

ಹೊನ್ನಾಳಿ: ಶೀಘ್ರವೇ ಹೊನ್ನಾಳಿ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಸರ್ಕಾರ ಘೋಷಣೆ ಮಾಡಲಿದೆ ಎಂದು ಶಾಸಕ ಡಿ.ಜಿ.ಶಾಂತನಗೌಡ ಹೇಳಿದರು.
ತಾಲೂಕಿನ ಮಾದೇನಹಳ್ಳಿ, ಕತ್ತಿಗೆ, ಹತ್ತೂರು, ಸೋಮನಮಲ್ಲಾಪುರ ಹಾಗೂ ಇನ್ನಿತರ ಬೆಳೆ ಒಣಗಿರುವ ಜಮೀನುಗಳಿಗೆ ತೆರಳಿ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಒಂದು ವಾರ ಸತತವಾಗಿ ಮಳೆ ಬಂದರೂ ಸಹ ಬೆಳೆಗಳು ಚೇತರಿಸಿಕೊಳ್ಳಲು ಸಾಧ್ಯವಿಲ್ಲ, ಹಾಗಾಗಿ ಕೂಡಲೇ ಹೊನ್ನಾಳಿ ಹಾಗೂ ನ್ಯಾಮತಿ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು ಎಂದು ಸರ್ಕಾರಕ್ಕೆ ಕಳೆದ ವಾರವೇ ಮನವಿ ಮಾಡಿದ್ದೇನೆ ಎಂದು ಎಂದರು.
ತಾಲೂಕಿನಲ್ಲಿ 17,400 ಹೆಕ್ಟೇರ್ ಪ್ರದೇಶದಲ್ಲಿ ಪ್ರಮುಖವಾಗಿ ಮೆಕ್ಕೆಜೋಳ, ಹತ್ತಿ, ಶೇಂಗಾ, ಊಟದ ಜೋಳ ಸೇರಿದಂತೆ ವಿವಿಧ ಬೆಳೆಗಳು ಮಳೆ ಬಾರದ ಕಾರಣ ಎಲ್ಲವೂ ಒಣಗಿವೆ. ಈ ಪ್ರದೇಶದಲ್ಲಿ ತಿಂಗಳುಗಟ್ಟಲೆ ಮಳೆ ಬಂದರೂ ಏನೂ ಪ್ರಯೋಜನ ಇಲ್ಲ. ಶೇ.90ರಷ್ಟು ಎಲ್ಲ ಬೆಳೆಗಳು ಒಣಗಿವೆ ಎಂದು ತಿಳಿಸಿದರು.
ಮಳೆ ಇಲ್ಲದೆ ಒಣಗಿರುವ ಬೆಳೆಗಳಿಗೆ ಈಗ ಮಳೆ ಬಂದರೂ ಏನೂ ಪ್ರಯೋಜನ ಇಲ್ಲ. ಹಾಗಾಗಿ ಹೊನ್ನಾಳಿ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು ಎಂದು ಸಿಎಂ, ಡಿಸಿಎಂ ಹಾಗೂ ಕಂದಾಯ ಸಚಿವರಿಗೆ ಮನವಿ ಮಾಡಿದ್ದರಿಂದ ಶೀಘ್ರ ಘೊಷಣೆಯಾಗಲಿದೆ ಎಂದರು.
ಒಂದನೇ ಹಂತದಲ್ಲಿ ಜಿಲ್ಲೆಯ ಹೊನ್ನಾಳಿ, ಹರಿಹರ ಹಾಗೂ ಜಗಳೂರು ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲು ಸರ್ಕಾರದ ಹಂತದಲ್ಲಿ ಎಲ್ಲ ಸಿದ್ಧತೆ ನಡೆದಿದ್ದು, ಮುಂದಿನ ಹಂತದಲ್ಲಿ ನ್ಯಾಮತಿ ತಾಲೂಕನ್ನು ಬರಪೀಡಿತ ಪ್ರದೇಶ ಎಂದು ಘೋಷಣೆ ಮಾಡಲು ಸರ್ಕಾರ ತೀರ್ಮಾನಿಸಿದೆ ಎಂದರು.
ತುಂಗಾ ಹಾಗೂ ಭದ್ರಾ ನಾಲೆಗಳಲ್ಲಿ ನೀರು ಹರಿಸಿದರೂ ಮಳೆಯಾಶ್ರಿತ ಪ್ರದೇಶದಲ್ಲಿ ರೈತರು ಪಂಪ್‌ಸೆಟ್‌ನಿಂದ ನೀರು ಹರಿಸಿಕೊಳ್ಳುತ್ತಿರುವುದರಿಂದ ಕೆಳಭಾಗದ ರೈತರಿಗೆ ನೀರು ಸಿಗುತ್ತಿಲ್ಲ. ಸಕಾಲಕ್ಕೆ ಮಳೆ ಬಾರದ ಹಿನ್ನೆಲೆಯಲ್ಲಿ ವಿದ್ಯುತ್ ತಯಾರಿಕೆಯಲ್ಲೂ ಹಿನ್ನಡೆಯಾಗಿದೆ ಎಂದು ತಿಳಿಸಿದರು.
ಪಕ್ಷದ ಸಿದ್ಧಾಂತ ಒಪ್ಪಿ ಯಾರೇ ಪಕ್ಷಕ್ಕೆ ಬಂದರೂ ನನಗೇನೂ ತೊಂದರೆ ಇಲ್ಲ. ಆದರೆ ಯಾರೇ ಪಕ್ಷಕ್ಕೂ ಬಂದರೂ ಹೈಕಮಾಂಡ್ ಒಪ್ಪಿಗೆ ಮುಖ್ಯ ಎಂದು ವರದಿಗಾರರ ಪ್ರಶ್ನೆಗೆ ಮಾಜಿ ಶಾಸಕ ರೇಣುಕಾಚಾರ್ಯರ ಹೆಸರೇಳದೆ ಮಾರ್ಮಿಕವಾಗಿ ಉತ್ತರಿಸಿದರು.
ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ಪ್ರತಿಮಾ ಮಾತನಾಡಿದರು.
ಕತ್ತಿಗೆ ಗ್ರಾಮದ ಪಾಲಕ್ಷಪ್ಪ, ವಿರೂಪಾಕ್ಷಪ್ಪ, ವಿಜಯ್, ಪ್ರಸನ್ನ, ಧರ್ಮಪ್ಪ, ಗ್ರಾ.ಪಂ. ಸದಸ್ಯ ಪ್ರಶಾಂತ್ ಹಾಗೂ ಇತರರು ಇದ್ದರು.