

ಕೊಳ್ಳೇಗಾಲ: ಹೊಟ್ಟೆ ನೋವು ತಾಳಲಾರದೆ ಜೀವನದಲ್ಲಿ ಜಿಗುಪ್ಸೆಗೊಂಡು ಗೃಹಿಣಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಆಲಹಳ್ಳಿ ಗ್ರಾಮದ ಗುರುಸಿದ್ಧ ಎಂಬುವರ ಪತ್ನಿ ರಾಜೇಶ್ವರಿ (34) ಆತ್ಮಹತ್ಯೆಗೆ ಶರಣಾದವರು. ಇವರು ಕುಟುಂಬ ಸಮೇತರಾಗಿ ಕೊಳ್ಳೇಗಾಲ ಪಟ್ಟಣದ ಲಯನ್ಸ್ ಸ್ಕೂಲ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ರಾಜೇಶ್ವರಿ ಅವರಿಗೆ ಆಗಾಗ್ಗೆ ಹೊಟ್ಟೆನೋವು ಕಾಣಿಸಿಕೊಳ್ಳುತ್ತಿದ್ದರಿಂದ ಬೇಸತ್ತು ಸೋಮವಾರ ನೇಣು ಹಾಕಿಕೊಂಡು ಮೃತಪಟ್ಟಿದ್ದಾರೆ. ಮೃತಳ ಅಣ್ಣ ಸಿದ್ದರಾಜು ಹೊಟ್ಟೆನೋವಿನ ಕಾರಣ ಬೇಸತ್ತು ರಾಜೇಶ್ವರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಂಗಳವಾರ ಮರಣೋತ್ತರ ಪರೀಕ್ಷೆ ನಡೆಸಿ ವಾರಸುದಾರರಿಗೆ ಮೃತ ದೇಹವನ್ನು ಒಪ್ಪಿಸಲಾಗಿದೆ.