ಚಾಮರಾಜನಗರ: ನೀರು ಗಂಟಿಗಳಿಗೆ ಬಾಕಿ ವೇತನ ಬಿಡುಗಡೆ ಮಾಡಬೇಕು. ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವವರನ್ನು ಮುಂದುವರಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಕೊಳ್ಳೇಗಾಲ ಪಟ್ಟಣದ ಕಾವೇರಿ ನೀರಾವರಿ ನಿಗಮದ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದೇವೆ. ಇದೀಗ ಅವಧಿ ಮುಗಿದಿದೆ. ಮತ್ತೆ ನಮ್ಮನ್ನು ಮುಂದುವರಿಸಬೇಕು ಎಂದು ನೀರು ಗಂಟಿಗಳು ಮನವಿ ಮಾಡಿದರು. ಸ್ಥಳಕ್ಕೆ ಆಗಮಿಸಿದ ಕಾವೇರಿ ನೀರಾವರಿ ನಿಗಮದ ಇಇ ಎಂ.ಬಿ.ಪಾಟೀಲ್ ಬೇಡಿಕೆ ಪತ್ರ ಸ್ವೀಕರಿಸಿದರು. ನಿಮ್ಮ ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂಬ ಅವರ ಭರವಸೆಯನ್ನು ಒಪ್ಪಿದ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಕೈಬಿಟ್ಟರು. ಜಿ.ಪಂ ಮಾಜಿ ಸದಸ್ಯ ಕಮಲ್, ನೀರು ಗಂಟಿಗಳಾದ ಮುತ್ತಯ್ಯ, ಮಾರಣ್ಣ, ಮಹದೇವ್ ಶೆಟ್ಟಿ, ಶಿವಣ್ಣ, ಸಿದ್ದರಾಜು, ಸುರೇಶ್, ಗಣೇಶ್, ರಂಗನಾಥ್, ಮರಿಸ್ವಾಮಿ ಮತ್ತಿತರರಿದ್ದರು.