

ಗದಗ: ಲಾಕ್ಡೌನ್ ಆದೇಶವು ಬಡವರ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದ್ದು, ಕೂಲಿ ಮಾಡಿ ಜೀವನ ಸಾಗಿಸುವವರ ಬದುಕು ದುರ್ಬರವಾಗಿದೆ. ಹೊಟ್ಟೆಗೆ ಹಿಟ್ಟಿಲ್ಲದೇ ಪರಿತಪಿಸುವಂತಾಗಿದೆ.
ನಗರದ ಬೆಟಗೇರಿ ಹಾಕಿ ಮೈದಾನದ ಹಿಂದಿರುವ ಸ್ಲಂ ಪ್ರದೇಶದಲ್ಲಿ ವಾಸಿಸುತ್ತಿರುವ ಬಡವರು ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ನಿತ್ಯ ಕೂಲಿ ಮಾಡಿದರೆ ಹೊಟ್ಟೆಗೆ ಹಿಟ್ಟು ಇಲ್ಲದಿದ್ದರೆ ತಣ್ಣೀರೆ ಗತಿ ಎಂಬಂತಹ ಕಡುಬಡತನ. ಇಂತಹ ಸ್ಥಿತಿಯಲ್ಲಿ ಎರಡೆರಡು ವಾರಗಳ ಕಾಳ ಲಾಕ್ ಡೌನ್ ಆಗಿ ಕೆಲಸ ಸಿಗದಿದ್ದರೆ ಊಟಕ್ಕಾಗಿ ಮುಂದೇನು ಎಂಬ ಪ್ರಶ್ನೆ ಉಂಟಾಗಿದೆ ಎಂದು ಅಲ್ಲಿನ ನಿವಾಸಿ ಗೋವಿಂದ ಎನ್ನುವವರು ತಮ್ಮ ನೋವು ತೋಡಿಕೊಳ್ಳುತ್ತಿದ್ದಾರೆ.
ಅದಲ್ಲದೆ, ಅವರ ಪತ್ನಿ ತುಂಬು ಗರ್ಭಿಣಿಯಾಗಿದ್ದು, ಮಾ. 20ರೊಳಗೆ ಹೆರಿಗೆಯಾಗಲಿದೆ ಎಂದು ವೈದ್ಯರು ದಿನಾಂಕ ತಿಳಿಸಿದ್ದಾರೆ. ಆದರೆ, ಮಾಡಲು ಕೆಲಸ ಇಲ್ಲ. ಅಟೋ ಓಡಿಸಿ ಜೀವನ ಮಾಡುವಂತಹ ನಮ್ಮಂತಹ ಬಡವರ ಜೀವನ ಸಾಗಿಸುವುದು ಹೇಗೆ? ಲಾಕ್ಡೌನ್ ಆಗಿದ್ದರಿಂದ ಹೊರಗೆ ಏನೇನೂ ಸಿಗುತ್ತಿಲ್ಲ. ಪತ್ನಿಗೆ ಆರೋಗ್ಯ ಸಮಸ್ಯೆ ಉಂಟಾದೆ ಏನು ಮಾಡಬೇಕು ಎಂದು ಅವರು ಪ್ರಶ್ನಿಸುತ್ತಿದ್ದಾರೆ.
ಅಲ್ಲದೆ, ಕರೊನಾ ವೈರಸ್ ವ್ಯಾಪಕವಾಗಿದ್ದು ಎಲ್ಲರೂ ಶುಚಿತ್ವ ಕಾಪಾಡಿಕೊಳ್ಳಿ, ಕೈತೊಳೆದುಕೊಳ್ಳಬೇಕು ಎಂದು ಅಧಿಕಾರಿಗಳು ಹೇಳುತ್ತಾರೆ. ನಮ್ಮ ಏರಿಯಾಕ್ಕೆ 15 ದಿನಗಳಿಂದ ನೀರು ಪೂರೈಕೆಯಾಗಿಲ್ಲ. ಕುಡಿಯಲು ನೀರಿಲ್ಲ. ಇನ್ನು ಕೈತೊಳೆದುಕೊಳ್ಳುವುದು ಹೇಗೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಸರ್ಕಾರದವರು ನಮ್ಮ ಫಜೀತಿ ಅರ್ಥ ಮಾಡಿಕೊಳ್ಳಬೇಕು. 9 ತಿಂಗಳ ಗರ್ಭಿಣಿ ನಾನು, ಊಟಕ್ಕೂ ಸಮಸ್ಯೆ ಆಗುತ್ತಿದ್ದು ರೇಷನ್ ವಿತರಿಸಲು ಕ್ರಮಕೈಗೊಳ್ಳಬೇಕು. ಜತೆಗೆ ನನ್ನ ಆರೋಗ್ಯದ ಕಡೆಗೆ ಗಮನ ಹರಿಸಿ ಪುಣ್ಯ ಕಟ್ಟಿಕೊಳ್ಳಬೇಕು ಎಂದು ಗರ್ಭಿಣಿ ಮನವಿ ಮಾಡಿಕೊಳ್ಳುತ್ತಿದ್ದಾರೆ.
EndFragment