ಹೊನ್ನೇರು ಕಟ್ಟಿ ಯುಗಾದಿ ಆಚರಣೆ

23raju2
Published on

ಚಾಮರಾಜನಗರ: ಜಿಲ್ಲಾದ್ಯಂತ ಯುಗಾದಿ ಹಬ್ಬವನ್ನು ಬುಧವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು. ವಿಶೇಷವೆಂದರೆ ಈ ಭಾಗದಲ್ಲಿ ಹೊನ್ನೇರು ಕಟ್ಟಿ ಹಬ್ಬ ಆಚರಿಸಲಾಯಿತು.


ಯುಗಾದಿ ಆರಂಭವಾಗುತ್ತಿದ್ದಂತೆ ಮಳೆ ಬರಲಿದ್ದು, ಕೃಷಿ ಚಟುವಟಿಕೆಗಳು ಆರಂಭವಾಗುತ್ತವೆ. ಎತ್ತುಗಳು ಮತ್ತು ಗಾಡಿಗೆ ಹೊಂಬಾಳೆ ಕಟ್ಟಿ ಪೂಜೆ ಸಲ್ಲಿಸಿ ಗೊಬ್ಬರವನ್ನು ಜಮೀನುಗಳಿಗೆ ಸಿಂಪಡಿಸುವ ಸಂಪ್ರದಾಯಕ್ಕೆ ಹೊನ್ನೇರು ಎಂದು ಕರೆಯುತ್ತಾರೆ. ಅದರಂತೆ ಚಾಮರಾಜನಗರ ತಾಲೂಕಿನ ಹೆಬ್ಬಸೂರು, ಹೊನ್ನೂರು, ಗುಂಡ್ಲುಪೇಟೆಯ ಬೊಮ್ಮಲಾಪುರ, ಹಂಗಳ, ಹನೂರು ತಾಲೂಕಿನ ಗ್ರಾಮಗಳಲ್ಲಿ ಎತ್ತಿನಗಾಡಿಗಳನ್ನು ಮಂಗಳವಾದ್ಯ ಸಮೇತ ಜಮೀನಿಗೆ ಕರೆದೊಯ್ದು ಹೊನ್ನೇರು ಕಟ್ಟಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.


ಬ್ರಾಹ್ಮಿ ಮಹೂರ್ತದಲ್ಲಿ ಎತ್ತುಗಳನ್ನು ತೊಳೆದು ಕೊಂಬುಗಳಿಗೆ ಹೊಂಬಾಳೆ, ಕೊರಳಿಗೆ ಬಿಳಿಗಣಗಲೆ ಹೂವು, ಮಂಡೆ ಹುರಿ ಕಟ್ಟಿದರು. ಎತ್ತಿನಗಾಡಿಯನ್ನು ಬಾಳೆಕಂದು, ಮಾವಿನ ಸೊಪ್ಪಿನಿಂದ ಅಲಂಕರಿಸಿದರು. ಬಳಿಕ ಕೊಟ್ಟಿಗೆ ಗೊಬ್ಬರಕ್ಕೆ ಪೂಜೆ ಸಲ್ಲಿಸಿ ಬಳಿಕ ಆಯಾಯ ಗ್ರಾಮಗಳ ಗ್ರಾಮದೇವತೆಗೆ ನಮಸ್ಕರಿಸಿ ತಮ್ಮ ತಮ್ಮ ಜಮೀನುಗಳಿಗೆ ಗೊಬ್ಬರವನ್ನು ಹಾಕಿ ಬಂದರು.


ಕೂಡ್ಲೂರಿನಲ್ಲಿ ಜಾತ್ರೆ: ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಶ್ರೀಮಂಟೇಸ್ವಾಮಿ ಮತ್ತು ಮಹದೇಶ್ವರರ ಜಾತ್ರೆ ನಡೆಯಿತು. ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಸಲ್ಲಿಸಿದ ಭಕ್ತರು, ಜಾತ್ರೆಯಲ್ಲಿ ಪಾಲ್ಗೊಂಡರು. ಗ್ರಾಮದ ಬಡಾವಣೆಗಳಲ್ಲಿ ಮಂಟೇಸ್ವಾಮಿ ಕಂಡಾಯದ ಮೆರವಣಿಗೆ ನಡೆಯಿತು. ಆಲೂರಿನಲ್ಲೂ ಕಂಡಾಯ ಮೆರವಣಿಗೆ ನಡೆಯಿತು.


ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದ ಉದ್ಯಾನದಲ್ಲಿ ಖಾಸಗಿ ಕಾರು ಚಾಲಕರು ವಿಶೇಷ ಪೂಜೆ ಸಲ್ಲಿಸಿದರು. ಭಕ್ತರಿಗೆ ಅನ್ನ ಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು. ಶ್ರೀಚಾಮರಾಜೇಶ್ವರ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ಆಂಜನೇಯಸ್ವಾಮಿ ದೇಗುಲ ಸೇರಿದಂತೆ ಹಲವು ಕಡೆಗಳಲ್ಲಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆಗಳು ನೆರವೇರಿದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net