ಹೊರ ರಾಜ್ಯದಿಂದ ಬಂದ ಕಾರ್ಮಿಕರ ನಿಗಾ ಅಗತ್ಯ

11blrp2.
Published on

ಬೇಲೂರು : ಹೊರ ರಾಜ್ಯಗಳಿಂದ ಕೆಲಸಕ್ಕಾಗಿ ಬಂದು ನೆಲೆಸಿರುವ ಕಾರ್ಮಿಕರ ಚಟುವಟಿಕೆಗಳ ಬಗ್ಗೆ ನಿಗಾ ವಹಿಸುವುದು ಅಗತ್ಯ ಎಂದು ಅರೇಹಳ್ಳಿ ಪೊಲೀಸ್ ಠಾಣೆ ಸಬ್‌ಇನ್ಸ್‌ಪೆಕ್ಟರ್ ಶೋಭಾ ಭರಮಣ್ಣ ಹೇಳಿದರು.

ಅಸ್ಸಾಂ ಸೇರಿದಂತೆ ಹೊರ ರಾಜ್ಯಗಳಿಂದ ಬಂದಿರುವ ವಲಸೆ ಕಾರ್ಮಿಕರ, ಗಲಾಟೆ, ಕಳ್ಳತನ ಸೇರಿದಂತೆ ಇತರೆ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿರುವವರ ಬಗ್ಗೆ ಮಾಹಿತಿ ಪಡೆಯಲು ಅರೇಹಳ್ಳಿ ಪೊಲೀಸ್ ಠಾಣೆಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಸಭೆಯಲ್ಲಿ ಅವರು ಮಾತನಾಡಿದರು. ಅರೇಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಸಾರ್ವಜನಿಕರು ನೀಡಿರುವ ಹಲವು ಪ್ರಕರಣದ ದೂರುಗಳಲ್ಲಿ ಹೊರ ರಾಜ್ಯಗಳಿಂದ ಬಂದು ನೆಲೆಸಿರುವ ವಲಸೆ ಕಾರ್ಮಿಕರ ಗಲಾಟೆ, ಕಳ್ಳತನ ಮತ್ತು ಇನ್ನಿತರೆ ಅಕ್ರಮ ಚಟುವಟಿಕೆಗಳ ಬಗ್ಗೆ ಆರೋಪಗಳಿವೆ. ಹಾಗಾಗಿ ಈ ನಿಟ್ಟಿನಲ್ಲಿ ಶಾಂತಿ, ಸುವ್ಯವಸ್ಥೆ ಪಾಲನೆಗೆ ವಿವಿಧ ಸಂಘಟನೆ ಮುಖಂಡರು, ಕಾಫಿ ಬೆಳೆಗಾರರು, ತೋಟದ ಮಾಲೀಕರು ಇಲಾಖೆಗೆ ಸಹಕಾರ ನೀಡಬೇಕು ಎಂದರು.

ಪೂರ್ವಾಪರ ತಿಳಿಯಬೇಕು: ಅನ್ಯ ರಾಜ್ಯಗಳಿಂದ ಕೆಲಸಕ್ಕಾಗಿ ಬಂದು ಕಾರ್ಮಿಕರು ತಾಲೂಕಿನಲ್ಲಿ ನೆಲೆಸಿರುವುದು ತಪ್ಪಲ್ಲ. ಆದರೆ ಅವರ ಬಗ್ಗೆ ಪೂರ್ವಾಪರ ತಿಳಿಯದೆ, ಮೂಲ ದಾಖಲೆ ಪರಿಶೀಲಿಸದೆ ಕೆಲಸಕ್ಕೆ ನೇಮಕ ಮಾಡಿ ೊಳ್ಳುವುದು, ಬಾಡಿಗೆ ಮನೆ ನೀಡಿರುವುದು ಸೂಕ್ತವಲ್ಲ. ಈ ನಿಟ್ಟಿನಲ್ಲಿ ಯಾವುದೇ ಅನಾಹುತಗಳು ನಡೆದರೂ ಅದಕ್ಕೆ ಮನೆ, ತೋಟದ ಮಾಲೀಕರೇ ನೇರ ಹೊಣೆಗಾರರಾಗ ಬೇಕಾಗುತ್ತದೆ. ಹಾಗಾಗಿ ಸಂಭವನೀಯ ಅನಾಹುತ ್ನ ತಡೆಗಾಗಿ ಹೊರ ರಾಜ್ಯದ ಕಾರ್ಮಿಕರ ಆಧಾರ್ ಕಾರ್ಡ್ ಅಥವಾ ಇನ್ನಿತರ ಗುರುತಿನ ದಾಖಲೆ ಪ್ರತಿ ಪರಿಶೀಲಿಸಿ, ಸಮೀಪದ ಠಾಣೆಗೂ ದಾಖಲೆ ಕೊಡುವುದು ಸೂಕ್ತ ಎಂದು ಶೋಭಾ ಅವರು ವಿವಿಧ ಸಂಘ, ಸಂಸ್ಥೆ, ಸಂಘಟನೆಗಳ ಮುಖಂಡರಿಗೆ ಮನವಿ ಮಾಡಿದರು.

ಕ್ರಮ ವಹಿಸಿದ್ದೇವೆ: 18 ವರ್ಷಕ್ಕಿಂತ ಕೆಳಗಿನವರಿಗೆ ನೆಲೆಸಲು ಅವಕಾಶ ನೀಡುವುದು, ಕೆಲಸದಲ್ಲಿ ತೊಡಗಿಸಿಕೊಳ್ಳುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ಈಗಾಗಲೇ ತಾಲೂಕಿನ ಹಲವು ಕಂಪ್ಯೂಟರ್ ಸೆಂಟರ್, ಆಧಾರ್ ಸೇವಾ ಕೇಂದ್ರಗಳಲ್ಲಿ ಅಕ್ರಮ ವಲಸಿಗರಿಗೆ ಆಧಾರ್ ಕಾರ್ಡ್ ತಿದ್ದುಪಡಿ ಮಾಡಿ ಕೊಡುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಅಂಥವರ ವಿರುದ್ಧ ದಾಖಲೆಗಳನ್ನು ಪರಿಶೀಲಿಸಿ ಕ್ರಮ ಕೈಗೊಂಡಿದ್ದೇವೆ. ಒಂದು ವೇಳೆ ಹೊರ ರಾಜ್ಯದವರಿಗೆ ಆಧಾರ್ ಕಾರ್ಡ್ ವಿಳಾಸ ಬದಲಾವಣೆ ಮಾಡಿ ಕೊಡುವುದಾದರೆ ಅಧಿಕೃತ ಮೂಲ ದಾಖಲೆ ಪರಿಶೀಲಿಸಿ ಗೆಜೆಟೆಡ್‌ಅಧಿಕಾರಿಗಳ ಸ್ಥಳ ಪರಿಶೀಲನೆ, ಪ್ರಮಾಣ ಪತ್ರ ಮುಖ್ಯ ಎಂದು ಸಬ್‌ಇನ್ಸ್‌ಪೆಕ್ಟರ್ ಶೋಭಾ ಭರಮಣ್ಣ ಸೂಚನೆ ನೀಡಿದರು. ಸೈಬರ್ ಅಪರಾಧ ತಡೆಗಟ್ಟಲು ಸಾರ್ವಜನಿಕರೂ ಜಾಗೃತರಾಗಿರಬೇಕು ಎಂದು ಅವರು ಎಚ್ಚರಿಕೆ ನೀಡಿದರು. ಸಭೆಯಲ್ಲಿ ಕಾಫಿ ಬೆಳೆಗಾರರ ಸಂಘದ ತಾಲೂಕು ಅಧ್ಯಕ್ಷ ಅದ್ದೂರಿ ಕುಮಾರ್, ಅರೇಹಳ್ಳಿ ಕಾಫಿ ಬೆಳೆಗಾರರ ಸಂಘದ ಮಾಜಿ ಅಧ್ಯಕ್ಷ ಖಲೀಲ್, ಮಾಜಿ ಅಧ್ಯಕ್ಷ ಗೋವಿಂದ ಶೆಟ್ಟಿ, ಮುಖಂಡರಾದ ಶಿವೇಗೌಡ, ಮತ್ತಾವರ ವಿಕ್ರಂ ಸೇರಿದಂತೆ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net