆ ಧರಣಿ ಕುಳಿತು ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಕಾರ್ಮಿಕ ಘಟಕದ ಅಧ್ಯಕ್ಷ ಹರೀಶ್ ಮಾತನಾಡಿ, ಕೆಎಸ್ಆರ್‌ಟಿಸಿಯಲ್ಲಿ ಹೊರಗುತ್ತಿಗೆ ಚಾಲಕರ ನೇಮಕಾತಿಯಲ್ಲಿ 30 ರಿಂದ 40 ಸಾವಿರ ಹಣ ಪಡೆದು ಕೆಲಸಕ್ಕೆ ತೆಗೆದುಕೊಳ್ಳುತ್ತಿದ್ದಾರೆ. ಡಿಎಲ್ ಪರೀಕ್ಷೆಯಲ್ಲಿ ಫೇಲಾದವರಿಗೆ 20 ಸಾವಿರ ಪಡೆದು ಅವರಿಗೆ ಕೆಲಸ ಕೊಡುತ್ತಿರುವುದು ಕಂಡು ಬಂದಿದೆ. ಈ ಅವ್ಯವಹಾರ ನಿಲ್ಲಲು ಹೊರಗುತ್ತಿಗೆ ಚಾಲಕರ ನೇಮಕಾತಿಯಲ್ಲಿ ಸಂಪೂರ್ಣ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಗೋಷ್ಠಿಯಲ್ಲಿ ತಾಲೂಕು ಉಪಾಧ್ಯಕ್ಷ ಅವಿನಾಶ್, ಕಾರ್ಯದರ್ಶಿ ಅರ್ಜುನ್ ಹಾಜರಿದ್ದರು.