

ಹೊನ್ನಾವರ: ರಾಜ್ಯದ ಕಾಂಗ್ರೆಸ್ ಸರ್ಕಾರ ಒಂದು ಸಮುದಾಯ ಓಲೈಸಲು ರೈತರ ಜಮೀನನ್ನು ವಕ್ಪ್ ಆಸ್ತಿಯಾಗಿ ಪರಿವರ್ತಿಸುವ ಹುನ್ನಾರ ನಡೆಸುತ್ತಿದೆ. ಇದನ್ನು ವಿರೋಧಿಸಿ ನ. 4ರಂದು ಬೆಳಗ್ಗೆ 10.30 ಗಂಟೆಗೆ ತಹಸೀಲ್ದಾರ್ ಕಚೇರಿ ಎದುರು ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಬಿಜೆಪಿ ಮುಖಂಡ ಗೋವಿಂದ ನಾಯ್ಕ ಹೇಳಿದರು.
ಪಟ್ಟಣದ ಪ್ರಭಾತನಗರದಲ್ಲಿರುವ ಬಿಜೆಪಿ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರ ಒಂದು ಸಮುದಾಯವನ್ನು ಓಲೈಸಲು ನಿರತವಾಗಿದೆ. ಅಧಿಕಾರಕ್ಕೆ ಬಂದ ಮೇಲೆ ಮುಡಾ, ವಾಲ್ಮೀಕಿ ನಿಗಮ ಹಗರಣಗಳು, ಈಗ ರೈತರ ಆಸ್ತಿಯನ್ನು ಕಬಳಿಸಲು ಕೈ ಹಾಕಿದೆ. ಕಾಂಗ್ರೆಸ್ ಪಕ್ಷ ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಕೊಡುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ರೈತರ ಪಹಣಿಯಲ್ಲಿ ವಕ್ಪ್ ಬೋರ್ಡ್ ಹೆಸರು ನಮೂದಿಸಿರುವುದು ಕೇಳಿಬಂದಿದೆ. ರಾಜ್ಯಾದ್ಯಂತ ಪ್ರತಿ ತಹಸೀಲ್ದಾರರ ಕಚೇರಿ, ಜಿಲ್ಲಾಧಿಕಾರಿಯವರ ಕಚೇರಿ ಎದುರು ಕಾಂಗ್ರೆಸ್ನ ಈ ಹುನ್ನಾರ ವಿರೋಧಿಸಿ ಬಿಜೆಪಿ ಪಕ್ಷದಿಂದ ಪ್ರತಿಭಟನೆ ನಡೆಯಲಿದೆ. ರೈತರು ಹಾಗೂ ಸಾರ್ವಜನಿಕರು ಪಾಲ್ಗೊಳ್ಳಬೇಕು ಎಂದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಹೊನ್ನಾವರ ಮಂಡಲದ ಅಧ್ಯಕ್ಷ ಮಂಜುನಾಥ ನಾಯ್ಕ, ಮುಖಂಡರಾದ ಎಂ.ಜಿ.ನಾಯ್ಕ, ರಾಜೇಶ ಭಂಡಾರಿ, ಗಣಪತಿ ನಾಯ್ಕ ಬಿ.ಟಿ., ಗಣಪತಿ ಗೌಡ ಚಿತ್ತಾರ, ಗೋವಿಂದ ಗೌಡ, ರಾಘು ಖಾರ್ವಿ, ಹರಿಶ್ಚಂದ್ರ ನಾಯ್ಕ, ಉಪಸ್ಥಿತರಿದ್ದರು.