

ಹಾಸನ: ರಾಜ್ಯ ಸರ್ಕಾರಿ ನೌಕರರ ಹೊಯ್ಸಳ ಗೃಹ ನಿರ್ಮಣ ಸಹಕಾರ ಸಂಘದ ಶ್ರೇಯೋಭಿವೃದ್ಧಿಗೆ ಅಗತ್ಯ ರೀತಿಯಲ್ಲಿ ಸಹಕಾರ ನೀಡುವುದಾಗಿ ಶಾಸಕ ಹೆಚ್.ಪಿ.ಸ್ವರೂಪ್ ಭರವಸೆ ನೀಡಿದರು.
ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಭವನದಲ್ಲಿ ಶುಕ್ರವಾರ ರಾಜ್ಯ ಸರ್ಕಾರಿ ನೌಕರರ ಹೊಯ್ಸಳ ಗೃಹ ನಿರ್ಮಾಣ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನೌಕರರು ಬೆಳಗಿನಿಂದ ಸಂಜೆವರೆಗೂ ವಿವಿಧ ಹುದ್ದೆಗಳಲ್ಲಿ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುವ ಮೂಲಕ ಸಾರ್ವಜನಿಕರ ಕೆಲಸ ಕಾರ್ಯಗಳನ್ನು ನಿರ್ವಹಿಸುತ್ತಾರೆ. ತಮಗಾಗಿ ನೌಕರರ ಗೃಹ ನಿರ್ಮಾಣ ಸಹಕಾರ ಸಂಘ ನಿರ್ಮಿಸಿಕೊಂಡು ಉತ್ತಮವಾಗಿ ನಿರ್ವಹಣೆ ಮಾಡಿಕೊಂಡು ಹೋಗುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ಸಹಕಾರ ಸಂಘ ನಿರ್ಮಿಸಿ, ನಿರ್ವಹಿಸಿಕೊಂಡು ಹೋಗುವುದು ಬಹಳ ಕಷ್ಟ. ನಾನು ಕೂಡ ಸಂಜೀವಿನಿ ಸಹಕಾರ ಆಸ್ಪತ್ರೆಯ ಅಧ್ಯಕ್ಷನಾಗಿ ಕರ್ತವ್ಯನಿರ್ವಹಿಸುತ್ತಿದ್ದು, ಈ ಬಗ್ಗೆ ಅನುಭವ ಹೊಂದಿದ್ದೇನೆ. ನಿಮ್ಮ ನೌಕರರ ಗೃಹ ನಿರ್ಮಾಣ ಸಂಘದಿಂದ ವೈಯಕ್ತಿಕವಾಗಿ ಲೇಔಟ್ ಮಾಡಲು ಮುಂದಾದರೆ ಅದಕ್ಕೆ ಅವಶ್ಯಕ ಸಹಕಾರವನ್ನು ಶಾಸಕನಾಗಿ ಮಾಡಿಕೊಡುತ್ತೇನೆ ಎಂದು ಭರವಸೆ ನೀಡಿದರು.
ಸಂಘದ ಅಧ್ಯಕ್ಷ ಬಿ.ಕೆ.ರುದ್ರಪ್ಪ ಮಾತನಾಡಿ, ಸರ್ಕಾರಿ ನೌಕರರಿಗೆ ಒಂದು ವರ್ಷದ ಅವಧಿ ಒಳಗೆ ಸುಸಜ್ಜಿತ ಸೌಲಭ್ಯಗಳನ್ನು ಒಳಗೊಂಡ ಬಡಾವಣೆ ನಿರ್ಮಿಸಿ ಕಡಿಮೆ ದರದಲ್ಲಿ ನಿವೇಶನ ಹಂಚಲಾಗುವುದು. ಸಂಘದಲ್ಲಿ ಪಾರದರ್ಶಕತೆ ಕಾಪಾಡಿಕೊಂಡು ಸರ್ಕಾರಿ ನೌಕರರ ಕ್ಷೇಯೋಭಿವೃದ್ಧಿಗೆ ಶ್ರಮಿಸಿ ಸಂಘವನ್ನು ಮುನ್ನಡೆಸುವುದಾಗಿ ವಿಶ್ವಾಸವ್ಯಕ್ತಪಡಿಸಿದರು.
ಸಂಘದ ಲೆಕ್ಕಪತ್ರಗಳನ್ನು ಹಾಗೂ ಆಯವ್ಯಯವನ್ನು ಸಂಘದ ನಡಾವಳಿ ಪುಸ್ತಕವನ್ನು ಉಪಾಧ್ಯಕ್ಷ ಲಕ್ಷ್ಮೀಕಾಂತ್ ಓದಿ ಸಭೆಯ ಸರ್ವಾನುಮತ ಅಂಗೀಕಾರ ಪಡೆದರು.
ಕಾರ್ಯಕ್ರಮದಲ್ಲಿ ರಾಜ್ಯ ಸಂಘದ ಜಂಟಿ ಕಾರ್ಯದರ್ಶಿ ರಘು, ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಇ ಕೃಷ್ಣೆಗೌಡ, ಪ್ರಧಾನ ಕಾರ್ಯದರ್ಶಿ ಸಿ.ಎಸ್. ಶಿವಸ್ವಾಮಿ, ರಾಜ್ಯ ಪರಿಷತ್ ಪ್ರತಿನಿಧಿಗಳಾದ ಪ್ರದೀಪ್ ಕುಮಾರ್, ನಿರ್ದೇಶಕರಾದ ಕೃಷ್ಣಮೂರ್ತಿ, ಉಷಾ, ಮೀನಾಕ್ಷಿ, ಚನ್ನಕೇಶವ, ತಮ್ಮಣ್ಣ ಗೌಡ, ಸುರೇಶ್, ರುದ್ರೇಶ್, ನೌಕರ ಸಂಘದ ಪದಾಧಿಕಾರಿಗಳಾದ ಶಂಕರೇಗೌಡ, ಉಮೇಶ್, ತಮ್ಮಣ್ಣ ಶೆಟ್ಟಿ, ಸಾವಿತ್ರಿಬಾಯಿ ಪುಲೆ ಸಂಘದ ಅಧ್ಯಕ್ಷರಾದ ಆಶಾ ಹಾಜರಿದ್ದರು