ಕೊಳ್ಳೇಗಾಲ: ತಾಲೂಕಿನ ಶಿವನಸಮುದ್ರ ಗ್ರಾಮದಲ್ಲಿ ಹೊಟ್ಟೆನೋವು ತಾಳಲಾರದೆ ಗೃಹಿಣಿ ಬುಧವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಗ್ರಾಮದ ಚಾಮಯ್ಯ ಅವರ ಪುತ್ರಿ ಶಕುಂತಲಾ (23) ಮೃತರು. ಈಕೆಗೆ 2024 ರ ಮೇ 11ರಂದು ರಾಮನಗರದ ಹಂಗರ ಪಾಳ್ಯದ ನಾಗೇಶ್ ಅವರೊಂದಿಗೆ ವಿವಾಹವಾಗಿತ್ತು. ಕಳೆದ ನಾಲ್ಕೈದು ತಿಂಗಳಿನಿಂದ ಆಗಾಗ್ಗೆ ಹೊಟ್ಟೆ ನೋವು ಕಾಣಿಸಿಕೊಳ್ಳುತ್ತಿದ್ದರಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಅಲ್ಲದೆ ಭೀತಿ ಇರಬಹುದು ಎಂದು ದೇವಸ್ಥಾನಕ್ಕೂ ಕರೆದೊಯ್ಯಲಾಗಿತ್ತು. ಈ ನಡುವೆ ಆಕೆಯನ್ನು ತವರು ಮನೆಗೆ ಕರೆದುಕೊಂಡು ಬರಲಾಗಿತ್ತು. ಆದರೆ ಶಂಕುತಲಾ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಬಳಿಕ ಆಕೆಯನ್ನು ಕೆಳಗಿಳಿಸಿ ಇನ್ನೂ ಜೀವವಿದ್ದ ಕಾರಣ ಚಾಮರಾಜನಗರ ಸಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ತಪಾಸಣೆ ಮಾಡಿದ ವೈದ್ಯರು ಶಕುಂತಲಾ ಮಾರ್ಗಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಹೊಟ್ಟೆ ನೋವು ತಾಳಲಾರದೆ ನನ್ನ ಮಗಳು ಮೃತಪಟ್ಟಿದ್ದಾಳೆ ಎಂದು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮೃತದೇಹವನ್ನು ಚಾಮರಾಜನಗರ ಸಿಮ್ಸ್ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಈ ಸಂಬಂಧ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.