ಹೊಂದಾಣಿಕೆಯಿಂದ ಮಾತ್ರ ಗ್ರಾಮದ ಅಭಿವೃದ್ಧಿ

22Kush02
Published on

ಕುಶಾಲನಗರ: ಜನಪ್ರತಿನಿಧಿಗಳು, ಅಧಿಕಾರಿಗಳು, ಗ್ರಾಮಸ್ಥರು ಪರಸ್ಪರ ಹೊಂದಾಣಿಕೆಯಿಂದ ಮುನ್ನಡೆದಲ್ಲಿ ಮಾತ್ರ ಗ್ರಾಮದ ಅಭಿವೃದ್ಧಿ ಸಾಧ್ಯ. ಗ್ರಾಮದ ಅಭಿವೃದ್ಧಿಯಲ್ಲಿ ಚುನಾಯಿತ ಜನಪ್ರತಿನಿಧಿಗಳ ಶ್ರಮದ ಜೊತೆ ಗ್ರಾಮಸ್ಥರ ಸಹಕಾರ ಅತಿ ಮುಖ್ಯ ಎಂದು ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಎಲ್.ವಿಶ್ವ ಅಭಿಪ್ರಾಯಪಟ್ಟರು.


ನಂಜರಾಯಪಟ್ಟಣ ಗ್ರಾಮ ಪಂಚಾಯಿತಿಯ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಆಯೋಜಿಸಿದ್ದ ವಿಶೇಷ ಗ್ರಾಮಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಸಾಲಿಗೆ ಹೋಲಿಕೆ ಮಾಡಿದಲ್ಲಿ ಈ ಬಾರಿ ಉದ್ಯೋಗ ಖಾತ್ರಿ ಯೋಜನೆಯಡಿಯ ಕಾಮಗಾರಿಗಳು ಸ್ವಲ್ಪ ಮಟ್ಟಿಗೆ ಕುಂಠಿತಗೊಂಡಿದೆ. ಸರ್ಕಾರದ ಹೊಸ ಮಾರ್ಗಸೂಚಿ ಕಾರಣದಿಂದ ಈ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳು ಪ್ರಗತಿ ಕಾಣುತ್ತಿಲ್ಲ ಎಂದರು.


ಚುನಾವಣಾ ಪೂರ್ವ ತೀರ್ಮಾನದಂತೆ ಗ್ರಾಮ ಪಂಚಾಯಿತಿ ಚುನಾಯಿತ ಜನಪ್ರತಿನಿಧಿಗಳು ಯಾವುದೇ ರೀತಿಯ ಗುತ್ತಿಗೆ ಕಾಮಗಾರಿಗಳಲ್ಲಿ ತೊಡಗಿಸಿಕೊಂಡಿಲ್ಲ. ಗ್ರಾಮದ ಅಭಿವೃದ್ಧಿಗೆ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಕಾಮಗಾರಿಗಳನ್ನು ಕೈಗೊಂಡ ಸಂದರ್ಭ ಫಲಾನುಭವಿಗಳು ಕಾಳಜಿ ತೋರಬೇಕಿದೆ ಎಂದು ಮನವಿ ಮಾಡಿದರು.


ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಆದ್ಯತೆ ಮೇರೆಗೆ ಮಾತ್ರ ಅಗತ್ಯ ಕಾಮಗಾರಿಗಳನ್ನು ಸೇರ್ಪಡೆ ಮಾಡಲಾಗುವುದು. ಅಗತ್ಯ ಬೇಡಿಕೆಗಳನ್ನು ಕ್ರಿಯಾಯೋಜನೆಗೆ ಸೇರ್ಪಡೆ ಮಾಡಲಾಗುವುದು. ಉದ್ಯೋಗ ಖಾತ್ರಿ ಯೋಜನೆಯ ಸೌಲಭ್ಯ ಪಡೆದು ಸಮುದಾಯ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಂಡು ಅಭಿವೃದ್ಧಿ ಚಿಂತನೆ ಹೊಂದುವಂತೆ ಗ್ರಾಮಸ್ಥರಿಗೆ ವಿಶ್ವ ಕಿವಿಮಾತು ಹೇಳಿದರು.


ಹೆದ್ದಾರಿಗಳಲ್ಲಿ ಬೀಡಾಡಿ ದನಗಳ ಹಾವಳಿಯಿಂದ ಪ್ರಾಣಹಾನಿ ಸಂಭವಿಸುತ್ತಿದ್ದು, ಜಾನುವಾರುಗಳ ಮಾಲೀಕರು ಈ ಬಗ್ಗೆ ಅಗತ್ಯ ಗಮನ ಹರಿಸುವಂತೆ ವಿಶ್ವ ವಿಶೇಷ ಮನವಿ ಮಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಗ್ರಾಮಪಂಚಾಯಿತಿ ಪಿಡಿಒ ಕಲ್ಪ, ಉದ್ಯೋಗ ಖಾತ್ರಿ ಯೋಜನೆಯಡಿ ವಿವಿಧ ಸವಲತ್ತುಗಳ ಹಂಚಿಕೆ, ಸಮುದಾಯದತ್ತ ಕಾಮಗಾರಿಗಳನ್ನು ಕೈಗೊಳ್ಳುವ ಸಂಬಂಧ ಗ್ರಾಮಸ್ಥರು ತಮ್ಮ ಅಹವಾಲು, ಬೇಡಿಕೆಗಳನ್ನು ಸಲ್ಲಿಸುವ ಮೂಲಕ ಸಭೆಯ ಸದುಪಯೋಗ ಪಡೆದುಕೊಳ್ಳುವಂತೆ ಗ್ರಾಮಸ್ಥರಿಗೆ ತಿಳಿಸಿದರು.
ಸಭೆಯಲ್ಲಿ ಹಾಜರಿದ್ದ ಉದ್ಯೋಗ ಖಾತ್ರಿ ಯೋಜನೆಯ ಅಭಿಯಂತರ ಕಾರ್ತಿಕ್ ಮಾತನಾಡಿ, ಯೋಜನೆಯಡಿ ಕೈಗೊಳ್ಳಬಹುದಾದ ಕಾಮಗಾರಿಗಳು, ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ಯೋಜನೆಗೆ ಸಂಬಂಧಿಸಿದ ಕುಂದುಕೊರತೆಗಳ ಬಗ್ಗೆ ಗ್ರಾಮಸ್ಥರು ಸಭೆಯ ಗಮನಕ್ಕೆ ತಂದರು. ಗ್ರಾಪಂ ಉಪಾಧ್ಯಕ್ಷೆ ಸಮೀರ, ಸದಸ್ಯರಾದ ಆರ್.ಕೆ.ಚಂದ್ರ, ಲೋಕನಾಥ್, ರಕ್ಷಿತ್ ಕುಸುಮ, ಜಾಜಿ, ಗಿರಿಜಮ್ಮ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net