ಹೊರ ರಾಜ್ಯದವರಿಗೆ ಕ್ವಾರಂಟೈನ್

6 vikram 3
Published on

ಧಾರವಾಡ: ವಿವಿಧ ರಾಜ್ಯಗಳಲ್ಲಿ ಸ್ಥಗಿತವಾಗಿರುವ ವಲಸೆ ಕಾರ್ವಿುಕರು, ಯಾತ್ರಿಗಳು ಸೇರಿ ಇತರ ಜನರು ತವರು ರಾಜ್ಯಗಳಿಗೆ ತೆರಳಲು ಸರ್ಕಾರ ಅವಕಾಶ ಕಲ್ಪಿಸಿದೆ. ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಕಟಿಸಿದ ನಿಯಮದಂತೆ ಜಿಲ್ಲೆಯಲ್ಲೂ ಹೊರ ರಾಜ್ಯದಿಂದ ಬರುವ ಜನರನ್ನು ನೋಂದಾಯಿಸಿ ಆರೋಗ್ಯದ ಆಧಾರದಲ್ಲಿ ಕ್ವಾರಂಟೈನ್​ಗೆ ಒಳಪಡಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ವಿವಿಧ ರಾಜ್ಯಗಳಿಂದ ದೊಡ್ಡ ಪ್ರಮಾಣದಲ್ಲಿ ಜನರು ಸಂಚರಿಸುವ ಸಾಧ್ಯತೆ ಇದೆ. ರಾಜ್ಯದ ಮೂಲಕ ಬೇರೆ ರಾಜ್ಯಗಳಿಗೆ ತೆರಳುವ ವಾಹನಗಳನ್ನು ತಡೆಯಬಾರದು. ಜನರು ಕಡ್ಡಾಯವಾಗಿ ಸೇವಾಸಿಂಧು ಪೋರ್ಟಲ್ ಮೂಲಕ ಪಡೆದಿರುವ ಇ-ಪಾಸ್​ಅನ್ನು ಚೆಕ್​ಪೋಸ್ಟ್​ಗಳಲ್ಲಿ ತಪಾಸಣೆ ಮಾಡಬೇಕು ಎಂದರು.

ಗಡಿ ಜಿಲ್ಲೆಗಳ ಚೆಕ್ ಪೋಸ್ಟ್​ಗಳಲ್ಲಿ ರಾಜ್ಯಕ್ಕೆ ಆಗಮಿಸುವ ಜನರ ವೈದ್ಯಕೀಯ ತಪಾಸಣೆ ನಡೆಸಿ ಕೆಮ್ಮು, ನೆಗಡಿ, ಜ್ವರದ ಲಕ್ಷಣ ಇರುವವರನ್ನು ಕೆಟಗೆರಿ-1, ಲಕ್ಷಣ ಇಲ್ಲದಿರುವವರನ್ನು ಕೆಟಗೆರಿ-2 ಎಂದು ವರ್ಗೀಕರಿಸಲಾಗುವುದು. ಕೆಟಗೆರಿ-1ರ ಜನರನ್ನು ಗಡಿ ಜಿಲ್ಲೆಗಳ ಆಸ್ಪತ್ರೆಗಳಲ್ಲೇ ಕ್ವಾರಂಟೈನ್ ಮಾಡಲಾಗುವುದು. ಹೊರ ರಾಜ್ಯಗಳಿಂದ ಬರುವ ಪ್ರಯಾಣಿಕರು ಮಾರ್ಗಮಧ್ಯೆ ಇಳಿಯಲು ಅವಕಾಶವಿಲ್ಲ. ಪ್ರತಿ ಬಸ್​ಗೆ ಓರ್ವ ನೋಡಲ್ ಸಿಬ್ಬಂದಿ ನೇಮಿಸಿದ್ದು, ಪ್ರಯಾಣಿಕರು ತಲುಪಬೇಕಾದ ಜಿಲ್ಲೆಗಳಿಗೆ ಮುಟ್ಟಿಸುವ ಜವಾಬ್ದಾರಿ ಅವರದ್ದಾಗಿದೆ. ಸ್ವಂತ ಅಥವಾ ಖಾಸಗಿ ವಾಹನ ಮೂಲಕ ಬರುವವರು ಕಡ್ಡಾಯವಾಗಿ ಹೋಂ ಕ್ವಾರಂಟೈನ್​ಗೆ ಒಳಪಡಬೇಕು. ಜನರ ನೋಂದಣಿ ಮತ್ತು ತಪಾಸಣೆಗೆ ಧಾರವಾಡ ಕೃಷಿ ವಿಶ್ವ ವಿದ್ಯಾಲಯ ಆವರಣದಲ್ಲಿ ಸ್ಥಳ ಗುರುತಿಸಿ ಅಗತ್ಯ ಸೌಕರ್ಯಗಳ ವ್ಯವಸ್ಥೆ ಮಾಡುವಂತೆ ಪಾಲಿಕೆ ಆಯುಕ್ತರು ಮತ್ತು ಲೋಕೋಪಯೋಗಿ ಕಾರ್ಯ ನಿರ್ವಾಹಕ ಇಂಜಿನಿಯರರಿಗೆ ಸೂಚಿಸಿದರು.

ಕೃವಿವಿ ಆವರಣದಲ್ಲಿ ಸ್ಥಾಪಿಸಿರುವ ಆಗಮನ ಕೇಂದ್ರದಲ್ಲಿ ಜನರ ವೈದ್ಯಕೀಯ ತಪಾಸಣೆಗೆ ಅಗತ್ಯ ವೈದ್ಯಕೀಯ ತಂಡ ರಚಿಸಿ, ಥರ್ಮಲ್ ಸ್ಕ್ಯಾನರ್, ಮಾಸ್ಕ್, ಪಲ್ಸ್ ಆಕ್ಸಿಮೀಟರ್, ಹ್ಯಾಂಡ್ ಸ್ಯಾನಿಟೈಸರ್, ಸ್ವಯಂ ವರದಿ ಅರ್ಜಿ ನಮೂನೆ, ಹೋಂ ಕ್ವಾರಂಟೈನ್​ನ ಸೂಚನೆ ಒಳಗೊಂಡ ಅನುಬಂಧ-2ರ ನಮೂನೆ, ಮೊಹರು ಹಾಕಲು ಅಳಿಸಲಾಗದ ಶಾಯಿ, ಕಂಪ್ಯೂಟರ್, ಲ್ಯಾಪ್​ಟಾಪ್, ಮೊಬೈಲ್, ಡೇಟಾ ಎಂಟ್ರಿ ಅಪರೇಟರ್ ಹಾಗೂ ವೈಫೈ ಸಂಪರ್ಕ ಸಿದ್ಧಪಡಿಸಬೇಕು ಎಂದರು.

ಆರೋಗ್ಯಸೇತು, ಕ್ವಾರಂಟೈನ್ ವಾಚ್, ಆಪ್ತಮಿತ್ರ ಮೊಬೈಲ್ ಆಪ್​ಗಳನ್ನು ಹೊರ ರಾಜ್ಯಗಳಿಂದ ಬಂದಿರುವ ಜನರು ತಮ್ಮ ಮೊಬೈಲ್​ಗಳಲ್ಲಿ ಡೌನ್​ಲೋಡ್ ಮಾಡಿಕೊಳ್ಳುವುದನ್ನು ಖಚಿತಪಡಿಸಬೇಕು. ಜೊತೆಗೆ ರಕ್ತದೊತ್ತಡ, ಮಧುಮೇಹ, ಅಸ್ತಮಾ ಅಥವಾ ಶ್ವಾಸಕೋಶ ಸಂಬಂಧಿ ಕಾಯಿಲೆಗಳು, ಅಂಗಾಂಗ ಕಸಿ, ಕ್ಯಾನ್ಸರ್, ಜಠರ, ಕಿಡ್ನಿ, ಹೃದಯ, ಕ್ಷಯದಂಥ ತೊಂದರೆ ಸೇರಿ, ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜನರ ಆರೋಗ್ಯ ಹಿನ್ನೆಲೆ ಸಂಗ್ರಹಿಸಬೇಕು. ಅತಿ ಹೆಚ್ಚು ಅಪಾಯ ಎದುರಿಸುತ್ತಿರುವ ಮಹಾರಾಷ್ಟ್ರ, ಗುಜರಾತ್, ದೆಹಲಿ, ತಮಿಳುನಾಡು ಹಾಗೂ ರಾಜಸ್ಥಾನ ರಾಜ್ಯಗಳಿಂದ ಬರುವ ಪ್ರಯಾಣಿಕರನ್ನು ಕಡ್ಡಾಯವಾಗಿ ಸಾಂಸ್ಥಿಕ ಕ್ವಾರಂಟೈನ್​ಗೆ ಒಳಪಡಿಸಬೇಕು ಎಂದರು.

ಹೊರ ರಾಜ್ಯಗಳಿಂದ ಆಗಮಿಸಿದ ಎಲ್ಲರ ಮೂಗು ಮತ್ತು ಗಂಟಲ ದ್ರವವನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಬೇಕು. ಕೆಟಗೆರಿ-1ರ ಜನರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಿ ತಪಾಸಣೆ ಮಾಡಬೇಕು. ಕೆಟಗೆರಿ-2ರ ಜನರನ್ನು ಆಗಮನದ ನಂತರದ 12ನೇ ದಿನ ತಪಾಸಣೆ ಮಾಡಿ ಭಾರತ ಸರ್ಕಾರದ ಸ್ವ್ಯಾಬ್ ಕಲೆಕ್ಷನ್ ಸೆಂಟರ್ ಸಾಫ್ಟ್​ವೇರ್​ಗೆ ಅಳವಡಿಸಬೇಕು. ಕೆಟಗೆರಿ-1ರ ಜನರಲ್ಲಿ ಕೋವಿಡ್ ನೆಗೆಟಿವ್ ಇದ್ದರೆ ಆಸ್ಪತ್ರೆಗಳಲ್ಲಿ 7 ದಿನಗಳ ಕಾಲ ಇರಿಸಿ ಮತ್ತೊಮ್ಮೆ ತಪಾಸಣೆ ಮಾಡಬೇಕು ಎಂದರು.

ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಡಿಎಚ್​ಒ ಡಾ. ಯಶವಂತ ಮದೀನಕರ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ವಿರೂಪಾಕ್ಷ ಯಮಕನಮರಡಿ, ವಿ.ಎನ್. ಪಾಟೀಲ, ಆರೋಗ್ಯ ಇಲಾಖೆಯ ಡಾ. ಎಸ್.ಎಂ. ಹೊನಕೇರಿ, ಡಾ. ಸುಜಾತಾ ಹಸವಿಮಠ, ಡಾ. ಶಶಿ ಪಾಟೀಲ, ಡಾ. ತನುಜಾ, ಎಚ್.ಆರ್. ರಾಮನಗೌಡರ, ಬಸವಲಿಂಗಪ್ಪ ಬೀಡಿ, ಇತರರು ಇದ್ದರು.

ಆಪ್ತಮಿತ್ರ ಸಹಾಯವಾಣಿ: ಹೊರ ರಾಜ್ಯಗಳಿಂದ ಆಗಮಿಸಿ ಹೋಂ ಕ್ವಾರಂಟೈನ್​ಗೆ ಒಳಪಟ್ಟಿರುವ ಜನರು ತಮ್ಮ ಆರೋಗ್ಯದಲ್ಲಿ ಬದಲಾವಣೆ ಕಂಡುಬಂದರೆ ತಕ್ಷಣ ಆಪ್ತಮಿತ್ರ ಸಹಾಯವಾಣಿ 14410 ಸಂಖ್ಯೆಗೆ ಕರೆ ಮಾಡಿ ಮಾರ್ಗದರ್ಶನ ಪಡೆಯಬೇಕು. ಅನೇಕ ವಲಸೆ ಕಾರ್ವಿುಕರು ಕಾಲ್ನಡಿಗೆ, ದ್ವಿ ಚಕ್ರವಾಹನ ಅಥವಾ ಬೇರೆ ಯಾವುದೇ ವ್ಯವಸ್ಥೆಯಲ್ಲಿ ರಾಜ್ಯದೊಳಗೆ ಪ್ರವೇಶಿಸಿರುವ ಸಾಧ್ಯತೆಗಳಿರುತ್ತವೆ. ಅಂತಹವರನ್ನು ಗುರುತಿಸಿ ಆರೋಗ್ಯ ತಪಾಸಣೆ ಮಾಡಿ, ಕ್ವಾರಂಟೈನ್​ಗೆ ಒಳಪಡಿಸುವ ಕಾರ್ಯವನ್ನು ನಗರ ಸ್ಥಳೀಯ ಸಂಸ್ಥೆಗಳು ಮತ್ತು ಗ್ರಾಪಂಗಳು ನಿರ್ವಹಿಸಬೇಕು ಎಂದು ಡಿಸಿ ಸೂಚಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net