ಹೊರಗಿನಿಂದ ಬಂದವರ ಮಾಹಿತಿ ಕಡ್ಡಾಯ

HHR P 01
Published on

ಹೊಳೆಹೊನ್ನೂರು: ಬೆಂಗಳೂರು ಸೇರಿ ಹೊರಗಿನಿಂದ ಬಂದಿರುವವರ ಮಾಹಿತಿ ಪಡೆದು ಕಡ್ಡಾಯವಾಗಿ ಹೋಮ್ ಕ್ವಾರೆಂಟೈನ್ ಮಾಡಬೇಕು ಎಂದು ವೈದ್ಯಕೀಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಶಾಸಕ ಕೆ.ಬಿ.ಅಶೋಕ್ ನಾಯ್್ಕ ಸೂಚಿಸಿದರು.

ಸಮೀಪದ ಯಡೇಹಳ್ಳಿ ಗ್ರಾಪಂನಲ್ಲಿ ಶುಕ್ರವಾರ ಏರ್ಪಡಿಸಿದ್ದ ಆಶಾ ಕಾರ್ಯಕರ್ತೆಯರು ಹಾಗೂ ವೈದ್ಯಕೀಯ ಸಿಬ್ಬಂದಿ ಸಭೆಯಲ್ಲಿ ಮಾತನಾಡಿ, ಕ್ವಾರಂಟೈನ್ ಅವಧಿ ಮುಗಿಯುವವರೆಗೆ ಹೊರ ರಾಜ್ಯದಿಂದ ಬಂದವರ ಮೇಲೆ ತೀವ್ರ ನಿಗಾ ಅವಶ್ಯ ಎಂದು ಹೇಳಿದರು.

ರೈತರ ಬೆಳೆಗಳನ್ನು ಎಪಿಎಂಸಿಯಲ್ಲಿ ಮಾರಾಟ ಮಾಡಲು ಅಡ್ಡಿ ಇಲ್ಲ. ಸೋಮವಾರದಿಂದ ಅಡಕೆ ಮಾರುಕಟ್ಟೆಗಳು ತೆರೆಯಲಿವೆ. ಬೆಂಬಲ ಬೆಲೆಯಲ್ಲಿ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದರು.

ಯಡೇಹಳ್ಳಿಯಲ್ಲಿ 80 ಕುಟುಂಬಗಳಿಗೆ ಪಡಿತರ ಚೀಟಿ ಇರದ ಕಾರಣ ಪಡಿತರ ದೊರೆತಿಲ್ಲ ಎಂದು ಸ್ಥಳೀಯರು ಶಾಸಕರ ಬಳಿ ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಸಮಸ್ಯೆಯನ್ನು ಶೀಘ್ರ ಬಗೆಹರಿಸುವಂತೆ ತಹಸೀಲ್ದಾರ್​ಗೆ ಸೂಚಿಸಿದರು.

ಶುಕ್ರವಾರ ಆನವೇರಿ ಜಿಪಂ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡು ದೊಡ್ಡಸೀಗೆಯಲ್ಲಿ 1 ಕೋಟಿ ರೂ. ವೆಚ್ಚದ ಸಿಮೆಂಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಯಡೇಹಳ್ಳಿ, ಗುಡುಮಗಟ್ಟೆ, ಸೈದರಕಲ್ಲಹಳ್ಳಿ, ನಿಂಬೆಗೊಂದಿ, ಆನವೇರಿ, ಮಂಗೋಟೆ, ಸಿದ್ಲಿಪುರ ಗ್ರಾಪಂಗಳಲ್ಲಿ ಸಭೆ ನಡೆಸಿದರು.

ಜಿಪಂ ಸದಸ್ಯ ವೀರಭದ್ರಪ್ಪ ಪೂಜಾರ್ ಮುನಿಸು: ಯಡೇಹಳ್ಳಿ ಗ್ರಾಪಂನಲ್ಲಿ ನಡೆದ ಸಭೆಯಲ್ಲಿ ಕ್ಷೇತ್ರದ ಜಿಪಂ ಸದಸ್ಯ ವೀರಭದ್ರಪ್ಪ ಪೂಜಾರ್ ಅವರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಯಿತು. ಕರೊನಾ ಜಾಗೃತಿ ಸಭೆ ದೂರು ಸಲ್ಲಿಕೆ ಕಾರ್ಯಕ್ರಮವಾಗಿ ಮಾರ್ಪಟ್ಟಿತ್ತು. ನಾಗರಿಕರಿಗೆ ಎಷ್ಟೇ ಹೇಳಿದರೂ ಪರಸ್ಪರ ಅಂತರ ಕಾಯ್ದುಕೊಳ್ಳಲಿಲ್ಲ. ಇದರಿಂದ ಸಿಟ್ಟಿಗೆದ್ದ ಪೂಜಾರ್, ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರವಾಸ ಮೊಟಕುಗೊಳಿಸಿ ಶಿವಮೊಗ್ಗದತ್ತ ಪ್ರಯಾಣ ಬೆಳೆಸಿದರು.

ಗ್ರಾಪಂ ಅಧ್ಯಕ್ಷೆ ಪುಷ್ಪಾ ಗೋವಿಂದ್, ಮಂಡಲ ಅಧ್ಯಕ್ಷ ಡಿ.ಮಂಜುನಾಥ್, ಪ್ರಧಾನ ಕಾಯದರ್ಶಿ ಮಲ್ಲೇಶ್, ತಾಪಂ ಇಒ ಕೆ.ಜೆ. ತಮ್ಮಣ್ಣಗೌಡ, ತಹಸೀಲ್ದಾರ್ ಚಂದ್ರಶೇಖರ್, ಎಪಿಎಂಸಿ ಸದಸ್ಯ ಎಸ್.ಶ್ರೀನಿವಾಸ್, ಕುಬೇಂದ್ರಪ್ಪ, ಕೃಷಿ ಅಧಿಕಾರಿ ಶಶಿಧರ್, ಪಿಡಿಒ ರಾಜೇಂದ್ರ, ತಾಪಂ ಸದಸ್ಯ ದಿನೇಶ್, ಮಂಜುಳಾ ರುದ್ರೇಶ್, ಮಹಾದೇವಪ್ಪ, ಸತೀಶ್ ಗೌಡ, ಕಿರಣ್​ಕುಮಾರ್, ಬಸವರಾಜಪ್ಪ, ನಂಜುಂಡಸ್ವಾಮಿ, ವಾಗೀಶ್, ಸುನೀಲ್, ರವಿಕುಮಾರ್, ಸುಬ್ರಹ್ಮಣಿ, ಬೋರಯ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net