ಹೊಯ್ಸಳ ಮಹೋತ್ಸವ ಆಚರಣೆಗೆ ಒತ್ತಾಯ

16blrp1
ಸ್ವಾತಂತ್ರ್ಯ ದಿನ ಆಚರಣೆ ಅಂಗವಾಗಿ ಕಸಾಪದಿಂದ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಬಯಲು ರಂಗಮಂದಿರದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು.
Published on

ಬೇಲೂರು: ಬೇಲೂರು-ಹಳೇಬೀಡಿನಲ್ಲಿ ನಡೆಯುತ್ತಿದ್ದ ಹೊಯ್ಸಳ ಮಹೋತ್ಸವ ಸ್ಥಗಿತವಾಗಿದ್ದು, ಮತ್ತೆ ಮುಂದುವರಿಸಲು ಸಚಿವರು, ಶಾಸಕರು ಹಾಗೂ ಅಧಿಕಾರಿಗಳು ಹೆಚ್ಚಿನ ಗಮನ ಹರಿಸಬೇಕಿದೆ ಎಂದು ಪುರಸಭಾ ಅಧ್ಯಕ್ಷೆ ತೀರ್ಥಕುಮಾರಿ ಹೇಳಿದರು.


ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಪುರಸಭೆ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ ಪಟ್ಟಣದ ಶ್ರೀ ಚನ್ನಕೇಶವಸ್ವಾಮಿ ದೇಗುಲದ ಬಯಲು ರಂಗಮಂದಿರದಲ್ಲಿ 77ನೇ ಸ್ವಾತಂತ್ರ್ಯ ದಿನ ಆಚರಣೆ ಅಂಗವಾಗಿ ಮಂಗಳವಾರ ಸಂಜೆ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬೇಲೂರಿನಲ್ಲಿ ಸಾಹಿತ್ಯ, ಕಲೆ, ಸಂಗೀತ ಸೇರಿದಂತೆ ಕಲಾ ವೈಭವವನ್ನು ಹೆಚ್ಚಾಗಿ ಕಾಣಬಹುದು. ಬಹುತೇಕ ಕಲಾವಿದರು ಎಲೆಮರೆ ಕಾಯಿಯಂತಿದ್ದಾರೆ. ಅಂತಹ ಕಲಾವಿದರನ್ನು ಗುರುತಿಸುವ ಕೆಲಸ ಮಾಡಬೇಕಿದೆ ಎಂದರು.


ಬೇಲೂರಿನಲ್ಲಿ ಸಾಂಸಕ್ಕತಿಕ ವೈಭವ ಕಾಣುವುದಕ್ಕಾಗಿ ಶಾಸಕರು, ಸರ್ಕಾರ ಹಾಗೂ ಸಂಬಂಧಿಸಿದ ಸಚಿವರೊಂದಿಗೆ ಚರ್ಚಿಸಿ ನಿಂತು ಹೋಗಿರುವ ಹೊಯ್ಸಳ ಮಹೋತ್ಸವ ಆಚರಿಸಲು ಮುಂದಾಗಬೇಕಿದೆ. ತಾಲೂಕು ಮತ್ತು ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಿ ಸರ್ಕಾರಕ್ಕೆ ಮಾಹಿತಿ ನೀಡಿದರೆ ಈ ಬಾರಿ ಹೊಯ್ಸಳ ಮಹೋತ್ಸವವನ್ನು ನವೆಂಬರ್‌ನಲ್ಲಿ ಆಚರಿಸಬಹುದಾಗಿದೆ ಎಂದು ಹೇಳಿದರು.


ತಹಸೀಲ್ದಾರ್ ಎಂ.ಮಮತಾ ಮಾತನಾಡಿ, ಬೇಲೂರು ಸಾಂಸ್ಕೃತಿಕ ವೈಭವ ಹೊಂದಿರುವ ಕ್ಷೇತ್ರ. ಇಲ್ಲಿ ಕಲಾವಿದರಿಗೆ ಯಾವುದೇ ಬರವಿಲ್ಲ. ಇಂತವರಿಗೆ ಸೂಕ್ತ ವೇದಿಕೆ ಒದಗಿಸುವ ಕೆಲಸ ಕನ್ನಡ ಸಾಹಿತ್ಯ ಪರಿಷತ್ತು ಮಾಡುತ್ತಿದೆ. ಮಕ್ಕಳಲ್ಲಿನ ಬೌದ್ಧಿಕ ಬೆಳೆವಣಿಗೆಗೆ ಸಾಂಸಕ್ಕತಿಕ ಚಟುವಟಿಕೆಗಳು ಅತ್ಯಂತ ಸಹಕಾರಿಯಾಗಿದೆ ಎಂದರು.


ತಾಲೂಕು ಕಸಾಪ ಅಧ್ಯಕ್ಷ ಬಿ.ಎಲ್.ರಾಜೇಗೌಡ ಮಾತನಾಡಿ, ಮೂರು ದಶಕಗಳಿಂದ ಕನ್ನಡ ಸಾಹಿತ್ಯ ಪರಿಷತ್ತು ಸಾಹಿತ್ಯ, ಕಲೆ, ಸಂಗೀತ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತಿದೆ. ಬಹುತೇಕ ಕಾರ್ಯಕ್ರಮಗಳನ್ನು ಶಾಲಾ-ಕಾಲೇಜಿನಲ್ಲಿ ನಡೆಸಲಾಗಿದ್ದು, ವಿದ್ಯಾರ್ಥಿಗಳ ಜ್ಞಾನ ವಿಕಾಸಕ್ಕೆ ಪೂರಕವಾಗಲಿದೆ ಎಂದರು.


ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಪಿ.ನಾರಾಯಣ್, ಅಕ್ಷರ ದಾಸೋಹ ನಿರ್ದೇಶಕ ಡಾ.ಜಗದೀಶ್, ಪಿಐ ರವಿಕಿರಣ್, ಕಸಾಪ ಗೌರವ ಕಾರ್ಯದರ್ಶಿ ಬಿ.ಬಿ.ಶಿವರಾಜ್, ಮಹೇಶ್, ಕೋಶಾಧ್ಯಕ್ಷ ಮಾ.ನ.ಮಂಜೇಗೌಡ, ಕಸಾಪ ಮಾಜಿ ಅಧ್ಯಕ್ಷ ಮ.ಶಿವಮೂರ್ತಿ, ಪದಾಧಿಕಾರಿಗಳಾದ ಕುಮಾರಸ್ವಾಮಿ, ಬಿ.ಸಿ.ಆನಂದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net